ಲೀಡ್‌ ಕ್ರೀಡಾ ಬಿಲ್‌ ಲೋಕಸಭೆಯಲ್ಲಿ ಪಾಸ್‌; ಬಿಸಿಸಿಐ ಮೇಲೆ ಏನು ಪರಿಣಾಮ?

Published : Aug 12, 2025, 09:15 AM IST
BCCI COE Recruitment 2025 bangalore

ಸಾರಾಂಶ

ಕ್ರೀಡಾ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ. ಬಿಸಿಸಿಐ ಸೇರಿದಂತೆ ಎಲ್ಲಾ ಕ್ರೀಡಾ ಒಕ್ಕೂಟಗಳು ಈ ಮಸೂದೆಯ ವ್ಯಾಪ್ತಿಗೆ ಬರಲಿವೆ. ಕ್ರೀಡಾ ನ್ಯಾಯಾಧಿಕರಣ ಮತ್ತು ಚುನಾವಣಾ ಪ್ಯಾನೆಲ್‌ಗಳ ಸ್ಥಾಪನೆಯೂ ಈ ಮಸೂದೆಯಲ್ಲಿದೆ.

ನವದೆಹಲಿ: ಭಾರತದ ಕ್ರೀಡಾ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಜಾರಿಗೊಳಿಸಲಾಗುತ್ತಿರುವ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಲಭಿಸಿದೆ. ಕ್ರೀಡಾ ನ್ಯಾಯಾಧೀಕರಣ, ಚುನಾವಣೆ ಪ್ಯಾನೆಲ್‌ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಈ ಮಸೂದೆ ಒಳಗೊಂಡಿದೆ. ಶೀಘ್ರದಲ್ಲೇ ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರಗೊಂಡು ಕಾಯ್ದೆಯಾಗುವ ನಿರೀಕ್ಷೆಯಿದೆ.

ಸ್ವತಂತ್ರ ಸಂಸ್ಥೆಯಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಇನ್ನು ಮುಂದೆ ಕೇಂದ್ರದ ಕ್ರೀಡಾ ಆಡಳಿತ ಮಸೂದೆ ವ್ಯಾಪ್ತಿಗೆ ಬರಲಿದೆ. ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ (ಎನ್‌ಎಸ್‌ಎಫ್‌)ಗಳಿಗೆ ಅನ್ವಯಿಸುವ ಎಲ್ಲಾ ನಿಯಮಗಳು ಬಿಸಿಸಿಐಗೆ ಕೂಡ ಅನ್ವಯವಾಗಲಿದೆ.

ಇತ್ತೀಚೆಗಷ್ಟೇ ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಲೋಕಸಭೆಯಲ್ಲಿ ಕ್ರೀಡಾ ಆಡಳಿತ ಮಸೂದೆಯನ್ನು ಮಂಡಿಸಿದ್ದರು. ಸೋಮವಾರ ಅಲ್ಪ ಚರ್ಚೆಯ ಬಳಿಕ ಮಸೂದೆಗೆ ಧ್ವನಿ ಮತದ ಅಂಗೀಕಾರ ಲಭಿಸಿತು. ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ವಿರೋಧ ಪಕ್ಷದ ಸದಸ್ಯರಿಲ್ಲದೆ ಕ್ರೀಡಾ ಬಿಲ್‌ ಪಾಸ್‌ ಆಯಿತು.

ಈ ವೇಳೆ ಮಾತನಾಡಿದ ಸಚಿವ ಮಾಂಡವೀಯ ಅವರು, ‘ಇದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಕ್ರೀಡೆಯ ಅತಿದೊಡ್ಡ ಸುಧಾರಣೆಯಾಗಿದೆ. ಕ್ರೀಡಾ ಒಕ್ಕೂಟಗಳಲ್ಲಿ ಪಾರದರ್ಶಕತೆ, ನ್ಯಾಯಪಾಲನೆ ಹಾಗೂ ಶ್ರೇಷ್ಠ ಆಡಳಿತವನ್ನು ಈ ಬಿಲ್‌ ಖಚಿತಪಡಿಸುತ್ತದೆ’ ಎಂದರು. ಇದೇ ಸಂದರ್ಭ, ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ತಿದ್ದುಪಡಿ ಮಸೂದೆ ಕೂಡಾ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತು.

