ಬೆಂಗಳೂರಲ್ಲಿ Commomwealth Games ಪದಕ ವಿಜೇತ ಅಥ್ಲೀಟ್‌ಗಳಿಗೆ ಸನ್ಮಾನ!

By Kannadaprabha News  |  First Published Aug 10, 2022, 10:36 AM IST

* ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತೀಯ ಅಥ್ಲೀಟ್‌ಗಳು
* ಬೆಂಗಳೂರಿಗೆ ಬಂದಿಳಿದ ಅಥ್ಲೀಟ್‌ಗಳಿಗೆ ಸಾಯ್‌ನಿಂದ ಅದ್ಧೂರಿ ಸ್ವಾಗತ
* ಕರ್ನಾಟಕದ ಸಾಧಕರಿಗೆ ಬಹುಮಾನ ಘೋಷಿಸಿದ ಕರ್ನಾಟಕ ಸರ್ಕಾರ


ಬೆಂಗಳೂರು(ಆ.10): ಟ್ರಿಪಲ್‌ ಜಂಪ್‌ನಲ್ಲಿ ಐತಿಹಾಸಿಕ ಚಿನ್ನ, ಬೆಳ್ಳಿ ಗೆದ್ದ ಎಲ್ಡೋಸ್‌ ಪೌಲ್‌ ಮತ್ತು ಅಬ್ದುಲ್ಲಾ ಅಬೂಬಕರ್‌, 3,000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಅವಿನಾಶ್‌ ಸಾಬ್ಳೆ ಮಂಗಳವಾರ ಬೆಂಗಳೂರಿಗೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡ ಸಾಯ್‌ ಅಧಿಕಾರಿಗಳು ಅವರನ್ನು ನಗರದ ಕೆಂಗೇರಿ ಬಳಿ ಇರುವ ಸಾಯ್‌ ಕೇಂದ್ರಕ್ಕೆ ಕರೆದೊಯ್ದರು. ಸಾಯ್‌ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು, ಅಧಿಕಾರಿ, ಕೋಚ್‌ ಮತ್ತು ಸಿಬ್ಬಂದಿ ಮೂವರೂ ಕ್ರೀಡಾಪಟುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಹಣೆಗೆ ತಿಲಕವಿಟ್ಟು, ಪೇಟ ತೊಡಿಸಿ, ಸಿಹಿ ತಿನ್ನಿಸಿ ಅವರ ಸಾಧನೆಯನ್ನು ಶ್ಲಾಘಿಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪೌಲ್‌, ‘ವೈಯಕ್ತಿಕ ಶ್ರೇಷ್ಠ ಪ್ರದರ್ಶನ ತೋರಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಕಾಮನ್ವೆಲ್ತ್‌ನಂತಹ ದೊಡ್ಡ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದರೆ ಆತ್ಮವಿಶ್ವಾಸ ಹೆಚ್ಚಲಿದೆ. ಪದಕ ಗೆಲ್ಲುವ ನಿರೀಕ್ಷೆ ಇರಲಿಲ್ಲ. ನಿರೀಕ್ಷೆಯೊಂದಿಗೆ ಕಣಕ್ಕಿಳಿದಾಗ ಒತ್ತಡ ಹೆಚ್ಚಾಗುತ್ತದೆ. ಉತ್ತಮ ಪ್ರದರ್ಶನ ತೋರಿದ್ದಕ್ಕೆ ನಮಗೆ ಪದಕ ಒಲಿಯಿತು’ ಎಂದರು.

Tap to resize

Latest Videos

ಇನ್ನು ಅಬೂಬಕರ್‌ ಮಾತನಾಡಿ, ‘ವಿಶ್ವ ಅಥ್ಲೆಟಿಕ್ಸ್‌ನಲ್ಲಿ ನಾನು 19ನೇ ಸ್ಥಾನ ಪಡೆದಿದ್ದೆ. ಆ ಪ್ರದರ್ಶನ ಭಾರೀ ನಿರಾಸೆ ಮೂಡಿಸಿತ್ತು. ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಲೇಬೇಕು ಎನ್ನುವ ಛಲದೊಂದಿಗೆ ಸ್ಪರ್ಧಿಸಿದೆ. ಕೋಚ್‌ ನೀಡಿದ ನಿರಂತರ ಪ್ರೋತ್ಸಾಹ ಪದಕ ಗೆಲ್ಲಲು ನೆರವಾಯಿತು’ ಎಂದರು.

