ಚಿನ್ನಕ್ಕೆ ಮುತ್ತಿಟ್ಟ ಮೇರಿ ಕೋಮ್‌

By Web DeskFirst Published Jul 29, 2019, 9:57 AM IST
Highlights

ಇಂಡೋನೇಷ್ಯಾದ ಲಬುವಾನ್‌ ಬಾಜೋದಲ್ಲಿ ನಡೆದ 23ನೇ ಪ್ರೆಸಿಡೆಂಟ್‌ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಭಾರತೀಯ ಬಾಕ್ಸರ್ ಗಳು ಚಿನ್ನದ ಬೇಟೆಯಾಡಿದ್ದು, 9 ಪದಕಗಳನ್ನು ಬಾಚಿಕೊಂಡಿದ್ದಾರೆ. ಮೇರಿ ಕೋಮ್ ಸೇರಿದಂತೆ ಹಲವರು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ(ಜು.29): 6 ಬಾರಿ ವಿಶ್ವ ಚಾಂಪಿಯನ್‌ ಬಾಕ್ಸರ್‌ ಭಾರತದ ಮೇರಿ ಕೋಮ್‌, ಇಂಡೋನೇಷ್ಯಾದ ಲಬುವಾನ್‌ ಬಾಜೋದಲ್ಲಿ ನಡೆದ 23ನೇ ಪ್ರೆಸಿಡೆಂಟ್‌ ಕಪ್‌ ಬಾಕ್ಸಿಂಗ್‌ ಟೂರ್ನಿಯ ಮಹಿಳಾ ವಿಭಾಗದ ಫೈನಲ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಮಹಿಳೆಯರ 51 ಕೆ.ಜಿ. ಸ್ಪರ್ಧೆಯಲ್ಲಿ ಮೇರಿ, ಆಸ್ಪ್ರೇಲಿಯಾದ ಏಪ್ರಿಲ್‌ ಫ್ರಾಂಕ್ಸ್‌ ವಿರುದ್ಧ 5-0 ಬೌಟ್‌ಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಭಾನುವಾರ ಮುಕ್ತಾಯವಾದ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು 9 ಪದಕ ಜಯಿಸಿದ್ದಾರೆ. ಇದರಲ್ಲಿ 7 ಚಿನ್ನ ಹಾಗೂ 2 ಬೆಳ್ಳಿ ಪದಕ ಸೇರಿದೆ.

36 ವರ್ಷ ವಯಸ್ಸಿನ ಭಾರತದ ಮೇರಿ ಕೋಮ್‌, 2 ತಿಂಗಳ ಹಿಂದಷ್ಟೇ ಕಳೆದ ಮೇ ನಲ್ಲಿ ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದರು. ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಹಿಂದೆ ಸರಿದಿದ್ದರು. ಥಾಯ್ಲೆಂಡ್‌ನಲ್ಲಿ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ನಡೆಸಲಾಗಿತ್ತು. ಪ್ರೆಸಿಡೆಂಟ್‌ ಕಪ್‌ ಟೂರ್ನಿಯ ಮೊದಲ ಸುತ್ತಲ್ಲಿ ಮೇರಿ, ವಿಯೆಟ್ನಾಂನ ಅನ್‌ ವೊ ಥಿ ಕಿಮ್‌ ವಿರುದ್ಧ 3-2 ಬೌಟ್‌ಗಳಲ್ಲಿ ಪ್ರಯಾಸದ ಗೆಲುವು ಪಡೆದಿದ್ದರು. ಆ ಬಳಿಕ ಎಚ್ಚೆತ್ತುಕೊಂಡ ಮೇರಿ ಅದ್ಭುತ ಪ್ರದರ್ಶನದೊಂದಿಗೆ ಚಿನ್ನ ಜಯಿಸುವಲ್ಲಿ ಯಶಸ್ವಿಯಾದರು.

ಇಂಡಿಯಾ ಓಪನ್‌ ಬಾಕ್ಸಿಂಗ್‌: ಚಿನ್ನಕ್ಕೆ ಮುತ್ತಿಟ್ಟ ಮೇರಿ, ಸರಿತಾ

ಕಳೆದ ವರ್ಷ ಮೇರಿ ಕೋಮ್‌ 6ನೇ ವಿಶ್ವ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು. ಸೆಪ್ಟೆಂಬರ್‌ 7 ರಿಂದ 21 ರವರೆಗೆ ರಷ್ಯಾದ ಎಕ್ಟರೇನ್‌ಬರ್ಗ್‌ನಲ್ಲಿ 2019ರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ಶಿಪ್‌ ನಡೆಸಲಾಗುವುದು. ಈ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸುವ ಮೂಲಕ ಮೇರಿ ಕೋಮ್‌ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ಯೋಚನೆಯಲ್ಲಿದ್ದಾರೆ.

