ಪ್ಯಾರಾ ಏಷ್ಯಾಡ್‌: ಭಾರತ ಸಾರ್ವಕಾಲಿಕ ದಾಖಲೆ! ಕಡಿಮೆ ಸ್ಪರ್ಧಿಗಳಿದ್ದರೂ ಶ್ರೇಷ್ಠ ಪ್ರದರ್ಶನ ತೋರಿದ ಟೀಮ್ ಇಂಡಿಯಾ

Kannadaprabha News   | Kannada Prabha
Published : Oct 24, 2026, 09:11 AM IST
Sheetal Devi

ಸಾರಾಂಶ

2026ರ ನಗೋಯಾ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವು 30 ಚಿನ್ನ ಸೇರಿದಂತೆ ಒಟ್ಟು 114 ಪದಕಗಳನ್ನು ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದೆ. 2023ರ ಆವೃತ್ತಿಗಿಂತ ಕಡಿಮೆ ಕ್ರೀಡಾಪಟುಗಳು ಭಾಗವಹಿಸಿದ್ದರೂ, ಬ್ಯಾಡ್ಮಿಂಟನ್, ಜಾವೆಲಿನ್ ಮತ್ತು ಶೂಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ನಗೋಯಾ: 2026ರ ಪ್ಯಾರಾ ಏಷ್ಯನ್‌ ಗೇಮ್ಸ್‌ ಅಭಿಯಾನವನ್ನು ಭಾರತ ದಾಖಲೆಯ ಪದಕ ಗಳಿಕೆಯೊಂದಿಗೆ ಮುಕ್ತಾಯಗೊಳಿಸಿದೆ. ಕೂಟಕ್ಕೆ ಶನಿವಾರ ಅಧಿಕೃತವಾಗಿ ತೆರೆ ಬೀಳಲಿದೆಯಾದರೂ, ಭಾರತದ ಸ್ಪರ್ಧೆಗಳು ಶುಕ್ರವಾರವೇ ಕೊನೆಗೊಂಡಿತು. ಕೂಟದ 5ನೇ ದಿನ ಭಾರತ 9 ಚಿನ್ನ ಸೇರಿ 25 ಪದಕಗಳನ್ನು ಪಡೆಯಿತು. ಇದರೊಂದಿಗೆ 30 ಚಿನ್ನ, 35 ಬೆಳ್ಳಿ, 49 ಕಂಚು ಸೇರಿ ಒಟ್ಟು 114 ಪದಕ ಬಾಚಿಕೊಂಡಿತು.

2023ರಲ್ಲಿ ಚೀನಾದ ಹಾಂಗ್ಝೂನಲ್ಲಿ ನಡೆದಿದ್ದ 4ನೇ ಆವೃತ್ತಿಯ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತ 108 ಪದಕ ಜಯಿಸಿತ್ತು. ಆ ದಾಖಲೆ ಪತನಗೊಂಡಿದೆ. ವಿಶೇಷ ಎಂದರೆ, 2023ರಲ್ಲಿ ಭಾರತ ಬರೋಬ್ಬರಿ 309 ಕ್ರೀಡಾಪಟುಗಳನ್ನು ಕಳುಹಿಸಿತ್ತು. ಆದರೆ ಈ ಸಲ 168 ಸ್ಪರ್ಧಿಗಳಷ್ಟೇ ತೆರೆಳಿದ್ದರು. 141 ಮಂದಿ ಕಡಿಮೆ ಸ್ಪರ್ಧಿಗಳಿದ್ದರೂ, ಭಾರತ ಪದಕ ಗಳಿಕೆಯಲ್ಲಿ ದಾಖಲೆ ಬರೆದಿದೆ. ಸದ್ಯ ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದ್ದು, ಕೂಟ ಮುಕ್ತಾಯಗೊಳ್ಳುವ ವೇಳೆಗೆ ಸ್ಥಾನ ಬದಲಾಗಬಹುದು.