ಏನಿದು ಕ್ರೀಡಾ ಬಿಲ್‌?:

2011ರಿಂದ ರಾಷ್ಟ್ರೀಯ ಕ್ರೀಡಾ ಸಂಹಿತೆ ಚಾಲ್ತಿಯಲ್ಲಿತ್ತು. ಈಗ ಅದನ್ನು ಬದಲಾಯಿಸಿ ಕ್ರೀಡಾ ಆಡಳಿತ ಮಸೂದೆ 2025 ಪರಿಚಯಿಸಲಾಗಿದೆ. ಇದರಲ್ಲಿ ರಾಷ್ಟ್ರೀಯ ಕ್ರೀಡಾ ಮಂಡಳಿ(ಎನ್‌ಎನ್‌ಬಿ), ರಾಷ್ಟ್ರೀಯ ಕ್ರೀಡಾ ನ್ಯಾಯಾಧಿಕರಣ(ಎನ್‌ಎಸ್‌ಟಿ), ರಾಷ್ಟ್ರೀಯ ಕ್ರೀಡಾ ಚುನಾವಣಾ ಪ್ಯಾನೆಲ್ ಸ್ಥಾಪನೆಗೆ ಅವಕಾಶ ರೂಪಿಸಲಾಗಿದೆ. ಎನ್‌ಎಸ್‌ಬಿಯು ಬಿಸಿಸಿಐ ಸೇರಿ ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಕಾರ್ಯವೈಖರಿ ಮೇಲೆ ಕಣ್ಣಿಡಲಿದ್ದು, ಕಾರ್ಯಚಟುವಟಿಕೆಗಳು ನಿಯಮಾನುಸಾರ ನಡೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಿದೆ.

ಇನ್ನು, ಕ್ರೀಡಾಪಟುಗಳ ಆಯ್ಕೆ, ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಚುನಾವಣೆ ವಿವಾದ, ಆಡಳಿತ ಹಾಗೂ ಹಣಕಾಸು ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಂಡು ಅವುಗಳನ್ನು ಇತ್ಯರ್ಥಗೊಳಿಸುವ ಹೊಣೆ ಕ್ರೀಡಾ ನ್ಯಾಯಾಧಿಕರಣದ ಮೇಲಿರಲಿದೆ. ಇದಕ್ಕೆ ಸಿವಿಲ್‌ ಕೋರ್ಟ್‌ನ ಮಾನ್ಯತೆ ಇರಲಿದ್ದು, ನ್ಯಾಯಾಧಿಕರಣದ ತೀರ್ಪನ್ನು ಕೇವಲ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ.

ಬಿಲ್‌ನಲ್ಲಿ ಏನಿರಲಿವೆ?

- ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎನ್‌ಬಿ)

- ರಾಷ್ಟ್ರೀಯ ಕ್ರೀಡಾ ನ್ಯಾಯಾಧಿಕರಣ (ಎನ್‌ಎಸ್‌ಟಿ)

- ರಾಷ್ಟ್ರೀಯ ಕ್ರೀಡಾ ಚುನಾವಣಾ ಪ್ಯಾನೆಲ್ ಸ್ಥಾಪನೆ

ಬಿಸಿಸಿಐ ಮೇಲೆ ಏನು ಪರಿಣಾಮ?

ಬಿಸಿಸಿಐ ಒಂದು ಖಾಸಗಿ ಸಂಸ್ಥೆಯಾಗಿದ್ದು, ಸರ್ಕಾರದ ನಿಯಂತ್ರಣದಿಂದ ಹೊರಗಿದೆ. ಆದರೆ ಕ್ರೀಡಾ ಆಡಳಿತ ಮಸೂದೆಯು ರಾಜ್ಯಸಭೆಯಲ್ಲೂ ಅಂಗೀಕಾರ ಪಡೆದು, ಕಾಯ್ದೆಯಾಗಿ ಜಾರಿಗೆ ಬಂದರೆ ದೇಶದ ಇತರೆಲ್ಲಾ ಕ್ರೀಡಾ ಒಕ್ಕೂಟಗಳ ಬಿಸಿಸಿಐ ಮೇಲೂ ಸರ್ಕಾರ ಕಣ್ಣಿಡಲಿದೆ. ಅಲ್ಲದೆ, ತನ್ನ ವಾರ್ಷಿಕ ಮಾನ್ಯತೆಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ವಿವಾದದ ಸಂದರ್ಭದಲ್ಲಿ ನೇರವಾಗಿ ನ್ಯಾಯಾಲಯಗಳ ಮೆಟ್ಟಿಲೇರುವ ಮೊದಲು ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿಯನ್ನು ಸಂಪರ್ಕಿಸಬೇಕಾಗುತ್ತದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