ಧವನ್ ಅಬ್ಬರ; ಆಫ್ರಿಕಾಗೆ ಸವಾಲಿನ ಗುರಿ

By Suvarna Web DeskFirst Published Feb 18, 2018, 8:03 PM IST
Highlights

ಮೂರನೇ ವಿಕೆಟ್'ಗೆ ವಿರಾಟ್-ಧವನ್ ಜೋಡಿ ಉತ್ತಮ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾಯಿತು. ಈ ಜೋಡಿ ತಂಡಕ್ಕೆ 59 ರನ್'ಗಳ ಉಪಯುಕ್ತ ಕಾಣಿಕೆ ನೀಡಿತು.

ವಾಂಡರರ್ಸ್(ಫೆ.18): ಶಿಖರ್ ಧವನ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 203 ರನ್'ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಟೀಂ ಇಂಡಿಯಾ ಸ್ಫೋಟಕ ಆರಂಭವನ್ನೇ ಪಡೆಯಿತು. ಮೊದಲ ಓವರ್'ನಲ್ಲೇ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ ರೋಹಿತ್ ಶರ್ಮಾ ಎರಡನೇ ಓವರ್'ನ ಕೊನೆಯ ಎಸೆತದಲ್ಲಿ ಜೂನಿಯರ್ ಡಾಲಾ ಅವರಿಗೆ ಚೊಚ್ಚಲ ಬಲಿಯಾದರು. ಇನ್ನು ವರ್ಷದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ರೈನಾ ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ರೈನಾ ಕೇವಲ 7 ಎಸೆತದಲ್ಲಿ 1 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 15 ರನ್ ಬಾರಿಸಿ ಡಾಲಾಗೆ ಎರಡನೇ ಬಲಿಯಾದರು. ಆಗ ಟೀಂ ಇಂಡಿಯಾ ಸ್ಕೋರ್ 4 ಓವರ್'ಗೆ 49 ರನ್.

ಮೂರನೇ ವಿಕೆಟ್'ಗೆ ವಿರಾಟ್-ಧವನ್ ಜೋಡಿ ಉತ್ತಮ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾಯಿತು. ಈ ಜೋಡಿ ತಂಡಕ್ಕೆ 59 ರನ್'ಗಳ ಉಪಯುಕ್ತ ಕಾಣಿಕೆ ನೀಡಿತು. ಕೊಹ್ಲಿ 26 ರನ್ ಬಾರಿಸಿ ಸಂಶಿ ಬೌಲಿಂಗ್'ನಲ್ಲಿ ಎಲ್'ಬಿ ಬಲೆಗೆ ಬಿದ್ದರು. ಒಂದುಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನಿರ್ಭಯವಾಗಿ ಬ್ಯಾಟ್ ಬೀಸಿದ ಧವನ್ ಭರ್ಜರಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಧವನ್ 39 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 72 ರನ್ ಬಾರಿಸಿ ಫೆಲುಕ್ವೆನೋಗೆ ವಿಕೆಟ್ ಒಪ್ಪಿಸಿದರು. ಧೋನಿ ಆಟ 16 ರನ್'ಗೆ ಸೀಮಿತವಾದರೇ, ಮನೀಶ್ ಪಾಂಡೆ 29 ರನ್ ಬಾರಿಸಿದರು. ಕೊನೆಯಲ್ಲಿ ಪಾಂಡ್ಯ(7ಎಸೆತ 13ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 200 ರನ್'ಗಳ ಗಡಿ ದಾಟಿತು.

ಆಫ್ರಿಕಾ ಪರ ಡಾಲಾ 2 ವಿಕೆಟ್ ಪಡೆದರೆ, ಮೋರಿಸ್, ಸಂಶಿ ಹಾಗೂ ಫೆಲುಕ್ವೆನೋ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಭಾರತ: 203/5

ಧವನ್: 72

ಡಾಲಾ: 47/2

click me!