ಅಭ್ಯಾಸಕ್ಕೆ ರಜೆ ಇಲ್ಲ, ತರಬೇತಿಯೂ ಇಲ್ಲ... ಚಿನ್ನ ಗೆಲ್ಲೋದು ಹೇಗೆ?

By Suvarna Web DeskFirst Published Jun 12, 2017, 3:30 PM IST
Highlights

ಮೊಳಕಾಲ್ಮೂರು ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿರುವ ಪ್ರಸನ್ನ ಅವರಿಗೆ ಈ ರೀತಿ ತೊಂದರೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ (2106) ನಡೆದ ಪ್ಯಾರಾಲಿಂಪಿಕ್ಸ್‌ ವೇಳೆಯಲ್ಲೂ ಇದೇ ರೀತಿ ಸಮಸ್ಯೆಯಾಗಿತ್ತು. ತರಬೇತಿ ನಡೆಸಲು ವೇತನ ಸಹಿತ ರಜೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದ ಇಲಾಖೆಯ ಅಧಿಕಾರಿಗಳು, ರಜೆ ಮೇಲೆ ತೆರಳಿದ ಕಾರಣ ಅವರ ಅರ್ನ್ಡ್ ಲೀವ್‌'ಗಳನ್ನೂ ಕಡಿತಗೊಳಿಸಿದ್ದರು.

ಬೆಂಗಳೂರು: "ನಾನು ಈ ಬಾರಿಯ ವಿಶ್ವ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌'ಶಿಪ್‌ಗೆ ಆಯ್ಕೆಯಾಗಿರುವ ಏಕೈಕ ಕನ್ನಡಿಗ. ಜಾವೆಲಿನ್‌ ಥ್ರೋ (ಭರ್ಜಿ ಎಸೆತ) ದೇಶವನ್ನು ಪ್ರತಿನಿಧಿಸುತ್ತಿರುವ ಮೂವರು ಅಥ್ಲೀಟ್‌ಗಳಲ್ಲಿ ನಾನೂ ಒಬ್ಬ. ಆದರೆ, ವಿಪರ್ಯಾಸವೆಂದರೆ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಅಭ್ಯಾಸ ನಡೆಸಲು ನನಗೆ ಕರ್ತವ್ಯದಿಂದ ಬಿಡುವು ದೊರೆಯುತ್ತಿಲ್ಲ. ಯಾಕೆಂದರೆ, ಅಭ್ಯಾಸಕ್ಕೆಂದು ರಜೆ ನೀಡಲು ಕಾನೂನಿನ ಅಡಿ ಅವಕಾಶವಿಲ್ಲ. ಹೀಗಾದರೆ, ನಾನು ದೇಶಕ್ಕೆ ಪದಕ ತರುವುದು ಹೇಗೆ...?"
- ಇದು ಶಿಕ್ಷಣ ಸಂಯೋಜಕರಾಗಿ ಸರ್ಕಾರಿ ಉದ್ಯೋಗದಲ್ಲಿರುವ ಕರ್ನಾಟಕದ ಅಂಗವಿಕಲ ಕ್ರೀಡಾಪಟು ಆರ್‌.ಟಿ.ಪ್ರಸನ್ನ ಕುಮಾರ್‌ ನೋವಿನ ನುಡಿಗಳು.

ಜುಲೈ 14ರಿಂದ ಲಂಡನ್‌'ನಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ ನಡೆಯಲಿದ್ದು, ಭಾರತದಿಂದ 33 ಅಥ್ಲೀಟ್‌'ಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಕ್ರೀಡಾಪಟು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯ ಆರ್‌.ಟಿ.ಪ್ರಸನ್ನ ಕುಮಾರ್‌. ಈ ಪ್ರತಿಭಾವಂತ ಕ್ರೀಡಾಪಟು ತಮ್ಮ ಸಂಕಷ್ಟಗಳನ್ನು ‘ಕನ್ನಡಪ್ರಭ'ದೊಂದಿಗೆ ಹಂಚಿಕೊಂಡಿದ್ದಾರೆ.

