2036ರ ಒಲಿಂಪಿಕ್ಸ್‌ ಆತಿಥ್ಯಕ್ಕಾಗಿ ನಿರಂತರ ಮಾತುಕತೆ: ಆತಿಥ್ಯದ ರೇಸ್‌ನಲ್ಲಿ ಗುಜರಾತ್ ಮೊದಲು!

Published : Aug 12, 2025, 11:09 AM IST
india, olympics 2036,

ಸಾರಾಂಶ

ಭಾರತವು 2036ರ ಒಲಿಂಪಿಕ್ಸ್‌ ಅನ್ನು ಆಯೋಜಿಸುವ ಸಾಧ್ಯತೆಗಳ ಬಗ್ಗೆ ಕೇಂದ್ರ ಕ್ರೀಡಾ ಸಚಿವರು ಮಾಹಿತಿ ನೀಡಿದ್ದಾರೆ. ಐಒಸಿಗೆ ಬಿಡ್‌ ಸಲ್ಲಿಸಲಾಗಿದ್ದು, ಗುಜರಾತ್‌ ರಾಜ್ಯವು ಮುಂಚೂಣಿಯಲ್ಲಿದೆ.  

ನವದೆಹಲಿ: ಭಾರತವು 2036ರ ಒಲಿಂಪಿಕ್ಸ್‌ ಆತಿಥ್ಯ ವಹಿಸುವ ಉಮೇದಿನಲ್ಲಿದ್ದು, ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಯು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮಾತುಕತೆ ಹಂತದಲ್ಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮಾನ್ಸುಖ್‌ ಮಾಂಡವೀಯ ಹೇಳಿದ್ದಾರೆ.

ಲೋಕಸಭೆಯಲ್ಲಿ ಈ ಸಂಬಂಧ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಭಾರತದ ಒಲಿಂಪಿಕ್‌ ಸಮಿತಿಯು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಗೆ ಬಿಡ್‌ಗೆ ಸಂಬಂಧಿಸಿದ ಪತ್ರವನ್ನು ಕಳುಹಿಸಿದೆ. ಅಲ್ಲದೆ ಭವಿಷ್ಯದ ಒಲಿಂಪಿಕ್ಸ್‌ ಆತಿಥ್ಯದ ಆಯೋಗದೊಂದಿಗೆ ನಿರಂತರ ಚರ್ಚೆಯಲ್ಲಿ ತೊಡಗಿಸಿಕೊಂಡಿದೆ’ ಎಂದರು,

ಭಾರತ ಇದುವರೆಗೆ ಆತಿಥೇಯ ವಹಿಸುವ ಅಧಿಕೃತ ನಗರವನ್ನು ಪ್ರಸ್ತಾಪ ಮಾಡದಿದ್ದರೂ ಗುಜರಾತ್‌ ಮುಂಚೂಣಿಯಲ್ಲಿದೆ. ಅಲ್ಲದೆ ದೇಶದ ಇತರ ಕೆಲವು ನಗರಗಳಲ್ಲೂ ಕೆಲ ಕ್ರೀಡೆಗಳನ್ನು ಆಡಿಸುವ ಉದ್ದೇಶವಿದೆ ಎಂದು ಹೇಳಲಾಗುತ್ತಿದೆ.

ಪೋಲೆಂಡ್‌ ಡೈಮಂಡ್‌ ಲೀಗ್‌ಗೆ ಇಲ್ಲ ನೀರಜ್

ನವದೆಹಲಿ: ಪೋಲೆಂಡ್‌ನ ಸಿಲೆಸಿಯಾದಲ್ಲಿ ಆ.16ರಂದು ನಡೆಯಲಿರುವ ಡೈಮೆಂಡ್‌ ಲೀಗ್‌ ಕೂಟದಲ್ಲಿ ಭಾರತದ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಭಾಗವಹಿಸುತ್ತಿಲ್ಲ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೀರಜ್‌ ವಿರುದ್ಧ ಗೆದ್ದು ಚಿನ್ನಕ್ಕೆ ಮುತ್ತಿಟ್ಟಿದ್ದ ಪಾಕಿಸ್ತಾನದ ಅರ್ಶದ್‌ ನದೀಂ ಸಹ ಕೂಟದಲ್ಲಿ ಸ್ಪರ್ಧಿಸುತ್ತಿಲ್ಲ. ನೀರಜ್‌ ಗೈರಿನ ಕಾರಣ ತಿಳಿದುಬಂದಿಲ್ಲ. ಆದರೆ ಪಾಕ್‌ನ ನದೀಂ ಕಳೆದ ತಿಂಗಳು ಶಸ್ತ್ರಚಿಕಿತ್ಸೆಗೆ ಕಾರಣ ಟೂರ್ನಿಯಲ್ಲಿ ಭಾಗಿಯಾಗುತ್ತಿಲ್ಲ.

