ಲಂಕಾ ಮಣಿಸಿ ಫೈನಲ್'ಗೆ ಲಗ್ಗೆಯಿಟ್ಟ ವನಿತೆಯರ ಟೀಂ ಇಂಡಿಯಾ

Published : Dec 01, 2016, 12:39 PM ISTUpdated : Apr 11, 2018, 12:38 PM IST
ಲಂಕಾ ಮಣಿಸಿ ಫೈನಲ್'ಗೆ ಲಗ್ಗೆಯಿಟ್ಟ ವನಿತೆಯರ ಟೀಂ ಇಂಡಿಯಾ

ಸಾರಾಂಶ

ಏಷ್ಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗೆ 121 ರನ್‌'ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವನಿತೆಯರ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌'ಗೆ 69 ರನ್‌ಗಳಿಸಲಷ್ಟೇ ಶಕ್ತವಾಗುವ ಮೂಲಕ ಹೀನಾಯ ಸೋಲುಂಡಿತು.

ಬ್ಯಾಂಕಾಕ್(ಡಿ.01): ಸ್ಟಾರ್ ಆಟಗಾರ್ತಿಯರಾದ ಏಕ್ತಾ ಬಿಶ್ಟ್ ಮತ್ತು ಪ್ರೀತಿ ಬೋಸ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡ, ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ 52ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಫೈನಲ್ ಪ್ರವೇಶಿಸಿದೆ.

ಇಲ್ಲಿನ ಏಷ್ಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗೆ 121 ರನ್‌'ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವನಿತೆಯರ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌'ಗೆ 69 ರನ್‌ಗಳಿಸಲಷ್ಟೇ ಶಕ್ತವಾಗುವ ಮೂಲಕ ಹೀನಾಯ ಸೋಲುಂಡಿತು.

ಸಾಧಾರಣ ಗುರಿ ಬೆನ್ನಟ್ಟಿದ ಶ್ರೀಲಂಕಾ ವನಿತಾ ತಂಡ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕ ಆಟಗಾರ್ತಿ ಚಮಾರಿ ಅಟಪಟ್ಟು (9) ಮತ್ತು ಹಸಿನಿ ಪೆರೇರಾ (6) ಬೇಗನೇ ಔಟ್ ಆದರು. ಕರಾರುವಕ್ ಬೌಲಿಂಗ್ ಪ್ರದರ್ಶಿಸಿದ ಜೂಲನ್ ಗೋಸ್ವಾಮಿ ಮತ್ತು ಅನುಜಾ ಪಾಟೀಲ್ ತಲಾ 1 ವಿಕೆಟ್ ಕೀಳುವುದರೊಂದಿಗೆ ಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡಿದರು. 3ನೇ ವಿಕೆಟ್‌ಗೆ ಪ್ರಬೋದಿನಿ ಮತ್ತು ಸುರಾಂಗಿಕ ಜೋಡಿ ತಂಡಕ್ಕೆ ಕೊಂಚ ಮಟ್ಟಿಗೆ ಆಸರೆಯಾಯಿತು. ಈ ವೇಳೆ ನಾಯಕಿ ಕೌರ್, ಬಿಶ್ಟ್ ಕೈಗೆ ಚೆಂಡನ್ನಿತ್ತರು. ಬಿಶ್ಟ್ ನಾಯಕಿಯ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಸಫಲರಾದರು. 14ರನ್‌ಗಳಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಪ್ರಸಾದಿನಿ ವಿಕೆಟ್ ಪಡೆದರು. ಸುರಾಂಗಿಕ (20)ರನ್‌ಗಳಿಸಿ ಲಂಕಾ ತಂಡದಲ್ಲಿ ಗರಿಷ್ಠ ಸ್ಕೋರರ್ ಎನಿಸಿದರು. ಇನ್ನುಳಿದ ಆಟಗಾರ್ತಿಯರು ಒಂದಂಕಿ ಮೊತ್ತ ದಾಟುವಲ್ಲಿ ಕೂಡ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಲಂಕಾ ತಂಡ 69ರನ್‌ಗಳಿಸಿತು. ಭಾರತದ ಪರ ಏಕ್ತಾ ಬಿಶ್ಟ್(8ಕ್ಕೆ3), ಪ್ರೀತಿ ಬೋಸ್(14ಕ್ಕೆ3) ತಲಾ 3 ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್ ಮತ್ತು ಸ್ಮತಿ ಮಂದನಾ ಉತ್ತಮ ಆರಂಭ ನೀಡುವಲ್ಲಿ ಸಫಲರಾದರು. ಆದರೆ ಸ್ಮತಿ (21)ರನ್‌ಗಳಿಸಿ ಔಟ್ ಆಗಿ ನಿರಾಸೆ ಮೂಡಿಸಿದರು. ನಂತರ ಬಂದ ವೇದಾ ಕೃಷ್ಣಮೂರ್ತಿ, 2ನೇ ವಿಕೆಟ್‌ಗೆ ಮಿಥಾಲಿ ರಾಜ್ ಜತೆ 50ರನ್‌'ಗಳ ಜತೆಯಾಟ ನಿರ್ವಹಿಸಿದರು. ವೇದಾ (21)ರನ್‌'ಗಳಿಸಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮಿಥಾಲಿ ಆಕರ್ಷಕ ಅರ್ಧಶತಕಗಳಿಸಿದರು. ಮಿಥಾಲಿ (62; 59 ಎಸೆತ, 6 ಬೌಂಡರಿ)ರನ್ ದಾಖಲಿಸಿ ಔಟ್ ಆದರು. ನಾಯಕಿ ಹರ್ಮನ್‌ಪ್ರೀತ್ ಕೌರ್ (10) ಕೂಡ ಮಿಥಾಲಿ ಬೆನ್ನಿಗೆ ಔಟ್ ಆದರು. ಇನಿಂಗ್ಸ್‌ನ ಕೊನೆಯ 2 ಎಸೆತಗಳಲ್ಲಿ ಮಿಥಾಲಿ ರನೌಟ್ ಮತ್ತು ಕೌರ್ ಔಟ್ ಆಗುವ ಮೂಲಕ ಇನಿಂಗ್ಸ್‌ಗೆ ಕೊನೆ ಬಿತ್ತು.

ಸಂಕ್ಷಿಪ್ತ ಸ್ಕೋರ್

ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 121

(ಮಿಥಾಲಿ ರಾಜ್ 62, ವೇಧಾ 21, ಪ್ರಬೋದನಿ 20ಕ್ಕೆ1)

ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 69

(ಸುರಾಂಗಿಕ 20, ಪ್ರಸಾದನಿ 14, ಬಿಶ್ಟ್ 8ಕ್ಕೆ3)

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಿನಿ ಹರಾಜಿನ ಬೆನ್ನಲ್ಲೇ KKR ತಂಡಕ್ಕೆ ಬಿಗ್ ಶಾಕ್! ₹9.2 ಕೋಟಿ ನೀಡಿ ಖರೀದಿಸಿದ ಈ ಸ್ಟಾರ್ ಕ್ರಿಕೆಟಿಗ ಐಪಿಎಲ್ ಆಡೋದೇ ಡೌಟ್!
ಟಿ20 ರ್‍ಯಾಂಕಿಂಗ್‌ನಲ್ಲಿ ಬುಮ್ರಾ ದಾಖಲೆ ಧೂಳೀಪಟ; ವರುಣ್ ಚಕ್ರವರ್ತಿ ಹೊಸ ದಾಖಲೆ