ಶೀಘ್ರ ಐಪಿಎಲ್‌ ಮಾದರಿಯಲ್ಲಿ ಖೋ-ಖೋ ಲೀಗ್‌!

By Web Desk  |  First Published Apr 3, 2019, 12:47 PM IST

ಐಪಿಎಲ್‌ ಮಾದರಿಯಲ್ಲಿ ಖೋ-ಖೋ ಪಂದ್ಯಾವಳಿ ನಡೆಯಲಿದ್ದು, 21 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ 8 ನಗರಗಳ ತಂಡಗಳು ಇರಲಿವೆ. ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಒಟ್ಟು 60 ಪಂದ್ಯಗಳು ನಡೆಯಲಿವೆ. 


ನವದೆಹಲಿ[ಏ.03]: ಭಾರತದಲ್ಲಿ ಮತ್ತೊಂದು ಕ್ರೀಡಾ ಲೀಗ್‌ ಆರಂಭಗೊಳ್ಳುತ್ತಿದೆ. ಪ್ರೊ ಕಬಡ್ಡಿ ಟೂರ್ನಿಯಿಂದ ದೇಶೀಯ ಕ್ರೀಡೆ ಕಬಡ್ಡಿ ಹೊಸ ರೂಪ ಪಡೆದುಕೊಂಡು, ಗಳಿಸುತ್ತಿರುವ ಯಶಸ್ಸನ್ನು ಕಂಡು ಭಾರತೀಯ ಖೋ-ಖೋ ಫೆಡರೇಷನ್‌ (ಕೆಕೆಎಫ್‌ಐ) ದೇಶದಲ್ಲಿ ಇದೇ ಮೊದಲ ಬಾರಿಗೆ ಖೋ-ಖೋ ಫ್ರಾಂಚೈಸಿ ಲೀಗ್‌ ಆರಂಭಿಸಿದೆ. ಮಂಗಳವಾರ ಚಾಲನೆ ಪಡೆದ ಲೀಗ್‌ಗೆ ಅಲ್ಟಿಮೇಟ್‌ ಖೋ-ಖೋ ಎಂದು ನಾಮಕರಣ ಮಾಡಲಾಗಿದೆ.

ಕೆಕೆಎಫ್‌ಐ ಹಾಗೂ ಉದ್ಯಮಿ ಅಮಿತ್‌ ಬರ್ಮನ್‌ ಜಂಟಿಯಾಗಿ ಈ ಲೀಗ್‌ ಸ್ಥಾಪಿಸಿದ್ದಾರೆ. ಉದ್ಘಾಟನಾ ಆವೃತ್ತಿಗೆ ಬರ್ಮನ್‌ 10 ಕೋಟಿ ರುಪಾಯಿ ಬಂಡವಾಳ ಹೂಡುತ್ತಿದ್ದು, ಈ ಮೊತ್ತವನ್ನು ಫ್ರಾಂಚೈಸಿ ಶುಲ್ಕವಾಗಿ ಕೆಕೆಎಫ್‌ಐಗೆ ಪಾವತಿಸಲಿದ್ದಾರೆ.

Latest Videos

undefined

ಪಂದ್ಯಾವಳಿ ಮಾದರಿ ಹೇಗೆ?: ಐಪಿಎಲ್‌ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. 21 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ 8 ನಗರಗಳ ತಂಡಗಳು ಇರಲಿವೆ. ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಒಟ್ಟು 60 ಪಂದ್ಯಗಳು ನಡೆಯಲಿವೆ. ವಿಶ್ವದ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಖೋ-ಖೋ ಕ್ರೀಡೆಯನ್ನು ಆಡಲಾಗುತ್ತದೆ. ಭಾರತ ಸೇರಿ ಇಂಗ್ಲೆಂಡ್‌, ದಕ್ಷಿಣ ಕೊರಿಯಾ, ಇರಾನ್‌, ಬಾಂಗ್ಲಾದೇಶ, ನೇಪಾಳ ಹಾಗೂ ಶ್ರೀಲಂಕಾ ರಾಷ್ಟ್ರಗಳ ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂಡರ್‌-18 ಆಟಗಾರರಿಗೂ ಟೂರ್ನಿಯಲ್ಲಿ ಅವಕಾಶ ನೀಡಲಾಗುತ್ತದೆ.

