ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಸಿದ್ಧತೆ ಆರಂಭಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯದಿಂದಲೇ ಪ್ರಯೋಗಕ್ಕೆ ಮುಂದಾದರೂ ಅಚ್ಚರಿಯಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಧರ್ಮಶಾಲಾ(ಸೆ.15): ಬಹುನಿರೀಕ್ಷಿತ ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಭಾನುವಾರ ಚಾಲನೆ ಸಿಗಲಿದೆ. ಎರಡೂ ತಂಡಗಳು ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಸಿದ್ಧತೆ ಆರಂಭಿಸಲಿವೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, 2020ರ ಟಿ20 ವಿಶ್ವಕಪ್ ತಂಡದಲ್ಲಿ ಇರುವುದು ಬಹುತೇಕ ಖಚಿತ. ಹೀಗಾಗಿ ಇನ್ನುಳಿದ 7 ಸ್ಥಾನಗಳಿಗೆ ಹಾಗೂ 4 ಮೀಸಲು ಆಟಗಾರರ ಸ್ಥಾನಕ್ಕೆ ಭಾರೀ ಪೈಪೋಟಿ ಇದೆ. ಸೂಕ್ತ ಆಟಗಾರರಿಗಾಗಿ ಹುಡುಕಾಟ ಇತ್ತೀಚಿನ ವೆಸ್ಟ್‌ಇಂಡೀಸ್ ಪ್ರವಾಸದಲ್ಲೇ ಆರಂಭಗೊಂಡಿದ್ದರೂ, ಈ ಸರಣಿಯಲ್ಲಿ ಕೆಲ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನವನ್ನು ಭಾರತ ತಂಡದ ಆಡಳಿತ ಮಾಡಲಿದೆ.
ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ತೋರಿದ ಟೀಂ ಇಂಡಿಯಾ, ತನ್ನ ಗೆಲುವಿನ ಓಟ ಮುಂದುವರಿಸಲು ಕಾತರಿಸುತ್ತಿದೆ. ಆದರೆ ಕಗಿಸೋ ರಬಾಡರ ಪ್ರಚಂಡ ಬೌಲಿಂಗ್ ದಾಳಿ, ಇಲ್ಲವೇ ಡೇವಿಡ್ ಮಿಲ್ಲರ್‌ರ ವಿಸ್ಫೋಟಕ ಇನ್ನಿಂಗ್ಸ್, ಭಾರತೀಯರನ್ನು ಹಳಿ ತಪ್ಪಿಸಬಹುದು. ಹೀಗಾಗಿ, ವಿಂಡೀಸ್ ಪ್ರವಾಸಕ್ಕಿಂತ ಕಠಿಣ ಹಾಗೂ ವಿಭಿನ್ನ ಸವಾಲು ಕೊಹ್ಲಿ ಪಡೆಗೆ ಎದುರಾಗಲಿದೆ.
ಅಂಡರ್ 19 ಏಷ್ಯಾ ಕಪ್: ಟೀಂ ಇಂಡಿಯಾಗೆ ಏಷ್ಯಾಕಪ್ ಕಿರೀಟ
2020ರ ಟಿ20 ವಿಶ್ವಕಪ್ಗೂ ಮುನ್ನ ಭಾರತಕ್ಕೆ ಅಭ್ಯಾಸ ನಡೆಸಲು 20 ಪಂದ್ಯಗಳು ಸಿಗಲಿವೆ. ಜತೆಗೆ ಐಪಿಎಲ್ ಸಹ ಇರಲಿದ್ದು, ಬಲಿಷ್ಠ ತಂಡ ಕಟ್ಟಿಕೊಳ್ಳಲು ಸಮಯವಿದೆ. ಈ ಕಾರಣದಿಂದಲೇ ತಂಡದ ಆಡಳಿತ ಹಲವು ಪ್ರಯೋಗಗಳಿಗೆ ಮುಂದಾಗುತ್ತಿದೆ. ಪ್ರಮುಖವಾಗಿ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಪ್ರಯೋಗವಾಗುತ್ತಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ತಂಡ ಹಳೆ ಮುಖಗಳಿಗೇ ಮಣೆ ಹಾಕುತ್ತಿದೆ.
ಬ್ಯಾಟಿಂಗ್ ಪಡೆ ಹೇಗಿರಲಿದೆ?: ರೋಹಿತ್ ಶರ್ಮಾ ಜತೆ ಶಿಖರ್ ಧವನ್ ಇಲ್ಲವೇ ಕೆ.ಎಲ್.ರಾಹುಲ್ಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ಸಿಗಲಿದೆ. ಧವನ್ ಹಾಗೂ ರಾಹುಲ್ ಇಬ್ಬರೂ ಲಯದ ಸಮಸ್ಯೆ ಎದುರಿಸುತ್ತಿದ್ದು, ಮತ್ತೊಮ್ಮೆ ವೈಫಲ್ಯ ಕಂಡರೆ ಅವರ ಪಾಲಿಗೆ ಇದು ಬಹುತೇಕ ಕೊನೆ ಸರಣಿ ಆಗಲಿದೆ. 4ನೇ ಕ್ರಮಾಂಕಕ್ಕೆ ಮನೀಶ್ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಇದೆ. ರಿಷಭ್ ಪಂತ್ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿರುವ ತಂಡ, ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಮೇಲೂ ಕಣ್ಣಿಟ್ಟಿದೆ. ರಿಷಭ್ ಕಳಪೆ ಪ್ರದರ್ಶನ ಮುಂದುವರಿಸಿದರೆ ಮುಂದಿನ ಸರಣಿಗೆ ಅವರನ್ನು ಕೈಬಿಡುವ ಸಾಧ್ಯತೆ ಇದೆ.
ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್; ಭಾರತ-ಆಫ್ರಿಕಾ ಕ್ರಿಕೆಟ್ ಸರಣಿ ಫ್ರೀ!
ಹಾರ್ದಿಕ್ ಹಾಗೂ ಕೃನಾಲ್ ಪಾಂಡ್ಯ ಆಲ್ರೌಂಡರ್‌ಗಳಾಗಿ ತಂಡದಲ್ಲಿದ್ದಾರೆ. ಆಡುವ ಹನ್ನೊಂದರಲ್ಲಿ ಇಬ್ಬರಿಗೂ ಸ್ಥಾನ ಸಿಕ್ಕರೆ ಅಚ್ಚರಿಯಿಲ್ಲ. ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಸಹ ರೇಸ್ನಲ್ಲಿದ್ದಾರೆ.
ಅನನುಭವಿ ಬೌಲಿಂಗ್ ಪಡೆ!: ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್‌ರನ್ನು ಸರಣಿಗೆ ಆಯ್ಕೆ ಮಾಡಿಲ್ಲ. ಹೀಗಾಗಿ ರಾಜಸ್ಥಾನದ ರಾಹುಲ್ ಚಹಾರ್‌ಗೆ ಮತ್ತೊಮ್ಮೆ ಅವಕಾಶ ಸಿಗಲಿದೆ. ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಯುವ ವೇಗಿಗಳಾದ ನವ್‌ದೀಪ್ ಸೈನಿ, ದೀಪಕ್ ಚಹಾರ್, ಖಲೀಲ್ ಅಹ್ಮದ್ ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳಲು ಕಾತರಿಸುತ್ತಿದ್ದಾರೆ.
ಆಫ್ರಿಕಾಕ್ಕೂ ಅನುಭವದ ಕೊರತೆ
ಕ್ವಿಂಟನ್ ಡಿ ಕಾಕ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡಕ್ಕೂ ಅನುಭವಿಗಳ ಕೊರತೆ ಇದೆ. ಫಾಫ್ ಡು ಪ್ಲೆಸಿ, ಇಮ್ರಾನ್ ತಾಹಿರ್ ಸೇರಿದಂತೆ ಕೆಲ ಪ್ರಮುಖ ಹಿರಿಯ ಆಟಗಾರರಿಗೆ ಸ್ಥಾನ ನೀಡಲಾಗಿಲ್ಲ. ಡೇವಿಡ್ ಮಿಲ್ಲರ್ ಮೇಲೆ ನಿರೀಕ್ಷೆ ಹೆಚ್ಚಿದ್ದು, ಕಗಿಸೋ ರಬಾಡ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ.
ಪಿಚ್ ರಿಪೋರ್ಟ್
ಧರ್ಮಶಾಲಾ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್ ಹಬ್ಬ ನಿರೀಕ್ಷೆ ಮಾಡಲಾಗಿದೆ. ಸಂಜೆ ಮೇಲೆ ಇಬ್ಬನಿ ಬೀಳುವ ಕಾರಣ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು. ಕಳೆದ ಬಾರಿ ಉಭಯ ತಂಡಗಳು ಇಲ್ಲಿ ಮುಖಾಮುಖಿಯಾಗಿದ್ದಾಗ ದ.ಆಫ್ರಿಕಾ 200 ರನ್ ಗುರಿ ಬೆನ್ನತ್ತಿ ಗೆಲುವು ಸಾಧಿಸಿತ್ತು.
ತಂಡಗಳ ಪಟ್ಟಿ
ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ನವ್‌ದೀಪ್ ಸೈನಿ.
ದ.ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ನಾಯಕ), ರಾಸ್ಸಿ ವಾನ್ ಡುಸ್ಸೆನ್, ತೆಂಬ ಬವುಮಾ, ಜೂನಿಯರ್ ಡಾಲಾ, ಬೊರ್ನ್ ಫೆäಟ್ರ್ಯುನ್, ಬ್ಯೂರನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಏಂರಿಚ್ ನಾರ್ಟೆ, ಆ್ಯಂಡಿಲೆ ಫೆಲುಕ್ವಾಯೋ, ಡ್ವೇನ್ ಪ್ರಿಟೋರಿಯಸ್, ಕಗಿಸೋ ರಬಾಡ, ತಬ್ರೇಜ್ ಶಮ್ಸಿ, ಜಾಜ್‌ರ್ ಲಿಂಡೆ.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1