
ಮಕೌ(ಡಿ.01): ದೀರ್ಘಕಾಲದಿಂದಲೂ ಗಾಯದಿಂದ ಬಳಲಿದ ಬಳಿಕ ಈಗಷ್ಟೇ ಚೇತರಿಸಿಕೊಂಡಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಮಕೌ ಓಪನ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇಲ್ಲಿನ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಸೈನಾ, ಇಂಡೋನೇಷಿಯಾದ ದಿನಾರ್ ಡೈಶ್ ಆಯುಸ್ಟೈನ್ ಎದುರು 17-21, 21-18, 21-12 ಗೇಮ್'ಗಳಿಂದ ಗೆಲುವು ಪಡೆದು ಎಂಟರಘಟ್ಟಕ್ಕೆ ಕಾಲಿಟ್ಟಿದ್ದಾರೆ.
ಮಾಜಿ ನಂ.1 ಆಟಗಾರ್ತಿ ಸೈನಾ, ರಿಯೊ ಒಲಿಂಪಿಕ್ಸ್ ಕೂಟದಿಂದಲೂ ಸಾಲು ಸಾಲಾಗಿ ಸೋಲಿನ ಕಹಿ ಅನುಭವಿಸಿದ್ದರು. ಅಲ್ಲದೇ ಆಗಸ್ಟ್ ವೇಳೆಯಲ್ಲಿ ಮಂಡಿ ನೋವಿನಿಂದಾಗಿ ಶಸಚಿಕಿತ್ಸೆಗೂ ಒಳಗಾಗಿದ್ದರು. ಪ್ರಮುಖ ಹಂತದ ಪಂದ್ಯಗಳಲ್ಲಿ ಆರಂಭದಲ್ಲೇ ಸೈನಾ ಎಡವಿ ಟೂರ್ನಿಯಿಂದ ಹೊರಬೀಳುತ್ತಿದ್ದರು. ಇದೀಗ ಈ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೇರುವ ಮೂಲಕ ಪ್ರಶಸ್ತಿಯ ಭರವಸೆ ಮೂಡಿಸಿದ್ದಾರೆ.
ಪಂದ್ಯದ ಮೊದಲ ಗೇಮ್'ನ ಆರಂಭದಲ್ಲಿ ಸೈನಾ ಉತ್ತಮ ಆಟದ ಮೂಲಕ ಗಮನಸೆಳೆದರು. ಆದರೆ ನಂತರದ ಆಟದಲ್ಲಿ ಎದುರಾಳಿ ಆಟಗಾರ್ತಿ ತಿರುಗೇಟು ನೀಡುವಲ್ಲಿ ಸಫಲರಾದರು. ಹೀಗಾಗಿ ಮೊದಲ ಗೇಮ್‌ನಲ್ಲಿ ಸೈನಾ ಹಿನ್ನಡೆ ಅನುಭವಿಸಿದರು. ನಂತರದ ಎರಡು ಗೇಮ್'ಗಳಲ್ಲಿ ಪ್ರಭಾವಿ ಆಟವಾಡಿದ ಸೈನಾ ಕ್ರಮವಾಗಿ 3 ಮತ್ತು 9 ಅಂಕಗಳ ಅಂತರ ಕಾಯ್ದುಕೊಂಡು ಪಂದ್ಯ ಜಯಿಸಿದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ, ಚೀನಾದ ಜಾಂಗ್ ಯಿಮಾನ್ ಎದುರು ಸೆಣಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.