ಫೈನಲ್‌ ಸ್ಪರ್ಧೆಯಲ್ಲಿ ಮೇರಿ ಕೋಮ್‌ ಸೇರಿದಂತೆ ಭಾರತದ ಮಹಿಳಾ ಬಾಕ್ಸರ್‌ಗಳು ಅದ್ಭುತ ಪ್ರದರ್ಶನ ತೋರಿದರು. ಮಹಿಳಾ ಬಾಕ್ಸರ್‌ಗಳು 4 ಚಿನ್ನ ಗೆದ್ದು ದಾಖಲೆ ಬರೆದರು. ಪುರುಷರ ವಿಭಾಗದಲ್ಲಿ 3 ಚಿನ್ನ 2 ಬೆಳ್ಳಿ ಪದಕ ಮೂಡಿದವು. ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಚಾಂಪಿಯನ್‌ಶಿಪ್‌ನ ಕೊನೆಯಲ್ಲಿ ಭಾರತ ‘ಉತ್ತಮ ತಂಡ’ ಪ್ರಶಸ್ತಿ ಜಯಿಸಿತು.

ಮೋನಿಕಾ, ಜಮುನಾಗೆ ಚಿನ್ನ

ಭಾರತದ ಪುರುಷ ಬಾಕ್ಸರ್‌ಗಳಿಗಿಂತ ಮಹಿಳಾ ಬಾಕ್ಸರ್‌ಗಳು ಪ್ರದರ್ಶನ ಉತ್ತಮವಾಗಿತ್ತು. 60 ಕೆ.ಜಿ. ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ ಭಾರತದ ಸಿಮ್ರನ್‌ ಜಿತ್‌ ಕೌರ್‌, ಏಷ್ಯನ್‌ ಗೇಮ್ಸ್‌ ಕಂಚು ವಿಜೇತೆ ಇಂಡೋನೇಷ್ಯಾದ ಹಸನಹ್‌ ಹುಸ್ವಂತ್‌ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಪಡೆದರು. ಅಸ್ಸಾಂ ಮೂಲದ ಜಮುನಾ ಬೊರೊ (54 ಕೆ.ಜಿ.) ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ ಇಟಲಿಯ ಅನುಭವಿ ಬಾಕ್ಸರ್‌ ಗಿಲಿಯಾ ಲಮಾಗ್ನಾ ಎದುರು 5-0 ಬೌಟ್‌ಗಳಲ್ಲಿ ಜಯಭೇರಿ ಬಾರಿಸಿ ಚಿನ್ನಕ್ಕೆ ಮುತ್ತಿಟ್ಟರು.

48 ಕೆ.ಜಿ. ವಿಭಾಗದಲ್ಲಿ ಯುವ ಬಾಕ್ಸರ್‌ ಮೋನಿಕಾ, ಸ್ಥಳೀಯ ಬಾಕ್ಸರ್‌ ಮೇಲೆ ಪ್ರಹಾರ ನಡೆಸಿದರು. ಮೋನಿಕಾ ಅವರ ಪಂಚ್‌ಗಳಿಗೆ ಉತ್ತರಿಸಲಾಗದ ಸ್ಥಳೀಯ ಬಾಕ್ಸರ್‌ ಸೋಲೊಪ್ಪಿಕೊಂಡರು. ಮೋನಿಕಾ ಕೂಡ ಚಿನ್ನ ಗೆದ್ದರು. ಪುರುಷರ ವಿಭಾಗದಲ್ಲಿ 2017ರ ಊಲನ್‌ಬಾತರ್‌ ಕಪ್‌ ಚಿನ್ನ ವಿಜೇತ ಅಂಕುಶ್‌ ದಹಿಯಾ, ನೀರಜ್‌ ಸ್ವಾಮಿ, ಅನಂತ ಪ್ರಹ್ನಾದ ಚಿನ್ನದ ಪದಕ ಜಯಿಸಿದರು.

ಗೌರವ್‌ ಬಿದುರಿಗೆ ಸೋಲು:

ಮಾಜಿ ವಿಶ್ವ ಚಾಂಪಿಯನ್‌ ಕಂಚು ವಿಜೇತ ತಾರಾ ಬಾಕ್ಸರ್‌ ಗೌರವ್‌ ಬಿದುರಿ, ಪುರುಷರ 56 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಬಿದುರಿ, ಇಂಡೋನೇಷ್ಯಾದ ಮಂಡಜಿಯೆ ಜಿಲ್‌ ವಿರುದ್ಧ 2-3 ಬೌಟ್‌ಗಳಲ್ಲಿ ಪರಾಭವ ಹೊಂದುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟರು. 2018ರ ಇಂಡಿಯಾ ಓಪನ್‌ ಬೆಳ್ಳಿ ವಿಜೇತ ದಿನೇಶ್‌ ದಗಾರ್‌ ಕೂಡ ಫೈನಲ್‌ನಲ್ಲಿ ಸೋಲುಂಡು ಬೆಳ್ಳಿ ಪದಕ ಗೆದ್ದರು.

 

click me!