ಬ್ಯಾಡ್ಮಿಂಟನ್‌ನಲ್ಲಿ ಮಿಂಚು: 

ಶನಿವಾರ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ 3 ಚಿನ್ನ ದೊರೆಯಿತು. ಪುರುಷರ ಎಸ್‌ಎಲ್‌ 3 ವಿಭಾಗದ ಫೈನಲ್‌ನಲ್ಲಿ ಭಾರತದವರೇ ಆದ ಪ್ರಮೋದ್‌ ಭಗತ್‌ರನ್ನು ಸೋಲಿಸಿ ನಿತೇಶ್‌ ಕುಮಾರ್‌ ಚಿನ್ನ ಗೆದ್ದರೆ, ಎಸ್‌ಎಲ್‌ 4 ವಿಭಾಗದಲ್ಲಿ ನವೀನ್‌ ಶಿವಕುಮಾರ್‌ ಸ್ವರ್ಣಕ್ಕೆ ಮುತ್ತಿಟ್ಟರು. ಮಹಿಳಾ ಡಬಲ್ಸ್‌ ಎಲ್‌ಎಲ್‌3-ಎಸ್‌ಯು5 ವಿಭಾಗದಲ್ಲಿ ಮಾನ್ಸಿ ಜೋಶಿ ಹಾಗೂ ತುಳಸಿಮತಿ ಮುರುಗೇಶನ್‌ ಚಿನ್ನಕ್ಕೆ ಕೊರಳೊಡ್ಡಿದರು. ಭಾರತೀಯ ಶಟ್ಲರ್‌ಗಳು 3 ಚಿನ್ನ ಸೇರಿ ಒಟ್ಟು 16 ಪದಕಗಳೊಂದಿಗೆ ಅಭಿಯಾನ ಮುಕ್ತಾಯಗೊಳಿಸಿದರು.

ಜಾವೆಲಿನ್‌ನಲ್ಲಿ ಕ್ಲೀನ್‌ಸ್ವೀಪ್‌: 

ಪುರುಷರ ಎಫ್‌ 42-44/61-62 ವಿಭಾಗದ ಜಾವೆಲಿನ್‌ ಎಸೆತದಲ್ಲಿ ಭಾರತ ಪದಕಗಳನ್ನು ಕ್ಲೀನ್‌ ಸ್ವೀಪ್‌ ಮಾಡಿತು. ಚಿನ್ನ ಗೆದ್ದ ಹಾಲಿ ವಿಶ್ವ ಚಾಂಪಿಯನ್‌ ಸುಮಿತ್‌ ಅಂತಿಲ್‌. 72.46 ದೂರಕ್ಕೆ ಜಾವೆಲಿನ್‌ ಎಸೆದ ಸುಮಿತ್‌ ಚಿನ್ನ ಗೆದ್ದರು. ಮಹೇಂದ್ರ ಗುರ್ಜಾರ್‌ ಹಾಗೂ ಸಂದೀಪ್‌ ಸರ್ಗಾರ್‌ಗೆ ಕ್ರಮವಾಗಿ ಬೆಳ್ಳಿ, ಕಂಚು ಸಿಕ್ಕಿತು.

ಮೋನಾಗೆ 2ನೇ ಚಿನ್ನ: ಪ್ಯಾರಾ ಶೂಟರ್‌ ಮೋನಾ ಅಗರ್‌ವಾಲ್‌ ಕೂಟದಲ್ಲಿ 2ನೇ ಚಿನ್ನ ಜಯಿಸಿದರು. ಮಹಿಳೆಯರ 50 ಮೀ. ರೈಫಲ್‌ 3 ಪೊಸಿಷನ್‌ ಎಸ್‌ಎಚ್‌1 ವಿಭಾಗದಲ್ಲಿ ಚಿನ್ನ ಗೆದ್ದರು. ಈ ಮೊದಲು 10 ಮೀ. ಏರ್‌ ರೈಫಲ್‌ ವಿಭಾಗದಲ್ಲೂ ಮೋನಾ ಚಿನ್ನ ಗೆದ್ದಿದ್ದರು.

