
ನವದೆಹಲಿ(ಸೆ.18): 370ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಸಂವಹನ ಸಮಸ್ಯೆ ಎದುರಾಗಿತ್ತು. ಇದೇ ಸಮಯದಲ್ಲಿ ಕಾಶ್ಮೀರದ ಇಶ್ರತ್ ಅಖ್ತರ್ ಎನ್ನುವ 24 ವರ್ಷದ ಯುವತಿ ಇದೇ ನವೆಂಬರ್-ಡಿಸೆಂಬರ್‌ನಲ್ಲಿ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಏಷ್ಯಾ-ಓಷಿಯಾನಿಯಾ ಚಾಂಪಿಯನ್ಶಿಪ್ಗೆ ಭಾರತ ವೀಲ್ಹ್ ಚೇರ್ ಬಾಸ್ಕೆಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಭಾರತೀಯ ವೀಲ್ಹ್ ಚೇರ್ ಫೆಡರೇಷನ್ ಇಶ್ರತ್‌ರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ಅಚ್ಚರಿಯ ರೀತಿಯಲ್ಲಿ ಭಾರತೀಯ ಸೇನೆ, ಇಶ್ರತ್‌ರನ್ನು ಹುಡುಕಿ ಆಯ್ಕೆಯನ್ನು ಚೆನ್ನೈನಲ್ಲಿ ನಡೆಯುತ್ತಿರುವ ತರಬೇರಿ ಶಿಬಿರಕ್ಕೆ ಕಳುಹಿಸಿಕೊಟ್ಟ ಕಥೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಕಾಶ್ಮೀರ ಪಾಕಿಸ್ತಾನದ ಕುತ್ತಿಗೆ ನರ ಇದ್ದಂತೆ: ಇಮ್ರಾನ್ ಖಾನ್
ಆಗಿದ್ದೇನು?: ಭಾರತ ವೀಲ್ಹ್ ಚೇರ್ ಬಾಸ್ಕೆಟ್‌ಬಾಲ್ ತಂಡದ ಕೋಚ್ ಲೂಯಿಸ್ ಜಾರ್ಜ್, ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ. ಆ.25ರಂದು ಲೂಯಿಸ್ ತಮ್ಮ ಸಹಪಾಠಿ, ಗುಪ್ತಚರ ಇಲಾಖೆ (ಐಬಿ)ಯಲ್ಲಿದ್ದ ನಿವೃತ್ತ ಕರ್ನಲ್ ಐಸೆನ್ ಹೋವರ್‌ಗೆ ಕರೆ ಮಾಡಿ ಮಾತನಾಡುತ್ತಿದ್ದ ವೇಳೆ ಇಶ್ರತ್ ವಿಷಯ ಪ್ರಸ್ತಾಪಸಿದರು. ‘ನಾನು, ಐಸೆನ್ ದೂರವಾಣಿ ಮೂಲಕ ಮಾತನಾಡುತ್ತಿರುತ್ತೇವೆ. ಆ ದಿನ ನಾನು ಕರೆ ಮಾಡಿದಾಗ ಕಾಶ್ಮೀರದಲ್ಲಿ ಪರಿಸ್ಥಿತಿ ಬಗ್ಗೆ ವಿಚಾರಿಸುತ್ತಿದ್ದಾಗ ಇಶ್ರತ್ ಬಗ್ಗೆ ನೆನಪಾಯಿತು. ಐಸೆನ್‌ಗೆ ಕಾಶ್ಮೀರಿ ಆಟಗಾರ್ತಿಯೊಬ್ಬಳು ತಂಡ ಸೇರಿಕೊಂಡಿಲ್ಲ. ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ವಿಷಯ ತಿಳಿಸಿದೆ. ಅವರು, ಆಕೆ ಬಗ್ಗೆ ಕೆಲ ಮಾಹಿತಿ ಪಡೆದು ಫೋಟೋ ಇದ್ದರೆ ಕಳುಹಿಸಲು ತಿಳಿಸಿದರು. ಬಳಿಕ ಶ್ರೀನಗರದಲ್ಲಿ ಜಮ್ಮು-ಕಾಶ್ಮೀರ ಪೊಲೀಸರನ್ನು ಸಂಪರ್ಕಿಸಿ ಅವರ ಸಹಾಯ ಕೇಳಿದರು. ಪೊಲೀಸರು ಸೇನೆಗೆ ವಿಷಯ ಮುಟ್ಟಿಸಿತು’ ಎಂದು ಜಾರ್ಜ್ ಹೇಳಿದ್ದಾರೆ.
