ಐರ್ಲೆಂಡ್ ವಿರುದ್ಧ ಭಾರತಕ್ಕೆ 76 ರನ್‌ಗಳ ಭರ್ಜರಿ ಗೆಲುವು

First Published Jun 27, 2018, 11:54 PM IST
Highlights

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಿರೀಕ್ಷೆಯಂತೆ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಕೊಹ್ಲಿ ಸೈನ್ಯದ ಆರ್ಭಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್

ಡಬ್ಲಿನ್(ಜೂ.27): ರೋಹಿತ ಶರ್ಮಾ, ಶಿಖರ್ ಧವನ್ ಬ್ಯಾಟಿಂಗ್ ಆರ್ಭಟ ಹಾಗೂ ಕುಲದೀಪ್ ಯಾದವ್, ಯಜುವೇಂದ್ರ ಚೆಹಾಲ್ ಸ್ಪಿನ್ ಮೋಡಿಯಿಂದ  ಐರ್ಲೆಂಡ್ ವಿರುದ್ಧದ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತ 76 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 2 ಪಂದ್ಯಗಳ  ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ಆಸರೆಯಾದರು. ಧವನ್ 74 ರನ್ ಸಿಡಿಸಿ ಔಟಾದರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ಸುರೇಶ್ ರೈನಾ ಕೇವಲ 10 ರನ್ ಸಿಡಿಸಿ ಔಟಾದರು. ಎಂ ಎಸ್ ಧೋನಿ ಕೇವಲ 11 ರನ್ ಗಳಿಸಿ ನಿರ್ಗಮಿಸಿದರು. ಆದರೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ 97 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 3 ರನ್‌ಗಳಿಂದ ಶತಕ ವಂಚಿತರಾದರು. 

ಆರಂಭದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ, ಇದೀಗ ದಿಢೀರ್ ವಿಕೆಟ್ ಕಳೆದುಕೊಂಡಿತು.  ಹೀಗಾಗಿ ಟೀಂ ಇಂಡಿಯಾ ನಿಗಧಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತ್ತು. ಐರ್ಲೆಂಡ್ ಪರ ಪೀಟರ್ ಚೇಸ್ 4 ವಿಕೆಟ್ ಪಡೆದು ಮಿಂಚಿದರು.

209 ರನ್ ಟಾರ್ಗೆಟ್ ಪಡೆದ ಐರ್ಲೆಂಡ್ 5 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಪತನಗೊಂಡಿತು. ಆದರೆ ಜೇಮ್ಸ್ ಶಾನನ್ ಹಾಗೂ ಆಂಡ್ರ್ಯೂ ಬಾಲ್ಬಿರಿನೆ ಜೊತೆಯಾಟದ ಐರ್ಲೆಂಡ್ ಚೇತರಿಸಿಕೊಂಡಿತು. ಆಂಡ್ರ್ಯೂ 11ರನ್ ಸಿಡಿಸಿ ನಿರ್ಗಮಿಸಿದರು. ಭಾರತೀಯ ಮೂಲದ ಸಿಮಿ ಸಿಂಗ್ ಕೇವಲ 7 ರನ್‌ಗೆ ಔಟಾಗೋ ಮೂಲಕ ನಿರಾಸೆ ಅನುಭವಿಸಿದರು. ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಶಾನನ್ 60 ರನ್‌ಗಳಿಸಿ ಪೆವಿಲಿಯನ್ ಸೇರಿದರು.

ಶಾನನ್ ವಿಕೆಟ್ ಪತನದೊಂದಿಗೆ ಐರ್ಲೆಂಡ್ ದಿಢೀರ್ ಕುಸಿತ ಕಂಡಿತು. ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚೆಹಾಲ್ ಸ್ಪಿನ್ ಮೋಡಿಗೆ ಐರ್ಲೆಂಡ್ ತತ್ತರಿಸಿತು. ನಾಯಕ ಗ್ಯಾರಿ ವಿಲಿಯಮ್ಸ್, ಕೆವಿನ್ ಒಬ್ರಿಯಾನ್ ,ಸ್ಟುವರ್ಟ್ ಥಾಂಪ್ಸನ್ ಸೇರಿದಂತೆ ಐರ್ಲೆಂಡ್ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಿಗಧಿತ 20 ಓವರ್‌ಗಳಲ್ಲಿ ಐರ್ಲೆಂಡ್ 9 ವಿಕೆಟ್ ನಷ್ಟಕ್ಕೆ 132 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಭಾರತದ ಪರ ಕುಲದೀಪ್ ಯಾದವ್ 4 ಹಾಗೂ ಯಜುವೆಂದ್ರೆ ಚೆಹಾಲ್ 3 ವಿಕೆಟ್ ಪಡೆದು ಮಿಂಚಿದರು. ಬ್ಯಾಟಿಂಗ್ ಅಬ್ಬರಿಸಿ 97 ರನ್ ಸಿಡಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
 

click me!