ಅವರಿಗೆ ಅಡ್ಡಿಯಾಗಿರುವುದು ರಾಜ್ಯ ಸರ್ಕಾರದ ನಿಲುವು ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ನಿಯಮ. ವಿಶ್ವ ಚಾಂಪಿಯನ್‌'ಶಿಪ್‌ಗೆ ಆಯ್ಕೆಯಾಗಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉದ್ಯೋಗಿಯಾಗಿರುವ ಕಾರಣ ಪ್ರಸನ್ನ ಅವರಿಗೆ ಅಭ್ಯಾಸ ನಡೆಸಲು ಸಂಬಳ ಸಹಿತ ರಜೆ ಮಂಜೂರು ಆಗುತ್ತಿಲ್ಲ. ಇದರಿಂದಾಗಿ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ನಡೆಯುತ್ತಿರುವ ಶಿಬಿರದಲ್ಲೂ ಪಾಲ್ಗೊಳ್ಳಲಾಗದೆ, ವೃತ್ತಿಪರ ತರಬೇತಿಯಿಂದ ದೂರವಾಗಿದ್ದಾರೆ. ಸರ್ಕಾರದ ಈ ನಿಲುವಿನಿಂದಾಗಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಿ ಇಂದು ಸೌಲಭ್ಯಗಳಿಲ್ಲದ ತಮ್ಮ ಹುಟ್ಟೂರಿನಲ್ಲೇ ಅಭ್ಯಾಸ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಇದೇ ಮೊದಲಲ್ಲ: ಮೊಳಕಾಲ್ಮೂರು ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿರುವ ಪ್ರಸನ್ನ ಅವರಿಗೆ ಈ ರೀತಿ ತೊಂದರೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ (2106) ನಡೆದ ಪ್ಯಾರಾಲಿಂಪಿಕ್ಸ್‌ ವೇಳೆಯಲ್ಲೂ ಇದೇ ರೀತಿ ಸಮಸ್ಯೆಯಾಗಿತ್ತು. ತರಬೇತಿ ನಡೆಸಲು ವೇತನ ಸಹಿತ ರಜೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದ ಇಲಾಖೆಯ ಅಧಿಕಾರಿಗಳು, ರಜೆ ಮೇಲೆ ತೆರಳಿದ ಕಾರಣ ಅವರ ಅರ್ನ್ಡ್ ಲೀವ್‌'ಗಳನ್ನೂ ಕಡಿತಗೊಳಿಸಿದ್ದರು. ಈ ವಿಷಯವನ್ನು ಶಿಕ್ಷಣ ಇಲಾಖೆಯ ಅಂದಿನ ಆಯುಕ್ತರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ.

ಬಳಿಕ ಸ್ನೇಹಿತರ ಸಹಾಯದಿಂದ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವತ್ಥ ನಾರಾಯಣ ಅವರನ್ನು ಸಂಪರ್ಕಿಸಿದ ಪ್ರಸನ್ನ ತಮ್ಮ ಅಳಲು ತೋಡಿಕೊಂಡಿದ್ದರು. ಆ ವೇಳೆ ಶಾಸಕರು ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌, ಪ್ರಸನ್ನ ಅವರದು ವಿಶೇಷ ಪ್ರಕರಣ ಎಂದು ಪರಿಗಣಿಸಿ ರಜೆ ಹಾಗೂ ಸಂಬಳ ನೀಡಲು ಲಿಖಿತ ಆದೇಶ ನೀಡಿದ್ದರು. ಬಳಿಕ ರಜೆ ಲಭ್ಯವಾಗಿತ್ತು. 

ಕಾರ್ಯರೂಪಕ್ಕೆ ಬಾರದ ಆದೇಶ: ಸಚಿವರು, ಪ್ರಸನ್ನ ಕುಮಾರ್‌ ರಜೆ ಪಡೆಯಲು ಅಡ್ಡಿಯಾಗಿದ್ದ ಕರ್ನಾಟಕ ಸಿವಿಲ್‌ ಸರ್ವಿಸ್ ನಿಯಮ (ಕೆಸಿಎಸ್‌'ಆರ್‌)ಕ್ಕೂ ತಿದ್ದುಪಡಿ ತಂದು, ಪ್ಯಾರಾಲಿಂಪಿಕ್ಸ್‌ ಫೆಡರೇಷನ್‌ ಅನ್ನು ಸೇರ್ಪಡೆಗೊಳಿಸಲು ಅದೇ ಲಿಖಿತ ರೂಪದ ಆದೇಶಪತ್ರದಲ್ಲಿ ಸೂಚಿಸಿದ್ದರು. ಆದರೆ, ಸಚಿವ ಈ ಆದೇಶ ಹೊರಬಿದ್ದು ವರ್ಷವಾದರೂ ಯಾವುದೇ ಪರಿಣಾಮ ಕಂಡಿಲ್ಲ. ಈ ಕುರಿತು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಿರ್ಲಕ್ಷ್ಯದಿಂದ ಉತ್ತರ ನೀಡುತ್ತಾರೆ. ನಿಯಮ ತಿದ್ದುಪಡಿ ಅಷ್ಟುಸುಲಭವಲ್ಲ ಇದಕ್ಕೆ ಬೇಕಾದ ಪೂರಕ ಮಾಹಿತಿ ನೀವೇ ತಂದುಕೊಡಿ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಪ್ರಸನ್ನ ಕುಮಾರ್‌.

