Badminton Asia Team Championships 2024: ಪಿವಿ ಸಿಂಧು ಹಾಗೂ 16 ವರ್ಷದ ಆಟಗಾರ ಅನ್ಮೋಲ್ ಖ್ರಾಬ್ ಅವರ ಶ್ರೇಷ್ಠ ನಿರ್ವಹಣೆಯ ನೆರವಿನಿಂದ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 3-2 ಅಂತರದಿಂದ ಥಾಯ್ಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದೆ.
ಕೌಲಾಲಂಪುರ (ಫೆ.18): ಭಾರತ ಬ್ಯಾಡ್ಮಿಂಟನ್ ತಂಡ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಮಲೇಷ್ಯಾದ ಸೆಲಂಗೋರ್‌ನಲ್ಲಿ ಭಾನುವಾರ ಮುಕ್ತಾಯ ಕಂಡ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಥಾಯ್ಲೆಂಡ್ ತಂಡವನ್ನು 3-2 ರಿಂದ ಮಣಿಸುವ ಮೂಲಕ ಭಾರತ ಮಹಿಳಾ ತಂಡ ಇತಿಹಾಸ ನಿರ್ಮಾಣ ಮಾಡಿದೆ. ಖಂಡಾಂತರ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಇದೇ ಮೊದಲ ಭಾರಿಗೆ ಚಾಂಪಿಯನ್ ಆಗಿದೆ. ಅನುಭವಿ ಆಟಗಾರ್ತಿ ಪಿವಿ ಸಿಂಧು, ಗಾಯತ್ರಿ ಗೋಪಿಚಂದ್-ಟ್ರೇಸಾ ಜಾಲಿ ಹಾಗೂ 16 ವರ್ಷದ ಸೆನ್ಸೇಷನಲ್ ಸ್ಟಾರ್ ಅನ್ಮೋಲ್ ಖ್ರಾಬ್ ತಮ್ಮ ಪಂದ್ಯಗಳನ್ನು ಗೆಲ್ಲುವ ಮೂಲಕ ಶಾ ಅಲಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 3-2 ಅಂತರದಿಂದ ಗೆಲವು ಕಂಡಿತು. ಸಾಕಷ್ಟು ಹೋರಾಟದಿಂದ ಕೂಡಿದ ಫೈನಲ್ ಪಂದ್ಯದಲ್ಲಿ ಭಾರತ ಮೊದಲಿಗೆ 2-0ಯಿಂದ ಮುನ್ನಡೆ ಕಂಡಿತ್ತು. ಆದರೆ, ನಂತರದ ಎರಡು ಪಂದ್ಯಗಳಲ್ಲಿ ಥಾಯ್ಲೆಂಡ್ ತಂಡ ಗೆಲುವು ಸಾಧಿಸಿದ್ದರಿಂದ ನಿರ್ಣಾಯಕ ಪಂದ್ಯ ಅನಿವಾರ್ಯವಾಗಿತ್ತು. ಕೊನೆಯ ಪಂದ್ಯದಲ್ಲಿ 16 ವರ್ಷದ ಅನ್ಮೋಲ್ ಅದ್ಭುತ ಆಟವಾಡುವ ಮೂಲಕ, ಭಾರತ ತಂಡ ಐತಿಹಾಸಿಕ ಪದಕ ಟ್ರೋಫಿ ಗೆಲ್ಲಲು ಕಾರಣವಾದರು.
ಎರಡು ವರ್ಷಗಳ ಹಿಂದೆ ಭಾರತ ಬ್ಯಾಡ್ಮಿಂಟನ್ ಕ್ರೀಡೆಯ ಪ್ರತಿಷ್ಠಿತ ಟೂರ್ನಿಯಾಗಿದ್ದ ಥಾಮಸ್ ಕಪ್‌ನಲ್ಲಿ ಗೆಲುವು ಕಂಡಿತ್ತು. ಈ ಬಾರಿ ಸಂಭ್ರಮಿಸುವ ಸರದಿ ಮಾತ್ರ ಭಾರತ ಮಹಿಳಾ ತಂಡದ್ದಾಗಿತ್ತು, ಟೂರ್ನಿಯುದ್ದಕ್ಕೂ ಅದ್ಭುತ ನಿರ್ವಹಣೆ ನೀಡಿದ್ದ ಭಾರತ ತಂಡ, ಬಲಿಷ್ಠ ತಂಡಗಳಾದ ಚೀನಾ, ಹಾಂಕಾಂಗ್, ಜಪಾನ್ ಹಾಗೂ ಥಾಯ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟಿದೆ. ಗಾಯದಿಂದ ಚೇತರಿಸಿಕೊಂಡು ಆಡುತ್ತಿರುವ ಮೊದಲ ಟೂರ್ನಿಯಲ್ಲಿಯೇ ಪಿವಿ ಸಿಂಧು ಮಿಂಚಿನ ನಿರ್ವಹಣೆ ತೋರಿಸಿದರು. 39 ನಿಮಿಷಗಳ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಸುಪನಿಂದಾ ಕತೆತೊಂಗ್‌ರನ್ನು 21-12, 21-12 ರಿಂದ ಮಣಿಸಿ ಭಾರತಕ್ಕೆ 1-0 ಮುನ್ನಡೆ ನೀಡಿದ್ದರು.