ಮೆಹ್ತಾ ಲೀಗ್‌ ಅಧ್ಯಕ್ಷ: ಮಾಜಿ ಕೆಕೆಎಫ್‌ಐ ಅಧ್ಯಕ್ಷ, ಹಾಲಿ ಭಾರತೀಯ ಒಲಿಂಪಿಕ್‌ ಸಂಸ್ಥೆ ಕಾರ್ಯದರ್ಶಿ ರಾಜೀವ್‌ ಮೆಹ್ತಾರನ್ನು ಅಲ್ಟಿಮೇಟ್‌ ಖೋ-ಖೋ ಲೀಗ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪ್ರತಿ ತಂಡದಲ್ಲಿ 12 ಆಟಗಾರರು ಇರಲಿದ್ದಾರೆ. ಈ ಪೈಕಿ ಇಬ್ಬರು ವಿದೇಶಿಗರು, ಒಬ್ಬ ಅಂಡರ್‌-18 ಹಾಗೂ ಒಬ್ಬ ತಾರಾ ಆಟಗಾರ ಇರಲಿದ್ದಾರೆ. 9 ಆಟಗಾರರು ಪಂದ್ಯದಲ್ಲಿ ಆಡಲಿದ್ದು, ಮೂವರು ಮೀಸಲು ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರತಿ ಪಂದ್ಯ ತಲಾ 9 ನಿಮಿಷಗಳ 4 ಅವಧಿಗಳಲ್ಲಿ ನಡೆಯಲಿದೆ. ಉದ್ಘಾಟನಾ ಆವೃತ್ತಿಯ ಪಂದ್ಯಗಳನ್ನು ಭಾರತದ 2 ನಗರಗಳಲ್ಲಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಪಶ್ಚಿಮ ಹಾಗೂ ದಕ್ಷಿಣ ಭಾರತದಲ್ಲಿ ಖೋ-ಖೋ ಹೆಚ್ಚು ಜನಪ್ರಿಯತೆ ಪಡೆದಿದ್ದು, ಈ ಭಾಗದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ಮೆಹ್ತಾ ಮಾಹಿತಿ ನೀಡಿದ್ದಾರೆ.

ಮುಂದಿನ ಒಂದು ತಿಂಗಳಲ್ಲಿ ಟೆಂಡರ್‌ ಮೂಲಕ ತಂಡಗಳ ಮಾಲೀಕರನ್ನು ನಿರ್ಧರಿಸಲಾಗುವುದು. ಆ ಬಳಿಕ ಆಟಗಾರರ ಡ್ರಾಫ್ಟ್‌ ಹಾಗೂ ತಾರಾ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ವರ್ಷ ಸೆಪ್ಟೆಂಬರ್‌ ಇಲ್ಲವೇ ಅಕ್ಟೋಬರ್‌ನಲ್ಲಿ ಉದ್ಘಾಟನಾ ಆವೃತ್ತಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಅಲ್ಟಿಮೇಟ್‌ ಖೋ-ಖೋ ವಿವರ

* 8 ನಗರಗಳ ತಂಡಗಳು, 21 ದಿನ

* ಡಬಲ್‌ ರೌಂಡ್‌ ರಾಬಿನ್‌ ಮಾದರಿ

* ಟೂರ್ನಿಯಲ್ಲಿ ಒಟ್ಟು 60 ಪಂದ್ಯಗಳು

* ಪ್ರತಿ ತಂಡದಲ್ಲಿ ತಲಾ 12 ಆಟಗಾರರು

* ಪ್ರತಿ ತಂಡದಲ್ಲಿ ಇಬ್ಬರು ವಿದೇಶಿಗರು

* ತಲಾ 9 ನಿಮಿಷಗಳ 4 ಅವಧಿಗಳ ಪಂದ್ಯ

* 2019ರ ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಲೀಗ್‌

click me!