ಸರ್ಕಾರಿ ಅಧಿಕಾರಿಗಳ ಈ ವರ್ತನೆ ಸಾಕಷ್ಟು ಬೇಸರ ಮೂಡಿಸಿದೆ. ಇದೇ ಕಾರಣದಿಂದ 2004ರಲ್ಲಿ ಅಥೆನ್ಸ್‌'ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದಾದ ಬಳಿಕ ಕ್ರೀಡೆಯಿಂದಲೇ ದೂರ ಉಳಿದಿದ್ದೆ. 2012ರಲ್ಲಿ ಹೈಜಂಪ್‌ ಪಟು ಗಿರೀಶ್‌ ಪದಕ ಗೆದ್ದ ಬಳಿಕ ಹೊಸ ಆಶಾಕಿರಣ ಮೂಡಿತು. ಪರಿಶ್ರಮ ಮುಂದುವರಿಸಿದೆ. ಆದರೆ, 2016ರ ಪ್ಯಾರಾಲಿಂಪಿಕ್ಸ್‌ ವೇಳೆಯೂ ಅಭ್ಯಾಸಕ್ಕೆ ತೊಂದರೆ ಆಗಿತ್ತು. ಇದೀಗ ವಿಶ್ವ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌'ಶಿಪ್‌ಗೆ ಆಯ್ಕೆಯಾಗಿದ್ದು ಅದೇ ಸಮಸ್ಯೆ ಎದುರಾಗಿದೆ ಎಂದು ನೊಂದು ನುಡಿದರು. 

ಆಗದ ತಿದ್ದುಪಡಿ!: ಕರ್ನಾಟಕ ಸಿವಿಲ್‌ ಸರ್ವೀಸ್ ನಿಯಮ (ಕೆಸಿಎಸ್‌ಆರ್‌)ಗಳಿಗೆ ತಿದ್ದುಪಡಿ ಮಾಡಿ ದಶಕಗಳೇ ಆಗಿವೆ. 1994ರ ಬಳಿಕ ತಿದ್ದುಪಡಿ ಮಾಡಲಾಗಿಲ್ಲ. ಇದರಿಂದಾಗಿ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಮಾನ್ಯತೆ ನೀಡಿದ್ದರೂ ಪ್ಯಾರಾಲಿಂಪಿಕ್ಸ್‌ ಸಮಿತಿಯನ್ನು ಕೆಸಿಎಸ್‌ಆರ್‌ ಅಂಗೀಕರಿಸಿಲ್ಲ. ಇದೇ ರೀತಿ ಇನ್ನು 12 ಸಮಿತಿಗಳಿಗೆ ಮಾನ್ಯತೆ ಲಭಿಸಿಲ್ಲ ಎನ್ನುತ್ತಾರೆ ಪ್ರಸನ್ನ.

ರಜೆ ಯಾಕೆ ಸಿಗುತ್ತಿಲ್ಲ?
2016 ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗಿ 2013 ರ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌'ಶಿಪ್‌'ನಲ್ಲಿ ಚಿನ್ನ 2004 ರ ಅಥೆನ್ಸ್‌ ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆ 2002 ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ 2002 ರ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌'ಶಿಪ್‌ನಲ್ಲಿ ಚಿನ್ನ ಕೆಸಿಎಸ್‌ಆರ್‌ ಪ್ರಕಾರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕೂಟಗಳಲ್ಲಿ ಸ್ಪರ್ಧಿಸಲು ಹಾಗೂ ತರಬೇತಿ ಪಡೆಯಲು ಕ್ರೀಡಾಪಟು ವಿಶೇಷ ಸಾಂದರ್ಭಿಕ ರಜೆ ಪಡೆಯಲು ಅರ್ಹನಾ ಗಿರುತ್ತಾನೆ. 2004ರಲ್ಲಿ ಭಾರತೀಯ ಪ್ಯಾರಾ ಲಿಂಪಿಕ್ಸ್‌ ಸಮಿತಿಗೆ ಭಾರತ ಸರ್ಕಾರ ಮಾನ್ಯತೆ ನೀಡಿದ್ದು, ರಾಷ್ಟ್ರೀಯ ಕ್ರೀಡಾ ಸ್ಥಾನಮಾನ ಪಡೆದಿದೆ. ಆದರೆ ಕೆಸಿಎಸ್‌ಆರ್‌ ನಿಯಮಾ ವಳಿಯ ಪುಸ್ತಕದಲ್ಲಿ ಪ್ಯಾರಾಲಿಂಪಿಕ್ಸ್‌ ಸಮಿತಿಯ ಹೆಸರು ಇನ್ನೂ ಸೇರ್ಪಡೆಗೊಂಡಿಲ್ಲ. ಇದೇ ಕಾರಣದಿಂದಾಗಿ ಪ್ರಸನ್ನಗೆ ರಜೆ ಲಭ್ಯ ಆಗುತ್ತಿಲ್ಲ.

ವರದಿ: ಡಿ.ಬಿ.ವಿನಯ್'ಕುಮಾರ್, ಕನ್ನಡಪ್ರಭ
epaper.kannadaprabha.in

click me!