ಸ್ಮೃತಿ ಮಂಧನಾ ಸ್ಪೋಟಕ ಬ್ಯಾಟಿಂಗ್, ಇಂಗ್ಲೆಂಡ್ ಮಣಿಸಿ ಸರಣಿ ಸಮಬಲ ಮಾಡಿದ ಭಾರತ

By Naveen KodaseFirst Published Sep 14, 2022, 11:19 AM IST
Highlights

ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯ ಗೆದ್ದ ಹರ್ಮನ್‌ಪ್ರೀತ್ ಕೌರ್ ಪಡೆ
ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ಸ್ಮೃತಿ ಮಂಧನಾ
ಮೂರು ಪಂದ್ಯಗಳ ಟಿ20 ಸರಣಿ 1-1ರ ಸಮಬಲ

ಡರ್ಬಿ(ಸೆ.14): ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ ಬಾರಿಸಿದ ಆಕರ್ಷಕ ಅಜೇಯ ಅರ್ಧಶತಕ(79)ದ ನೆರವಿನಿಂದ ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು 8 ವಿಕೆಟ್‌ಗಳ ಜಯ ಸಾಧಿಸಿದೆ. ಆತಿಥೇಯ ಇಂಗ್ಲೆಂಡ್ ನೀಡಿದ್ದ 143 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ತಂಡವು ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ.   

ಇಲ್ಲಿನ ಕೌಂಟಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 6 ವಿಕೆಟ್ ಕಳೆದುಕೊಂಡು 142 ರನ್ ಬಾರಿಸಿತ್ತು. ಇಂಗ್ಲೆಂಡ್ ಪರ 17 ವರ್ಷದ ಫ್ರೆಯಾ ಕೆಂಪ್, ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ಅತಿಕಿರಿಯ ಆಟಗಾರ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಇನ್ನು ಇಂಗ್ಲೆಂಡ್ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಕೇವಲ 17ನೇ ಓವರ್‌ನಲ್ಲೇ ಗೆಲುವಿನ ನಗೆ ಬೀರಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ 36 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಚಚ್ಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಘಾತಕಾರಿ ಸೋಲು ಕಂಡಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡವು, ಎರಡನೇ ಪಂದ್ಯದಲ್ಲಿ ತಾನು ಮಾಡಿದ ತಪ್ಪನ್ನು ತಿದ್ದಿಕೊಂಡು ಗೆಲುವಿನತ್ತ ದಿಟ್ಟ ಹೆಜ್ಜೆಯಿಟ್ಟಿತು. ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಜೋಡಿ ಮೊದಲ ವಿಕೆಟ್‌ಗೆ 55 ರನ್‌ಗಳ ಜತೆಯಾಟ ನಿಭಾಯಿಸಿತು. ಶಫಾಲಿ ವರ್ಮಾ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಹೇಮಲತಾ ಕೂಡಾ ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ಆನಂತರ ನಾಯಕ ಹರ್ಮನ್‌ಪ್ರೀತ್ ಕೌರ್(29) ಜತೆಗೂಡಿ ಮಂಧನಾ, ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಗೆಲುವಿನ ದಡ ಸೇರಿಸಿದರು.

A Player of the Match performance from Smriti Mandhana helped India level the series with an emphatic victory over England. pic.twitter.com/lSyqQZmj23

— ICC (@ICC)

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಸ್ಪಿನ್ನರ್ ಸ್ನೆಹ್ ರಾಣಾ ಮಾರಕ ದಾಳಿ ಮೂಲಕ ಶಾಕ್ ನೀಡಿದರು. ಇಂಗ್ಲೆಂಡ್ ತಂಡವು 16 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳನ್ನು ಪೆವಿಲಿಯನ್‌ ಸೇರಿದ್ದರು. ಭಾರತ ಪರ ಸ್ನೆಹ್ ರಾಣಾ ಕೇವಲ 24 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ರೇಣುಕಾ ಸಿಂಗ್ ಹಾಗೂ ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ENG vs IND ದ್ವಿತೀಯ ಪಂದ್ಯದಲ್ಲಿ ಬೌನ್ಸ್ ಬ್ಯಾಕ್, ವಿಶ್ವಾಸ ವ್ಯಕ್ತಪಡಿಸಿದ ಸ್ಮೃತಿ ಮಂದನಾ!

ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 9  ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಇನ್ನು ಎರಡನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು 8 ವಿಕೆಟ್‌ಗಳ ಅಂತರದ ಜಯ ಸಾಧಿಸಿದೆ. ಇನ್ನು ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯವು ಸೆಪ್ಟೆಂಬರ್ 15ರಂದು ಬ್ರಿಸ್ಟೊಲ್‌ನಲ್ಲಿ ನಡೆಯಲಿದೆ.

click me!