ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನೀತು ಮತ್ತು ಸ್ವೀಟಿ
48 ಕೆ.ಜಿ. ವಿಭಾಗದಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತುಗೆ ಫೈನಲ್‌ನಲ್ಲಿ ಸುಲಭ ಜಯ
2018ರ ವಿಶ್ವ ಚಾಂಪಿಯನ್ ಚೀನಾದ ಆಟಗಾರ್ತಿಗೆ ಸೋಲುಣಿಸಿದ ಸ್ವೀಟಿ ಬೋರಾ
ನವದೆಹಲಿ(ಮಾ.26): ಭಾರತದ ತಾರಾ ಬಾಕ್ಸಿಂಗ್ ಪಟುಗಳಾದ ನೀತು ಗಂಗಾಸ್ ಹಾಗೂ ಸ್ವೀಟಿ ಬೋರಾ ಮಹಿಳಾ ಬಾಕ್ಸಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಕೂಟದ 48 ಕೆ.ಜಿ. ವಿಭಾಗದಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತು ಮಂಗೋಲಿಯಾದ ಲುತ್ಸೈಖಾನ್ ವಿರುದ್ಧ 5-0 ಅಂತರದಲ್ಲಿ ಗೆದ್ದು ಚೊಚ್ಚಲ ವಿಶ್ವ ಚಾಂಪಿಯನ್ ಚಿನ್ನಕ್ಕೆ ಮುತ್ತಿಟ್ಟರು. ಆರಂಭದಲ್ಲೇ ಆಕ್ರಮಣಕಾರಿಯಾಗಿ ಪಂಚ್ಗಳ ಮೂಲಕ ಮೇಲುಗೈ ಸಾಧಿಸಿದ ನೀತು ಯಾವ ಕ್ಷಣದಲ್ಲೂ ಎದುರಾಳಿಗೆ ತಿರುಗೇಟು ನೀಡಲು ಅವಕಾಶ ನೀಡಲಿಲ್ಲ.
ಇದೇ ವೇಳೆ 81+ ಕೆ.ಜಿ. ವಿಭಾಗದಲ್ಲಿ ಸ್ವೀಟಿ 2018ರ ವಿಶ್ವ ಚಾಂಪಿಯನ್, ಚೀನಾದ ವ್ಯಾಂಗ್ ಲಿನಾ ವಿರುದ್ಧ 4-3 ಅಂತರದಲ್ಲಿ ಗೆದ್ದು ವಿಶ್ವ ಚಾಂಪಿಯನ್ ಎನಿಸಿಕೊಂಡರು. ಇದರೊಂದಿಗೆ ಲೈಟ್ ಹೇವಿವೈಟ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಬಾಕ್ಸರ್ ಎಂಬ ಖ್ಯಾತಿಗೆ ಪಾತ್ರರಾದರು.
ಭಾನುವಾರ ಹಾಲಿ ಚಾಂಪಿಯನ್ ನಿಖಾತ್ ಜರೀನ್(50 ಕೆ.ಜಿ.) ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೊರ್ಗೋಹೈನ್(75 ಕೆ.ಜಿ.) ಫೈನಲ್‌ನಲ್ಲಿ ಸೆಣಸಾಡಲಿದ್ದು, ಭಾರತಕ್ಕೆ ಮತ್ತೆರಡು ಚಿನ್ನ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.
ಭಾರತಕ್ಕೆ 11ನೇ ಚಿನ್ನ
ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈವರೆಗೆ ಭಾರತ 11 ಪದಕ ತನ್ನದಾಗಿಸಿಕೊಂಡಿದೆ. ಮೇರಿ ಕೋಮ್(2002, 2005, 2006, 2010, 2018), ಸರಿತಾ ದೇವಿ(2006), ಜೆನ್ನಿ(2006), ಲೇಖಾ ಕೆ.ಸಿ.(2006), ನಿಖಾತ್ ಜರೀನ್(2022) ಈ ಮೊದಲು ಚಿನ್ನ ಗೆದ್ದಿದ್ದಾರೆ.