‘ಕಾಶ್ಮೀರಿಗಳಿಗೆ ಸೇನೆ ಚಿತ್ರ ಹಿಂಸೆ’: ಶೆಹ್ಲಾ ವಿರುದ್ಧ ರಾಷ್ಟ್ರದ್ರೋಹ ಕೇಸ್
ಹುಡುಕಿದ್ದು ಹೇಗೆ?: ಇಶ್ರತ್ ಕೋಚ್ ಬಳಿ ಆಕೆಯ ವಿಳಾಸವಿರಲಿಲ್ಲ. ಆದರೆ ಭಾರತೀಯ ಸೇನೆ, ಶ್ರೀನಗರದಲ್ಲಿ ವೀಲ್ಹ್ ಚೇರ್ ಬಾಸ್ಕೆಟ್‌ಬಾಲ್ ತರಬೇತಿ ನೀಡುವ ಮೆಡಿಕೇರ್ ಸೊಸೈಟಿಯನ್ನು ಸಂಪರ್ಕಿಸಿದಾಗ ಇಶ್ರತ್, ಬಾರಾಮುಲ್ಲಾ ಬಳಿ ಬಂಗ್‌ದಾರಾ ಎನ್ನುವ ಹಳ್ಳಿಯ ನಿವಾಸಿ ಎಂದು ತಿಳಿದುಬಂತು.
ಕೆಲ ಸೈನಿಕರು ಇಶ್ರತ್ ಫೋಟೋದೊಂದಿಗೆ ಬಂಗ್‌ದಾರಾಗೆ ಭೇಟಿ ನೀಡಿ, ಮನೆ ಮನೆಗೂ ತೆರಳಿ ಆಕೆಗಾಗಿ ಹುಡುಕಾಟ ನಡೆಸಿದರು. ಇಶ್ರತ್ ತಾವು ಭಾರತ ತಂಡಕ್ಕೆ ಆಯ್ಕೆಯಾಗಿರುವ ಸುದ್ದಿ ಕೇಳಿ ತಂದೆಯೊಂದಿಗೆ ಸಂಭ್ರಮಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಕೈಲಾಗದವರು ಕಲ್ಲೆಸೆದರು: ಲಂಡನ್ ಭಾರತೀಯ ರಾಯಭಾರ ಕಚೇರಿ ಮುಂದೆ ಪ್ರತಿಭಟನೆ!
ಭಾರತೀಯ ಸೇನೆ, ಇಶ್ರತ್‌ರನ್ನು ಶ್ರೀನಗರಕ್ಕೆ ಕರೆದು ತಂದು ಅಲ್ಲಿಂದ ದೆಹಲಿಗೆ ವಿಮಾನ ಹತ್ತಿಸಿದೆ. ದೆಹಲಿಯಿಂದ ಚೆನ್ನೈಗೆ ಪ್ರಯಾಣಿಸಿದ ಇಶ್ರತ್, ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ವಿಮಾನ ಟಿಕೆಟ್‌ಗಳನ್ನು ಐಸೆನ್ ಹೋವರ್ ಅವರೇ ವ್ಯವಸ್ಥೆ ಮಾಡಿದ್ದಾಗಿ ಆಕೆ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.