ನಂತರ ನಡೆದ ಡಬಲ್ಸ್ ಪಂದ್ಯದಲ್ಲಿ ಗಾಯತ್ರಿ ಗೋಪಿಚಂದ್ ಹಾಗೂ ಜೊಲ್ಲಿ ಟ್ರೇಸಾ ಜೋಡಿ ಮೂರು ಗೇಮ್‌ಗಳ ಹೋರಾಟದಲ್ಲಿ ಜೊಂಗ್‌ಕೋಲ್ಫಾಮ್ ಕಿಟಿತಾರಾಕುಲ್ ಮತ್ತು ರಾವ್ವಿಂಡ ಪ್ರಜೊಂಗ್ಜಲ್‌ರನ್ನು 21-16. 18-21, 21-16 ರಿಂದ ಸೋಲಿಸಿದರು. ಅಂತಿಮ ಗೇಮ್‌ನಲ್ಲಿ 6-11 ರಿಂದ ಹಿಂದಿದ್ದ ಭಾರತದ ಜೋಡಿ ಭರ್ಜರಿಯಾಗಿ ತಿರುಗೇಟು ಮೂಲಕ ಗೆಲುವು ಕಂಡಿತು. ಇದು ಐದು ಪಂದ್ಯಗಳ ಫೈನಲ್‌ನ ಮೊದಲ ಡಬಲ್ಸ್ ಪಂದ್ಯವಾಗಿತ್ತು.
Breaking: 122 ರನ್‌ಗೆ ಇಂಗ್ಲೆಂಡ್ ಆಲೌಟ್, ಟೆಸ್ಟ್ ಇತಿಹಾಸದ ಅತಿದೊಡ್ಡ ಗೆಲುವು ಕಂಡ ಭಾರತ!
2ನೇ ಡಬಲ್ಸ್ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ ನಜೋಮಿ ಓಕುಹರಾರನ್ನು ಸೆಮಿಫೈನಲ್‌ನಲ್ಲಿ ಮಣಿಸಿದ್ದ ಆಶ್ಮಿತಾ ಚಾಲಿಯಾ 11-21, 14-21 ರಿಂದ ಬುಸಾನನ್ ಒಂಗ್ಬಮ್ರುಂಗ್ಫಾನ್‌ಗೆ ಶರಣಾಗಿದ್ದರು. ಇದರಿಂದಾಗಿ ಭಾರತದ ಮುನ್ನಡೆ 2-1ಕ್ಕೆ ಇಳಿದಿತ್ತು. ಭಾರತ ಎರಡನೇ ಡಬಲ್ಸ್ ಪಂದ್ಯದಲ್ಲೂಸೋಲು ಕಂಡಿತ್ತು. ಬ್ಯಾಕ್ ಅಪ್ ಜೋಡಿಯಾದ ಪ್ರಿಯಾ ಕೊಂಜೆಂಗ್‌ಬಾಮ್ ಮತ್ತು ಶ್ರುತಿ ಮಿಶ್ರಾ ನೇರ ಗೇಮ್‌ಗಳಲ್ಲಿ ಬೆನ್ಯಾಪಾ ಐಮ್‌ಸಾರ್ಡ್ ಮತ್ತು ನುಂಟಕರ್ನ್ ಐಮ್‌ಸಾರ್ಡ್ ವಿರುದ್ಧ ಸೋಲು ಕಂಡಿದ್ದರು. ಆದರೆ, ಅಂತಿಮ ಹಾಗೂ ನಿರ್ಣಾಯಕವಾಗಿದ್ದ ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ಶ್ರೇಯಾಂಕದಲ್ಲಿ 472ನೇ ಸ್ಥಾನದಲ್ಲಿರುವ 16 ವರ್ಷದ ಅನ್ಮೋಲ್ ಖ್ರಾಬ್, ವಿಶ್ವ ನಂ.45 ಆಟಗಾರ್ತಿ ಪೋರ್ನ್‌ಪಿಚಾ ಚೋಯಿಕೀವಾಂಗ್‌ರನ್ನು ನೇರ ಗೇಮ್‌ಗಳಲ್ಲಿ ಮಣಿಸಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ನೀಡಿದರು.
ಕ್ರಿಕೆಟಿಗ ಯುವರಾಜ್ ಸಿಂಗ್ ತಾಯಿ ಮನೆಯಲ್ಲಿ ಕಳ್ಳತನ; ನಗದು, ಚಿನ್ನಾಭರಣ ದೋಚಿ ಎಸ್ಕೇಪ್!