Commonwealth Games 2022 ಸಾಧಕರಿಗೆ ಅದ್ಧೂರಿ ಸ್ವಾಗತ

‘ನಾವು ಯೋಚಿಸುವ ರೀತಿ ಬದಲಾಗಿದೆ. ಮೊದಲೆಲ್ಲಾ ನಾವು ಒಲಿಂಪಿಯನ್‌ಗಳಾಗಬೇಕು ಎಂದು ಯೋಚಿಸುತ್ತಿದ್ದೆವು. ಈಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎಂದು ಯೋಚಿಸುತ್ತಿದ್ದೇವೆ. ಕೀನ್ಯಾ ಸ್ಪರ್ಧಿಗಳನ್ನು ಸೋಲಿಸಿ ಪದಕ ಗೆಲ್ಲುವುದು ನನ್ನ ಗುರಿಯಾಗಿತ್ತು. ಸಾಮಾನ್ಯವಾಗಿ ಕೀನ್ಯಾದವರು ಒಟ್ಟೊಟ್ಟಿಗೆ ಮುನ್ನಡೆಯುತ್ತಾರೆ. ಇತರರಿಗೆ ಮುನ್ನುಗ್ಗಲು ಅವಕಾಶ ಕೊಡುವುದಿಲ್ಲ. ಒಂದು ಹಂತದಲ್ಲಿ ಕೀನ್ಯಾದ ಪ್ರತಿಸ್ಪರ್ಧಿಗಳು ಹಿಂದಿರುಗಿ ನನ್ನತ್ತ ನೋಡಿದರು. ಆಗ ನನಗೆ ನಾನು ಗೆಲ್ಲಬಹುದು ಎನ್ನುವ ನಂಬಿಕೆ ಬಂತು’ ಎಂದು ಅವಿನಾಶ್‌ ಖುಷಿ ಹಂಚಿಕೊಂಡರು.

ಕಾಮನ್ವೆಲ್ತ್‌ ಪದಕ ವಿಜೇತೆ ಅಶ್ವಿನಿಗೆ ರಾಜ್ಯ 15 ಲಕ್ಷ ರುಪಾಯಿ

ಬೆಂಗಳೂರು: ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನ ಬ್ಯಾಡ್ಮಿಂಟನ್‌ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರ 15 ಲಕ್ಷ ರು. ಬಹುಮಾನ ಘೋಷಿಸಿದೆ. ಈ ವಿಷಯವನ್ನು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಮಂಗಳವಾರ ತಿಳಿಸಿದ್ದಾರೆ. 

ಸದ್ಯದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಪದಕ ಸಾಧಕರಿಗೆ ಸನ್ಮಾನಿಸಿ, ಬಹುಮಾನ ಮೊತ್ತ ಹಸ್ತಾಂತರಿಸುವುದಾಗಿ ಅವರು ಹೇಳಿದ್ದಾರೆ. ಬೆಳ್ಳಿ ಗೆದ್ದ ಕ್ರಿಕೆಟ್‌ ತಂಡದಲ್ಲಿದ್ದ ರಾಜೇಶ್ವರಿ ಗಾಯಕ್ವಾಡ್‌ಗೆ 15 ಲಕ್ಷ ರು., ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಗುರುರಾಜ ಪೂಜಾರಿಗೆ 8 ಲಕ್ಷ ರು. ಬಹುಮಾನವನ್ನು ರಾಜ್ಯ ಸರ್ಕಾರ ಘೋಷಿಸಿತ್ತು.

click me!