Chess Olympiad ಭಾರತದ ಪಾಲಾದ 2 ಕಂಚಿನ ಪದಕ

By Naveen Kodase  |  First Published Aug 10, 2022, 11:21 AM IST

ಚೆಸ್‌ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ 2 ಕಂಚಿನ ಪದಕ ಗೆದ್ದ ಭಾರತ
ಭಾರತ ಪುರುಷ ಹಾಗೂ ಮಹಿಳಾ ತಂಡಗಳ ಪಾಲಾದ ಕಂಚು ಪದಕ
ಜರ್ಮನಿ ಎದುರು ಗೆದ್ದು ಕಂಚಿಗೆ ಕೊರಳೊಡ್ಡಿದ ಪುರುಷ ತಂಡ


ಮಹಾಬಲಿಪುರಂ(ಆ.10): 44ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ಎರಡು ಕಂಚಿನ ಪದಕಗಳನ್ನು ಗೆದ್ದಿದೆ. ಮುಕ್ತ(ಪುರುಷರ) ವಿಭಾಗದಲ್ಲಿ ಭಾರತ ‘ಬಿ’ ತಂಡ ಕಂಚು ಗೆದ್ದರೆ, ಮಹಿಳಾ ವಿಭಾಗದಲ್ಲಿ ಭಾರತ ‘ಎ’ ತಂಡ ಸಹ 3ನೇ ಸ್ಥಾನ ಪಡೆಯಿತು.  ಮುಕ್ತ ವಿಭಾಗದ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ಭಾರತ ‘ಬಿ’ ತಂಡ ಜರ್ಮನಿ ವಿರುದ್ಧ 3-1ರಲ್ಲಿ ಗೆದ್ದು 3ನೇ ಸ್ಥಾನ ಪಡೆಯಿತು. ಉಜ್ಬೇಕಿಸ್ತಾನ ಚಿನ್ನ ಗೆದ್ದರೆ, ಅರ್ಮೇನಿಯಾ ಬೆಳ್ಳಿ ಪದಕ ಜಯಿಸಿತು. 

ಭಾರತಕ್ಕಿದು ಒಲಿಂಪಿಯಾಡ್‌ನಲ್ಲಿ 2ನೇ ಕಂಚಿನ ಪದಕ. ಈ ಮೊದಲು 2014ರ ಆವೃತ್ತಿಯಲ್ಲೂ ಭಾರತ ಕಂಚು ಜಯಿಸಿತ್ತು. ಬಿ.ಅಧಿಬನ್‌ 2014ರಲ್ಲಿ ಪದಕ ಗೆದ್ದ ತಂಡದಲ್ಲೂ ಇದ್ದರು. ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ನಿಹಾಲ್‌ ಸರಿನ್‌ ಮತ್ತು ರೌನಕ್‌ ಸಾಧ್ವಾನಿಗೆ ಇದು ಮೊದಲ ಪದಕ.

Tap to resize

Latest Videos

ಇನ್ನು ಮಹಿಳಾ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಭಾರತ ‘ಎ’ ತಂಡ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ಅಮೆರಿಕ ವಿರುದ್ಧ 1-3ರಲ್ಲಿ ಸೋತು ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ಕೊನೆರು ಹಂಪಿ ನೇತೃತ್ವದ ತಂಡ 3ನೇ ಸ್ಥಾನ ಪಡೆಯಿತು. ಯುದ್ಧಪೀಡಿತ ಉಕ್ರೇನ್‌ ಚಿನ್ನ ಜಯಿಸಿ ಸಂಭ್ರಮಿಸಿದರೆ, ಜಾರ್ಜಿಯಾ ಬೆಳ್ಳಿ ಪಡೆಯಿತು. ಮುಕ್ತ ವಿಭಾಗದಲ್ಲಿ ಭಾರತ ‘ಎ’ ತಂಡ 4ನೇ, ಭಾರತ ‘ಸಿ’ ತಂಡ 31ನೇ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಭಾರತ ‘ಬಿ’ ತಂಡ 8ನೇ, ಭಾರತ ‘ಸಿ’ ತಂಡ 17ನೇ ಸ್ಥಾನ ಗಳಿಸಿತು.

7ನೇ ಬಾರಿಗೆ ಸುನಿಲ್‌ ಚೆಟ್ರಿಗೆ ವರ್ಷದ ಫುಟ್ಬಾಲಿಗ ಪ್ರಶಸ್ತಿ

ನವದೆಹಲಿ: ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿ 7ನೇ ಬಾರಿಗೆ ವರ್ಷದ ಫುಟ್ಬಾಲಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಗಳವಾರ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) 2021-22ರ ಸಾಲಿನ ವಾರ್ಷಿಕ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿತು. 

ಕಾಮನ್ವೆಲ್ತ್‌ ಪದಕ ವಿಜೇತ ಸಂಕೇತ್‌ ಶಸ್ತ್ರಚಿಕಿತ್ಸೆಗೆ ನೆರವಾದ ಭಾರತ ಸರ್ಕಾರ..!

ಸುನಿಲ್‌ ಚೆಟ್ರಿ ಹೆಸರನ್ನು ರಾಷ್ಟ್ರೀಯ ತಂಡದ ಕೋಚ್‌ ಇಗೊರ್‌ ಸ್ಟಿಮಾಕ್‌ ಶಿಫಾರಸು ಮಾಡಿದ್ದರು. ಸಕ್ರಿಯ ಅಂತಾರಾಷ್ಟ್ರೀಯ ಆಟಗಾರರ ಪೈಕಿ ಅತಿಹೆಚ್ಚು ಗೋಲು ಬಾರಿಸಿರುವವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಚೆಟ್ರಿ 2007ರಲ್ಲಿ ಮೊದಲ ಬಾರಿಗೆ ವಾರ್ಷಿಕ ಫುಟ್ಬಾಲಿಗ ಪ್ರಶಸ್ತಿ ಪಡೆದಿದ್ದರು. ಆ ಬಳಿಕ 2011, 2013, 2014, 2017, 2018-19ರಲ್ಲಿ ಗೌರವ ಸ್ವೀಕರಿಸಿದ್ದರು.

click me!