ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಎದುರು ಮೊದಲ ಇನಿಂಗ್ಸ್‌ನಲ್ಲಿ 502 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರೆ, ಮಯಾಂಕ್ ಅಗರ್‌ವಾಲ್ ಚೊಚ್ಚಲ ದ್ವಿಶತಕ ಸಿಡಿಸಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ವಿಶಾಖಪಟ್ಟಣಂ[ಅ.03]: ಟೀಂ ಇಂಡಿಯಾ ಆರಂಭಿಕರಾದ ಮಯಾಂಕ್ ಅಗರ್‌ವಾಲ್ ಆಕರ್ಷಕ ದ್ವಿಶತಕ ಹಾಗೂ ರೋಹಿತ್ ಶರ್ಮಾ ಕೆಚ್ಚೆದೆಯ ಶತಕದ ನೆರವಿನಿಂದ ಟೀಂ ಇಂಡಿಯಾ 502 ರನ್ ಬಾರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ವೈಜಾಗ್ ಟೆಸ್ಟ್: ದ್ವಿಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್
202 ರನ್ ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ಮತ್ತೊಮ್ಮೆ ಉತ್ತಮ ಆರಂಭ ಪಡೆಯಿತು. ರೋಹಿತ್ ಹಾಗೂ ಮಯಾಂಕ್ ಜೋಡಿ ಮೊದಲ ವಿಕೆಟ್’ಗೆ 317 ರನ್ ಗಳ ಜತೆಯಾಟವಾಡಿದರು. ರೋಹಿತ್ ಶರ್ಮಾ 244 ಎಸೆತಗಳಲ್ಲಿ 23 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 176 ರನ್ ಬಾರಿಸಿ ಕೇಶವ್ ಮಹರಾಜ್’ಗೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಕನ್ನಡಿಗ ಮಯಾಂಕ್ ಅಗರ್’ವಾಲ್ 371 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 215 ರನ್ ಬಾರಿಸಿ ಡೀನ್ ಎಲ್ಗಾರ್’ಗೆ ವಿಕೆಟ್ ಒಪ್ಪಿಸಿದರು.
ಕೈಕೊಟ್ಟ ಮಧ್ಯಮ ಕ್ರಮಾಂಕ: ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್‌ವಾಲ್ ಹೊರತುಪಡಿಸಿ ಟೀಂ ಇಂಡಿಯಾದ ಯಾವೊಬ್ಬ ಬ್ಯಾಟ್ಸ್’ಮನ್ ಕೂಡಾ 30+ ರನ್ ಬಾರಿಸಲು ಯಶಸ್ವಿಯಾಗಲಿಲ್ಲ. ಪೂಜಾರ ಕೇವಲ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ವಿರಾಟ್ ಕೊಹ್ಲಿ ಆಟ 20 ರನ್’ಗಳಿಗೆ ಸೀಮಿತವಾಯಿತು. ಅಜಿಂಕ್ಯ ರಹಾನೆ[15], ಹನುಮ ವಿಹಾರಿ[10], ವೃದ್ದಿಮಾನ್ ಸಾಹ[21] ಹೆಚ್ಚುಹೊತ್ತು ಕ್ರೀಸ್’ನಲ್ಲಿ ನಿಲ್ಲಲಿಲ್ಲ. ರವೀಂದ್ರ ಜಡೇಜಾ 30 ರನ್ ಬಾರಿಸಿ ಅಜೇಯರಾಗುಳಿದರು.
ದಕ್ಷಿಣ ಆಫ್ರಿಕಾ ಪರ ಕೇಶವ್ ಮಹರಾಜ್ 3 ವಿಕೆಟ್ ಪಡೆದರೆ, ಎಲ್ಗಾರ್, ಮುತ್ತುಸ್ವಾಮಿ, ಪಿಯೆಟ್ ಹಾಗೂ ಫಿಲಾಂಡರ್ ತಲಾ ಒಂದೊಂದು ವಿಕೆಟ್ ಪಡೆದರು.