
ಢಾಕಾ(ಅ.21): ಶತಾಯಗತಾಯ ಏಷ್ಯಾದ ನಂ.1 ತಂಡವಾಗಲು ಪಣತೊಟ್ಟಿರುವ ಮನ್'ಪ್ರೀತ್ ಸಿಂಗ್ ನೇತೃತ್ವದ ಹಾಕಿ ಟೀಂ ಇಂಡಿಯಾ ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸುವ ಮೂಲಕ ಭರ್ಜರಿಯಾಗಿ ಫೈನಲ್ ಪ್ರವೇಶಿಸಿದೆ. ಈ ಮೂಲಕ ಪಾಕಿಸ್ತಾನ ತಂಡದ ವಿರುದ್ಧ ಭಾರತ ಸತತ 7ನೇ ಗೆಲುವಿನ ನಗೆ ಬೀರಿತು.
ಇಲ್ಲಿ ನಡೆದ ಸೂಪರ್ 4 ಹಂತದ 3ನೇ ಹಾಗೂ ಕೊನೆ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 4-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು.
ಆರಂಭದಿಂದಲೇ ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಪಾಕಿಸ್ತಾನ ಆಕ್ರಮಣಕಾರಿ ಆಟಕ್ಕೆ ಮುಂದಾಯಿತಾದರೂ, ಭಾರತದ ಗೋಲ್ ಕೀಪರ್ ಆಕಾಶ್ ಚಿಕ್ಟೆ ಗೋಲು ದಾಖಲಿಸಲು ಅವಕಾಶ ಮಾಡಿಕೊಡಲಿಲ್ಲ. ಮೊದಲ ಕ್ವಾರ್ಟರ್'ನಲ್ಲಿ ಪಾಕಿಸ್ತಾನ 3 ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲ್ ಆಗಿ ಪರಿವರ್ತಿಸಲು ವಿಫಲವಾಯಿತು.
ದ್ವಿತೀಯಾರ್ಧದಲ್ಲಿ ಭಾರತಕ್ಕೆ ಆರಂಭದಲ್ಲೇ ಯಶಸ್ಸು ದೊರೆಯಿತು. ಪಂದ್ಯದ 39ನೇ ನಿಮಿಷದಲ್ಲಿ ಸತ್ಬೀರ್ ಸಿಂಗ್ ಗೋಲಿನ ಖಾತೆ ತೆರೆದರು. ಇದಾದ ಬಳಿಕ ಹರ್ಮನ್'ಪ್ರೀತ್ ಸಿಂಗ್ 51ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಮೂಲಕ ಭಾರತ 2-0 ಮುನ್ನಡೆ ಪಡೆದುಕೊಂಡಿತು.
ಪಂದ್ಯದ 52ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ಹಾಗೂ 57ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಗೋಲು ಬಾರಿಸುವುದರೊಂದಿಗೆ ಭರ್ಜರಿ ಗೆಲುವು ಬಾರಿಸಲು ನೆರವಾದರು.
ಭಾರತ ಸೂಪರ್ 4ನಲ್ಲಿ ಆಡಿದ 3 ಪಂದ್ಯಗಳಲ್ಲಿ 2 ಜಯ, 1 ಡ್ರಾ ಸಾಧಿಸಿ 7 ಅಂಕಗಳೊಂದಿಗೆ ಫೈನಲ್ ಪ್ರವೇಶಿಸಿತು. ಕಳೆದ ಬಾರಿ ರನ್ನರ್-ಅಪ್ ಆಗಿದ್ದ ಭಾರತ, ಭಾನುವಾರ ನಡೆಯಲಿರುವ ಅಂತಿಮ ಕದನದಲ್ಲಿ ಗೆದ್ದು ಪ್ರಶಸ್ತಿ ಎತ್ತಿಹಿಡಿಯವ ಉತ್ಸಾಹದಲ್ಲಿದೆ. ಮಲೇಷ್ಯಾ ಹಾಗೂ ಕೋರಿಯಾ ನಡುವಿನ ಪಂದ್ಯದಲ್ಲಿ ವಿಜೇತರಾದ ತಂಡವು ಫೈನಲ್'ನಲ್ಲಿ ಭಾರತದೊಂದಿಗೆ ಸೆಣಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.