ಭುವಿ ಮಾರಕ ದಾಳಿಗೆ ತತ್ತರಿಸಿದ ಹರಿಣಗಳು; ಟಿ20ಯಲ್ಲೂ ಟೀಂ ಇಂಡಿಯಾ ಶುಭಾರಂಭ

By Suvarna Web DeskFirst Published Feb 18, 2018, 9:55 PM IST
Highlights

ಈ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವುದರೊಂದಿಗೆ ಟೆಸ್ಟ್, ಒನ್'ಡೇ ಹಾಗೂ ಟಿ20 ಕ್ರಿಕೆಟ್'ನಲ್ಲಿ 5 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನ್ನುವ ಗೌರವಕ್ಕೆ ಭುವನೇಶ್ವರ್ ಕುಮಾರ್ ಪಾತ್ರರಾದರು.

ವಾಂಡರರ್ಸ್(ಫೆ.18): ಶಿಖರ್ ಧವನ್ ಆಕರ್ಷಕ ಶತಕ ಹಾಗೂ ಭುವನೇಶ್ವರ್ ಕುಮಾರ್ ಚಾಣಾಕ್ಷ ಬೌಲಿಂಗ್ ನೆರವಿನಿಂದ ಟೀಂ ಇಂಡಿಯಾ ಮೊದಲ ಟಿ20 ಪಂದ್ಯವನ್ನು 28 ರನ್'ಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ. ಈ ಮೂಲಕ ಟಿ20ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ.

ಭಾರತ ನೀಡಿದ್ದ ಸವಾಲಿನ ಗುರಿಬೆನ್ನತ್ತಿದ ಹರಿಣಗಳ ಪಡೆ ಆರಂಭದಲ್ಲೇ ಮುಗ್ಗರಿಸಿತು. ಸ್ಫೋಟಕ ಬ್ಯಾಟಿಂಗ್ ಮಾಡುವ ಮುನ್ಸೂಚನೆ ನೀಡಿದ್ದ ಜೆ.ಜೆ. ಸ್ಮುಟ್ಸ್(14) ಅವರನ್ನು ಭುವನೇಶ್ವರ್ ಕುಮಾರ್ ಪೆವಿಲಿಯನ್ ದಾರಿ ತೋರಿಸಿದರು. ಇದರ ಬೆನ್ನಲ್ಲೇ ನಾಯಕ ಡುಮಿನಿ(3) ಅವರನ್ನೂ ಭುವಿ ಬಲಿ ಪಡೆದರು. ಮಿಲ್ಲರ್ ಆಟ ಕೇವಲ 9 ರನ್'ಗಳಿಗೆ ಸೀಮಿತವಾಯಿತು. ಈ ವೇಳೆ ಆಫ್ರಿಕಾ ಸ್ಕೋರ್ 6.2 ಓವರ್'ಗಳಲ್ಲಿ 48/3.

ನಾಲ್ಕನೇ ವಿಕೆಟ್'ಗೆ ಬೆಹ್ರದ್ದೀನ್ ಹಾಗೂ ರೀಜಾ ಹೆನ್ರಿಕೇಸ್ 81 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಚಾಹಲ್ ಯಶಸ್ವಿಯಾರದರು. ದೊಡ್ಡಹೊಡೆತಕ್ಕೆ ಮುಂದಾದ ಬೆಹ್ರದ್ದೀನ್(39) ಪಾಂಡೆಗೆ ಕ್ಯಾಚಿತ್ತು ನಿರ್ಗಮಿಸಿದರು. 17ನೇ ಓವರ್'ನಲ್ಲಿ ದಾಳಿಗಿಳಿದ ಭುವನೇಶ್ವರ್ ಕುಮಾರ್ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಹೆನ್ರಿಕೇಸ್(70) ಅವರನ್ನು ಪೆವಿಲಿಯನ್'ಗೆ ಕಳಿಸುವಲ್ಲಿ ಭುವಿ ಯಶಸ್ವಿಯಾದರು. ಅದೇ ಓವರ್'ನ 4ನೇ ಎಸೆತದಲ್ಲೇ ಕ್ಲೇಸನ್ ಸಹಾ ರೈನಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಮರು ಎಸೆತದಲ್ಲಿ ಮೋರಿಸ್ ಕೂಡಾ ರೈನಾಗೆ ಕ್ಯಾಚಿತ್ತು ಹೊರನಡೆದರು. ಕೊನೆಯ ಎಸೆತದಲ್ಲಿ ಇಲ್ಲದ ರನ್ ಕದಿಯಲು ಹೋಗಿ ಪೀಟರ್'ಸನ್ ರನೌಟ್'ಗೆ ಬಲಿಯಾದರು. ಒಂದೇ ಓವರ್'ನಲ್ಲಿ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಆಫ್ರಿಕಾ ಬಹುತೇಕ ಪಂದ್ಯವನ್ನು ಕೈಚೆಲ್ಲಿತ್ತು. ಕೊನೆಯ ಓವರ್'ನಲ್ಲಿ ಉನಾದ್ಕತ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಆಫ್ರಿಕಾ ನಿಗದಿತ 20 ಓವರ್'ಗಳಲ್ಲಿ 175 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ ಪರ ಭುವಿ 5 ವಿಕೆಟ್ ಪಡೆದರೆ, ಉನಾದ್ಕತ್, ಪಾಂಡ್ಯ ಹಾಗೂ ಚಹಲ್ ತಲಾ ಒಂದೊಂದು ವಿಕೆಟ್ ಪಡೆದರು.

ದಾಖಲೆಗಳು:

ಟಿ20 ಕ್ರಿಕೆಟ್'ನಲ್ಲಿ 134 ಕ್ಯಾಚ್ ಹಿಡಿಯುವುದರೊಂದಿಗೆ ಅತಿಹೆಚ್ಚು ಕ್ಯಾಚ್ ಹಿಡಿದ ವಿಕೆಟ್ ಕೀಪರ್ ಎನ್ನುವ ಶ್ರೇಯಕ್ಕೆ ಧೋನಿ ಪಾತ್ರರಾದರು. ಈ ಮೊದಲು ಈ ದಾಖಲೆ ಸಂಗಕ್ಕರ(133) ಹೆಸರಿನಲ್ಲಿತ್ತು.

ಈ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವುದರೊಂದಿಗೆ ಟೆಸ್ಟ್, ಒನ್'ಡೇ ಹಾಗೂ ಟಿ20 ಕ್ರಿಕೆಟ್'ನಲ್ಲಿ 5 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನ್ನುವ ಗೌರವಕ್ಕೆ ಭುವನೇಶ್ವರ್ ಕುಮಾರ್ ಪಾತ್ರರಾದರು.

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಶಿಖರ್ ಧವನ್(72) ಅಮೋಘ ಅರ್ಧಶತಕದ ನೆರವಿನಿಂದ 203 ರನ್ ಕಲೆಹಾಕಿತ್ತು.  

ಸಂಕ್ಷಿಪ್ತ ಸ್ಕೋರ್:

ಭಾರತ: 203/5

ಧವನ್: 72

ಡಾಲಾ: 47/2

ದ. ಆಫ್ರಿಕಾ: 175/9

ಹೆನ್ರಿಕೇಶ್: 70

ಭುವನೇಶ್ವರ್ ಕುಮಾರ್: 24/5

click me!