ಸ್ವಿಸ್ ಓಪನ್: ಸಾತ್ವಿಕ್-ಚಿರಾಗ್ ಜೋಡಿ ಫೈನಲ್‌ಗೆ ಲಗ್ಗೆ
ಬಸೆಲ್: ಭಾರತದ ತಾರಾ ಶಟ್ಲರ್‌ಗಳಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ- ಚಿರಾಗ್ ಶೆಟ್ಟಿ ಜೋಡಿ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಡಬಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
Swiss Open 2023: ಹಾಲಿ ಚಾಂಪಿಯನ್ ಸಿಂಧುಗೆ ಸ್ವಿಸ್ ಆಘಾತ
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಯೆವ್ ಸಿನ್-ಟಿಯೋ ಯಿ ಜೋಡಿ ವಿರುದ್ದ 21-19, 17-21, 21-17 ಗೇಮ್‌ಗಳಿಂದ ರೋಚಕ ಜಯಗಳಿಸಿತು. ಭಾನುವಾರ ಫೈನಲ್‌ನಲ್ಲಿ ಚೀನಾದ ಕ್ಷಿಯಾಂಗ್ ಯು ತಾನ್ ಕ್ವಿಯಾಂಗ್ ವಿರುದ್ದ ಸೆಣಸಲಿದ್ದು, ಟೂರ್ನಿಯಲ್ಲಿ ಚೊಚ್ಚಲ ಡಬಲ್ಸ್ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಶೂಟಿಂಗ್ ವಿಶ್ವಕಪ್: ಮನು ಬಾಕರ್ಗೆ ಕಂಚು
ಭೋಪಾಲ್: ಭಾರತದ ತಾರಾ ಶೂಟರ್ ಮನು ಬಾಕರ್ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಕಂಚಿನ ಪದಕ ಗೆದ್ದಿದ್ದು, ಭಾರತದ ಪದಕ ಗಳಿಕೆ 7ಕ್ಕೆ ಏರಿಕೆಯಾಗಿದೆ. ಭೋಪಾಲ್ನಲ್ಲಿ ನಡೆಯುತ್ತಿರುವ ಕೂಟದಲ್ಲಿ ಶನಿವಾರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಮನು 20 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರು. ಚೀನಾದ ಝಿಯು(30 ಅಂಕ) ಚಿನ್ನ, ಜರ್ಮನಿಯ ಡೊರೀನ್(29 ಅಂಕ) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ರಾಷ್ಟ್ರೀಯ ವೇಟ್‌ಲಿಫ್ಟಿಂಗ್: ಶ್ರಬಾನಿ, ಹಜಾರಿಕಾಗೆ ಚಿನ್ನ
ಬೆಂಗಳೂರು: 4ನೇ ಆವೃತ್ತಿಯ ಖೇಲೋ ಇಂಡಿಯಾ ರಾಷ್ಟ್ರೀಯ ಮಹಿಳಾ ರಾರಯಂಕಿಂಗ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಶ್ಚಿಮ ಬಂಗಾಳದ ಶ್ರಬಾನಿ ದಾಸ್, ರೈಲ್ವೇಸ್ನ ಪೋಪಿ ಹಜಾರಿಕಾ ಚಿನ್ನದ ಪದಕ ಗೆದ್ದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದಲ್ಲಿ ಹಿರಿಯ ಮಹಿಳೆಯರ 55 ಕೆ.ಜಿ. ವಿಭಾಗದಲ್ಲಿ ಶ್ರಬಾನಿ 178 ಕೆ.ಜಿ. ಭಾರ ಎತ್ತಿ ಚಿನ್ನ ಪಡೆದರೆ, 59 ಕೆ.ಜಿ. ವಿಭಾಗದಲ್ಲಿ ಹಜಾರಿಕಾ 181 ಕೆ.ಜಿ. ಭಾರ ಎತ್ತಿ ಬಂಗಾರ ತಮ್ಮದಾಗಿಸಿಕೊಂಡರು. ಯುವ ವಿಭಾಗದ 55 ಕೆ.ಜಿ. ಸ್ಪರ್ಧೆಯಲ್ಲಿ ಬಿಹಾರದ ಕುಶಿ ಕುಮಾರಿ, 59 ಕೆ.ಜಿ. ಸ್ಪರ್ಧೆಯಲ್ಲಿ ಒಡಿಶಾದ ಸುಮಿತ್ರಾ, ಕಿರಿಯರ ವಿಭಾಗದ 59 ಕೆ.ಜಿ. ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ಸೋನಂ ಸಿಂಗ್ ಚಿನ್ನ ಗೆದ್ದುಕೊಂಡರು.