ಭಾರತದ ರಿಯೊ ಅಥ್ಲೀಟ್'ಗಳ ಮೇಲೆ ಐಎಎಎಫ್ ಶಂಕೆ

By Internet DeskFirst Published Sep 24, 2016, 3:47 PM IST
Highlights

ಬೆಂಗಳೂರು(ಸೆ.24): ಇತ್ತೀಚೇಗಷ್ಟೇ ಮುಕ್ತಾಯ ಕಂಡ ರಿಯೊ ಒಲಿಂಪಿಕ್ಸ್‌ ಕೂಟದಲ್ಲಿ ಪಾಲ್ಗೊಳ್ಳಲು ಭಾರತದ ಕೆಲವು ಅಥ್ಲೀಟ್‌ಗಳ ಸಾಧನೆಯನ್ನು ನಕಲಿಗೊಳಿಸಿರುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ (ಐಎಎಎಫ್‌) ಅನುಮಾನ ವ್ಯಕ್ತಪಡಿಸಿದೆ.

ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ ಅಥ್ಲೀಟ್‌ಗಳ ಪ್ರದರ್ಶನಾ ಸಾಮರ್ಥ್ಯವು ಅನುಮಾನ ಮೂಡಿಸುತ್ತಿವೆ ಎಂದು ಐಎಎಎಫ್‌ನ ಎಲ್ಲಾ ರಾಷ್ಟ್ರದ ಯೋಜನೆಯ ರಾಷ್ಟ್ರೀಯ ದಾಖಲೆಗಳ ಅಂಕಿ ತಜ್ಞ ಹೆನ್ರಿಚ್‌ ಹುಬ್ಬೆಲಿಂಗ್‌ ನಡೆಸಿರುವ ಅಧ್ಯಯನವು ತಿಳಿಸಿದೆ ಎಂದು ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿದೆ. ಅವರ ಪಟ್ಟಿಯಲ್ಲಿ ಭಾರತದ ತ್ರಿವಿಧ ಜಿಗಿತಗಾರ ರೆಂಜಿತ್‌ ಮಹೇಶ್ವರಿ, ಉದ್ದ ಜಿಗಿತಗಾರ ಅಂಕಿತ್‌ ಶರ್ಮ, ವೇಗದ ಓಟಗಾರ್ತಿ ದ್ಯುತಿ ಚಾಂದ್‌ ಮತ್ತು ಸ್ರಬಾನಿ ನಂದ ಕಾಣಿಸಿಕೊಂಡಿದ್ದಾರೆ. ಇನ್ನು ಭಾರತೀಯರಲ್ಲದೇ ಆಲ್ಬೇನಿಯಾ, ಅರ್ಮೇನಿಯಾ, ಕಜಕಸ್ತಾನ, ಕಿರ್ಗಿಸ್ತಾನ ಮತ್ತು ಉಜ್ಬೇಕಿಸ್ತಾನ ರಾಷ್ಟ್ರಗಳಿಂದಲೂ ನಕಲಿ ದಾಖಲೆ ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಹೆನ್ರಿಚ್‌ ಹೇಳಿದ್ದಾರೆ.

ಅಥ್ಲೀಟ್‌ಗಳ ಪ್ರದರ್ಶನದಲ್ಲಿ ವ್ಯತ್ಯಾಸ

ಅಂದಹಾಗೆ ಜುಲೈ-11ರಂದು ಬೆಂಗಳೂರಿನಲ್ಲಿ ನಡೆದಿದ್ದ ಅರ್ಹತಾ ಸ್ಪರ್ಧೆಯಲ್ಲಿ ರೆಂಜಿತ್‌ ಮಹೇಶ್ವರಿ 17.30 ಮೀ, ಜಿಗಿದರೆ, ರಿಯೊದಲ್ಲಿ 16.13 ಮೀ. ಜಿಗಿದಿದ್ದರು. ಅಂತೆಯೇ ಜೂನ್‌ 27ರಂದು ಕಜಕ್‌ಸ್ತಾನದ ಅಲ್ಮಾಟಿಯಲ್ಲಿ ನಡೆದಿದ್ದ ಪುರುಷರ ಉದ್ದ ಜಿಗಿತದ ಅರ್ಹತಾ ಸ್ಪರ್ಧೆಯಲ್ಲಿ 8.19 ಮೀ. ಜಿಗಿದಿದ್ದ ಅಂಕಿತ್‌ ಶರ್ಮಾ, ರಿಯೊದಲ್ಲಿ 7.67ಮೀ ಜಿಗಿದಿದ್ದರು. ಇನ್ನು ದ್ಯುತಿ ಚಾಂದ್‌ ಅಲ್ಮಾಟಿಯ ಅರ್ಹತಾ ಸುತ್ತಿನಲ್ಲಿ 100 ಮೀ. ಓಟವನ್ನು 11.24 ಸೆ.ಗಳಲ್ಲಿ ಪೂರೈಸಿದರೆ, ರಿಯೊದಲ್ಲಿ 11.69 ಸೆ.ಗಳನ್ನು ತೆಗೆದುಕೊಂಡಿದ್ದರು. ಇದೇ ಅರ್ಹತಾ ಕೂಟದ ಮಹಿಳೆಯರ 200 ಮೀ. ಓಟವನ್ನು ಸ್ರಬಾನಿ ನಂದಾ 23.07 ಸೆ. ಕ್ರಮಿಸಿದರೆ, ರಿಯೊದಲ್ಲಿ 23.58ಸೆ.ಗಳಲ್ಲಿ ಗುರಿ ತಲುಪಿದ್ದರು.

click me!