ನೀರಜ್‌ ಅವರು ಪೋಲೆಂಡ್‌, ಬ್ರಸೆಲ್ಸ್‌ ಮತ್ತು ಜುರಿಚ್‌ನಲ್ಲಿ ನಡೆವ ಡೈಮೆಂಡ್‌ ಲೀಗ್‌ನಲ್ಲಿ ಆಡುವುದು ಅನುಮಾನವಿದ್ದು, ಆದರೂ ಸಹ ಇವರು ಅಂತಿಮ ಸುತ್ತಿಗೆ ಬಹುತೇಕ ಅರ್ಹತೆ ಪಡೆದುಕೊಂಡಿದ್ದಾರೆ.

ಅಂ-22 ಏಷ್ಯನ್ ಬಾಕ್ಸಿಂಗ್‌: ರಿತಿಕಾಗೆ ಚಿನ್ನ, ಭಾರತಕ್ಕೆ 13 ಮೆಡಲ್‌, 4ನೇ ಸ್ಥಾನ

ಬ್ಯಾಂಕಾಕ್‌: ಅಂಡರ್‌-22 ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 80 ಕೆ.ಜಿ. ಮೇಲ್ಪಟ್ಟವರ ವಿಭಾಗದಲ್ಲಿ ಭಾರತದ ರಿತಿಕಾ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇದರೊಂದಿಗೆ ಭಾರತ ಒಟ್ಟು 13 ಪದಕಗಳನ್ನು ಗೆದ್ದು, ಪಟ್ಟಿಯಲ್ಲಿ 4ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದೆ. ರಿತಿಕಾ ಕಜಕಿಸ್ತಾನದ ಅಸೆಲ್ ಟೋಕ್ಟಾಸಿನ್ ಅವರನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟರು. ಮತ್ತೊಂದು ಪಂದ್ಯದಲ್ಲಿ ಯಾತ್ರಿ ಪಟೇಲ್ 57 ಕೆ.ಜಿ. ವಿಭಾಗದಲ್ಲಿ ಉಜ್ಬೇಕಿಸ್ತಾನದ ಖುಮೊರಬೋನು ಮಮಜೊನೊವಾ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರು. ಅಂಡರ್‌-19 ವಿಭಾಗದಲ್ಲಿ ಭಾರತೀಯರು 3 ಚಿನ್ನ, 7 ಬೆಳ್ಳಿ, 4 ಕಂಚು ಸೇರಿದಂತೆ ಒಟ್ಟು 14 ಪದಕ ಗೆದ್ದಿದ್ದು, ಪದಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

ಇಂದಿನಿಂದ ಜೂ. ಹಾಕಿ: 30 ತಂಡ ಭಾಗಿ, ರಾಜ್ಯಕ್ಕೆ ಎ’ ಡಿವಿಷನ್‌ನಲ್ಲಿ ಸ್ಥಾನ

ಜಲಂಧರ್(ಪಂಜಾಬ್‌): 15ನೇ ರಾಷ್ಟ್ರೀಯ ಜೂನಿಯರ್‌ ಪುರುಷರ ಹಾಕಿ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದೆ. ಒಟ್ಟು 30 ತಂಡಗಳು ಪಾಲ್ಗೊಳ್ಳಲಿದ್ದು, ಕರ್ನಾಟಕ ‘ಎ’ ಡಿವಿಷನ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ‘ಡಿ’ ಗುಂಪಿನಲ್ಲಿರುವ ತಂಡಕ್ಕೆ ಆ.16ರಂದು ಆಂಧ್ರಪ್ರದೇಶ ಸವಾಲು ಎದುರಾಗಲಿದ್ದು, ಆ.17ಕ್ಕೆ ಒಡಿಶಾ ವಿರುದ್ಧ ಆಡಲಿದೆ. ‘ಎ’ ಡಿವಿಷನ್‌ನಲ್ಲಿ ಒಟ್ಟು 12 ತಂಡಗಳಿದ್ದು, ಕೊನೆ 2 ಸ್ಥಾನ ಪಡೆಯುವ ತಂಡಗಳು ಮುಂದಿನ ವರ್ಷ ‘ಬಿ’ ಡಿವಿಷನ್‌ನಲ್ಲಿ ಆಡಬೇಕಿದೆ.

ಏಷ್ಯನ್‌ ಸರ್ಫಿಂಗ್‌: ಕಂಚು ಗೆದ್ದ ಕರ್ನಾಟಕದ ರಮೇಶ್‌

ಚೆನ್ನೈ: ಕರ್ನಾಟಕದ ರಮೇಶ್ ಬುಧಿಯಾಲ್‌ ಏಷ್ಯನ್‌ ಸರ್ಫಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡಿದ್ದು, ಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ರಮೇಶ್‌ 12.60 ಅಂಕ ಪಡೆದು ಕಂಚಿಗೆ ತೃಪ್ತಿಪಟ್ಟರು. ಕೊರಿಯಾದ ಕನೋವಾ ಹೀಜೈ(15.17 ಅಂಕ) ಚಿನ್ನ, ಇಂಡೋನೇಷ್ಯಾದ ಪಜರ್‌ ಅರಿಯಾನಾ(14.57 ಅಂಕ) ಬೆಳ್ಳಿಗೆ ಕೊರಳೊಡ್ಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Good News for RCB Fans: ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ? KSCA-BCCI ಮಾತುಕತೆ
ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!