2019ರ ಏಕದಿನ ವಿಶ್ವಕಪ್’ಗೆ ಭಾರತ ತಂಡದ ತಯಾರಿ ಹೇಗಿದೆ..?

By Suvarna Web DeskFirst Published Feb 9, 2018, 12:00 PM IST
Highlights

2019ರ ಏಕದಿನ ವಿಶ್ವಕಪ್‌ಗೆ ಭಾರತ ತಂಡ ತಯಾರಿ ಆರಂಭಿಸಿದ್ದು, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಕೆಲ ಪ್ರಮುಖ ಆಟಗಾರರನ್ನು ಪರೀಕ್ಷಿಸುತ್ತಿದೆ. ತಂಡಕ್ಕೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಇನ್ನೂ ಸೂಕ್ತ ಆಟಗಾರರು ಸಿಗದಿದ್ದರೂ, ಬೌಲಿಂಗ್ ಪಡೆ ಹೆಚ್ಚೂ ಕಡಿಮೆ ಸಿದ್ಧಗೊಂಡಂತಿದೆ.

ಕೇಪ್‌ಟೌನ್: 2019ರ ಏಕದಿನ ವಿಶ್ವಕಪ್‌ಗೆ ಭಾರತ ತಂಡ ತಯಾರಿ ಆರಂಭಿಸಿದ್ದು, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಕೆಲ ಪ್ರಮುಖ ಆಟಗಾರರನ್ನು ಪರೀಕ್ಷಿಸುತ್ತಿದೆ. ತಂಡಕ್ಕೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಇನ್ನೂ ಸೂಕ್ತ ಆಟಗಾರರು ಸಿಗದಿದ್ದರೂ, ಬೌಲಿಂಗ್ ಪಡೆ ಹೆಚ್ಚೂ ಕಡಿಮೆ ಸಿದ್ಧಗೊಂಡಂತಿದೆ.

ಅದರಲ್ಲೂ ತಂಡಕ್ಕೆ ವಿದೇಶಿ ಪಿಚ್‌ಗಳಲ್ಲಿ ವಿಕೆಟ್ ಕಬಳಿಸಿ, ಪಂದ್ಯದ ಗತಿ ಬದಲಿಸಲ್ಲ ಸ್ಪಿನ್ನರ್‌ಗಳು ಸಿಕ್ಕಿದ್ದಾರೆ. ಆಫ್ರಿಕಾ ವಿರುದ್ಧ ಸರಣಿಯ ಮೊದಲ ಮೂರು ಪಂದ್ಯಗಳಲ್ಲೇ ಮಣಿಕಟ್ಟು ಸ್ಪಿನ್ನರ್‌ಗಳಾದ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್, ತಾವು ಎಂತದ್ದೇ ಸವಾಲಿಗೂ ಸಿದ್ಧ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಈ ಯುವ ಸ್ಪಿನ್ ಜೋಡಿ 3 ಪಂದ್ಯಗಳಿಂದ ಒಟ್ಟು 21 ವಿಕೆಟ್ ಕಬಳಿಸಿದೆ. ಇಬ್ಬರ ಸರಾಸರಿ ಎಕಾನಮಿ ರೇಟ್ ಕೇವಲ 3.63. ವಿಕೆಟ್ ಕಬಳಿಸುವುದು ಮಾತ್ರವಲ್ಲ, ರನ್ ನಿಯಂತ್ರಿಸುವುದಲ್ಲೂ ಇವರಿಬ್ಬರು ಯಶಸ್ವಿಯಾಗುತ್ತಿದ್ದಾರೆ.

ಪ್ರತಿ 15 ಎಸೆತಗಳಿಗೆ ವಿಕೆಟ್ ಉರುಳಿಸುತ್ತಿರುವ ಈ ಜೋಡಿಯೇ 2019ರ ಐಸಿಸಿ ಏಕದಿನ ವಿಶ್ವಕಪ್‌ಗೆ ಕರೆದೊಯ್ಯಲು ನಿರ್ಧರಿಸಿರುವುದಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸುಳಿವು ನೀಡಿದ್ದಾರೆ. ಕೇಪ್ ಟೌನ್‌ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ ‘ಕುಲ್ದೀಪ್ ಹಾಗೂ ಚಹಲ್ ಇಬ್ಬರೂ ತಮ್ಮ ಆಯ್ಕೆಯನ್ನು ಪ್ರತಿ ಪಂದ್ಯದಲ್ಲೂ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇಂತಹ ವಾತಾವರಣದಲ್ಲೂ ನಿರಾಯಾಸವಾಗಿ ವಿಕೆಟ್ ಕಬಳಿಸುವುದನ್ನು ನಾವು ಈ ಹಿಂದೆ ನೋಡಿರಲಿಲ್ಲ. ಈ ಯುವ ಸ್ಪಿನ್ ಜೋಡಿ, ತನ್ನ ಸ್ಪಿನ್ ಮೋಡಿಗೆ ಎದುರಾಳಿಯನ್ನು ಕುಣಿಸುತ್ತಿರುವುದು ನಿಜಕ್ಕೂ ನಂಬಲಸಾಧ್ಯವಾಗಿದೆ. ಮುಂದಿನ ವಿಶ್ವಕಪ್ ಇಂಗ್ಲೆಂಡ್‌ನಲ್ಲಿ ನಡೆಯಲಿದ್ದು, ಅಲ್ಲೂ ಇದೇ ರೀತಿ ವಾತಾವರಣ ಇರಲಿದೆ. ಈ ಇಬ್ಬರೇ ನಮ್ಮ ತಂಡದ ಅತ್ಯುತ್ತಮ ಪ್ರದರ್ಶನಕ್ಕೆ ಕಾರಣರಾಗಬಹುದು’ ಎಂದರು.

click me!