
ನವದೆಹಲಿ(ಅ.19): ಮೂರು ಟೆಸ್ಟ್ ಪಂದ್ಯಗಳಲ್ಲಿನ ಕ್ಲೀನ್‌ಸ್ವೀಪ್ ಸಾಧನೆಯ ನಂತರ ನಡೆಯುತ್ತಿರುವ ಐದು ಏಕದಿನ ಪಂದ್ಯಗಳ ಸರಣಿಯಲ್ಲಿಯೂ ಶುಭಾರಂಭ ಮಾಡಿರುವ ಆತಿಥೇಯ ಭಾರತ ತಂಡ, ಗುರುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಆ ಮೂಲಕ ಕಿವೀಸ್ ವಿರುದ್ಧದ ತನ್ನ ಪ್ರಭುತ್ವ ಮುಂದುವರೆಸುವ ತುಡಿತದಲ್ಲಿದೆ.
ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಎನಿಸಿದೆ. ಇಲ್ಲೀವರೆಗೆ ಈ ಮೈದಾನದಲ್ಲಿ ನಡೆದಿರುವ 17 ಪಂದ್ಯಗಳಲ್ಲಿ 12ರಲ್ಲಿ ಗೆದ್ದಿರುವ ಭಾರತ, ಸೋತಿರುವುದು 5 ಪಂದ್ಯಗಳನ್ನಷ್ಟೆ. ಹಾಗಾಗಿ ಮೇಲ್ನೋಟಕ್ಕೆ ಭಾರತ ತಂಡವೇ ಫೇವರಿಟ್ ಎನಿಸಿದೆ.
ಭಾರತದ ಪ್ರಾಬಲ್ಯ
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಸಮತೋಲಿತ ಪ್ರದರ್ಶನ ನೀಡುತ್ತಿರುವ ಭಾರತ ತಂಡ, ಕಿವೀಸ್ ವಿರುದ್ಧ ಮೊದಲ ಪಂದ್ಯದಲ್ಲೇ ಪ್ರಾಬಲ್ಯ ಸಾಧಿಸಿದೆ. ಸ್ಪಿನ್‌ದ್ವಯರಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾಗೆ ಟೆಸ್ಟ್ ಸರಣಿಯ ನಂತರ ವಿಶ್ರಾಂತಿ ನೀಡಿದ್ದು ಕಿವೀಸ್‌ಗೆ ವರದಾನವಾಗುವ ಸಾಧ್ಯತೆ ಇದೆ ಎಂದು ಭಾವಿಸಲಾಗಿತ್ತಾದರೂ, ಧರ್ಮಶಾಲಾದಲ್ಲಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಪದಾರ್ಪಣೆ ಪಂದ್ಯದಲ್ಲಿಯೇ ಆಕರ್ಷಕ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಕಿವೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ, ಬ್ಯಾಟಿಂಗ್‌ನಲ್ಲಿ ಕೊಹ್ಲಿ ಅಜೇಯ ಅರ್ಧಶತಕದೊಂದಿಗೆ ಕಿವೀಸ್‌ಗೆ ಮುಳುವಾದರು.
ಕೊಹ್ಲಿ ಮಾಂತ್ರಿಕ ಸ್ಪರ್ಶ
ಇತ್ತ ಇಂದೋರ್ ಟೆಸ್ಟ್‌ನಲ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದಲ್ಲದೆ, ಸರಣಿಯಲ್ಲಿ ತಂಡವನ್ನು ಕ್ಲೀನ್‌ಸ್ವೀಪ್ ಸಾಧನೆಯತ್ತ ಮುನ್ನಡೆಸಿದ್ದ ಕೊಹ್ಲಿ, ಏಕದಿನ ಸರಣಿಯಲ್ಲಿಯೂ ಮಿಂಚಿನ ಪ್ರದರ್ಶನ ನೀಡುತ್ತಾ ಸಾಗಿರುವುದು ಭಾರತದ ಪ್ರಾಬಲ್ಯ ಹೆಚ್ಚಿಸಿದೆ. ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, 150ನೇ ಪಂದ್ಯದ ಹೊಸ್ತಿಲಲ್ಲಿರುವ ರೋಹಿತ್ ಶರ್ಮಾ ಹಾಗೂ 9 ಸಹಸ್ರ ರನ್ ಪೂರೈಕೆಗೆ ಕೇವಲ 61 ರನ್ ಹಿನ್ನಡೆಯಲ್ಲಿರುವ ನಾಯಕ ಎಂ.ಎಸ್. ಧೋನಿ ಬ್ಯಾಟಿಂಗ್‌ನಲ್ಲಿ ಮಿಂಚಿದರೆ ತಂಡದ ಮೊತ್ತ ಸ್ಪರ್ಧಾತ್ಮಕವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಮಿತ್ ಮಿಶ್ರಾ, ಅಕ್ಷರ್ ಪಟೇಲ್ ಸ್ಪಿನ್ ವಿಭಾಗದಲ್ಲಿ ಪ್ರಮುಖರಾಗಿದ್ದು, ಕಿವೀಸ್ ಅನ್ನು ಕಾಡುವ ಸಂಭವವಿದೆ.
ಇನ್ನು ಭಾರತ ವಿರುದ್ಧ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಲು ಮುಂದಾಗಿರುವ ಕೇನ್ ವಿಲಿಯಮ್ಸನ್ ಸಾರಥ್ಯದ ಕಿವೀಸ್‌ನಲ್ಲಿ ಎರಡು ಬದಲಾವಣೆಗಳಾಗುವ ಸಾಧ್ಯತೆ ಇದೆ. ಸತತ ವೈಲ್ಯದಲ್ಲಿರುವ ಮಾರ್ಟಿನ್ ಗುಪ್ಟಿಲ್ ಬದಲಿಗೆ ಆ್ಯಂಟನ್ ಡೇವ್‌ಸಿಚ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಟೇಲರ್ ಬದಲು ಹೆನ್ರಿ ನಿಕೊಲಾಸ್ ತಂಡದಲ್ಲಿ ಸ್ಥಾನ ಗಳಿಸುವ ಸಂಭವವಿದೆ. ಒಟ್ಟಾರೆ ಮೇಲಿನ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನದ ಜತೆಗೆ ಮೊನಚಿನ ಬೌಲಿಂಗ್ ಮೊನಚು ಹೊಮ್ಮಿದರೆ ಕಿವೀಸ್ ಜಯದ ಹಾದಿಗೆ ಮರಳಬಹುದಾಗಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ
ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಎಂ.ಎಸ್. ಧೋನಿ (ನಾಯಕ), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಜಸ್ಪ್ರೀತ್ ಬುಮ್ರಾ ಮತ್ತು ಉಮೇಶ್ ಯಾದವ್.
ನ್ಯೂಜಿಲೆಂಡ್
ಟಾಮ್ ಲಾಥಮ್, ಮಾರ್ಟಿನ್ ಗುಪ್ಟಿಲ್/ಏಂಟನ್ ಡೆವ್‌ಸಿಚ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್ / ಹೆನ್ರಿ ನಿಕೊಲಾಸ್, ಕೊರೆ ಆ್ಯಂಡರ್ಸನ್, ಲೂಕ್ ರೊಂಚಿ, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಡಗ್ ಬ್ರಾಸ್‌ವೆಲ್, ಟಿಮ್ ಸೌಥೀ ಮತ್ತು ಇಶ್ ಸೋ.
ಪಂದ್ಯ ಆರಂಭ: ಮಧ್ಯಾಹ್ನ 1.30 ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.