ಹರ್ವಿಂದರ್‌ಗೆ ಸ್ವರ್ಣ: ಪ್ಯಾರಾಲಿಂಪಿಕ್‌ ಚಾಂಪಿಯನ್‌ ಹರ್ವಿಂದರ್‌ ಸಿಂಗ್‌ ಹಾಗೂ ವಿನಯ್‌ ಸುಂದಿ ರೀಕರ್ವ್‌ ಆರ್ಚರಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನ ಜಯಿಸಿದರು. ಫೈನಲ್‌ನಲ್ಲಿ ಚೀನಾ ಜೋಡಿಯನ್ನು ಸೋಲಿಸಿದರು.

ಯಾವ್ಯಾವ ಕ್ರೀಡೆಯಲ್ಲಿ ಭಾರತಕ್ಕೆ ಎಷ್ಟೆಷ್ಟು ಪದಕ?

ಕ್ರೀಡೆ ಚಿನ್ನ ಬೆಳ್ಳಿ ಕಂಚು ಒಟ್ಟು

ಅಥ್ಲೆಟಿಕ್ಸ್‌ 22 19 24 65

ಬ್ಯಾಡ್ಮಿಂಟನ್‌ 3 5 8 16

ಆರ್ಚರಿ 3 3 0 6

ಶೂಟಿಂಗ್‌ 2 2 1 5

ಈಜು 0 3 8 11

ಪವರ್‌ಲಿಫ್ಟಿಂಗ್‌ 0 2 0 2

ಜುಡೋ 0 1 1 2

ಟೇಬಲ್‌ ಟೆನಿಸ್‌ 0 0 7 7

ಒಟ್ಟು 30 35 49 114

04 ಕ್ರೀಡಾಪಟುಗಳು

ಈ ಕೂಟದಲ್ಲಿ ಭಾರತದ 4 ಕ್ರೀಡಾಪಟುಗಳು ತಲಾ 3 ಪದಕ ಗೆದ್ದರು. ಆರ್ಚರಿಯಲ್ಲಿ ಶೀತಲ್‌ ದೇವಿಗೆ 2 ಚಿನ್ನ, 1 ಬೆಳ್ಳಿ, ಬ್ಯಾಡ್ಮಿಂಟನ್‌ನಲ್ಲಿ ತುಳಸಿಮತಿಗೆ 1 ಚಿನ್ನ, 2 ಬೆಳ್ಳಿ, ಈಜಿನಲ್ಲಿ ರವಿ ಬುದಿಗಿನಾಗೆ 2 ಬೆಳ್ಳಿ, 1 ಕಂಚು, ಈಜಿನಲ್ಲಿ ಹಿಮಾನ್ಶು ನಂದಲ್‌ಗೆ 3 ಕಂಚು ದೊರೆಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

KL ರಾಹುಲ್‌, ಮನೀಶ್‌, ನಾಯರ್, ಟ್ಯಾಲೆಂಟ್ ಮೂವರಲ್ಲೂ ಇತ್ತು; ಇಬ್ಬರ ಕೆರಿಯರ್ ಮುಗಿಸಿ, ಒಬ್ಬರನ್ನು ಬಾನೆತ್ತರಕ್ಕೆ ಏರಿಸಿದ್ದು ಯಾರು?
BCCI ಒಟ್ಟು ಸಂಪತ್ತಿನ ಮುಂದೆ ಮಂಡಿಯೂರಿದ ಇಂಗ್ಲೆಂಡ್, ಆಸೀಸ್, ಪಾಕ್ ಕ್ರಿಕೆಟ್ ಮಂಡಳಿಗಳು..! ಟಾಪ್ 10 ಪಟ್ಟಿಯಲ್ಲಿ ಕಿವೀಸ್‌ಗೆ ಕೊನೆ ಸ್ಥಾನ