ಕಬಡ್ಡಿ ಮಾಸ್ಟರ್ಸ್: ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

 |  First Published Jun 22, 2018, 9:54 PM IST

ದುಬೈ ಕಬಡ್ಡಿ ಮಾಸ್ಟರ್ಸ್ ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನ ತಂಡಕ್ಕೆ ಭಾರತ ದಿಟ್ಟ ಉತ್ತರ ನೀಡಿದೆ. ಉದ್ಘಾಟನಾ ಪಂದ್ಯದಲ್ಲಿ  ಭಾರತದ ಭರ್ಜರಿ ಗೆಲುವಿನ ನಗೆ ಬೀರಿದೆ. ಚಾಂಪಿಯನ್ ಭಾರತದ ತಂಡದ ಪ್ರದರ್ಶನ ಹೇಗಿತ್ತು. ಇಲ್ಲಿದೆ ಹೈಲೈಟ್ಸ್


ದುಬೈ(ಜೂ.22): ಚೊಚ್ಚಲ ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಹೋರಾಡಿದ ಭಾರತ 36-20 ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸಿದೆ.

ದುಬೈನ ಆಲ್ ವಸಲ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ಮೊದಲ ರೈಡ್‌ನಲ್ಲೇ ಅಜಯ್ ಠಾಕೂರ್ ಪಾಯಿಂಟ್ಸ್ ಪಡೆದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ರೋಹಿತ್ ಕುಮಾರ್, ರಾಹುಲ್ ಚೌಧರಿ ಹಾಗೂ ಅಜಯ್ ಠಾಕೂರ್ ದಾಳಿಯಿಂದ ಪಾಕಿಸ್ತಾನ ತೀವ್ರ ಹಿನ್ನಡೆ ಅನುಭವಿಸಿತು.

Tap to resize

Latest Videos

ಪಾಕಿಸ್ತಾನ ರೈಡರ್‌ಗಳನ್ನ ಭಾರತದ ಡಿಫೆಂಡರ್ ಅಚ್ಚುಕಟ್ಟಾಗಿ ಟ್ಯಾಕಲ್ ಮಾಡಿದರು. ಹೀಗಾಗಿ ಮೊದಲಾರ್ಧಲ್ಲಿ ಭಾರತ 22-9 ಅಂಕಗಳ ಅಂತರದ ಮುನ್ನಡೆ ಪಡೆದುಕೊಂಡಿತು. ಈ ಮೂಲಕ ಫಸ್ಟ್ ಹಾಫ್‌ನಲ್ಲೇ ಪಾಕ್‌ ಗೆಲುವಿನ ಆಸೆಯನ್ನ ಕೈಬಿಟ್ಟಿತು.

ದ್ವಿತಿಯಾರ್ಧದಲ್ಲೂ ಭಾರತದ ಆರ್ಭಟ ಮುಂದುವರಿಯಿತು. ಸೆಕೆಂಡ್ ಹಾಫ್‌ನಲ್ಲಿ ಪಾಕಿಸ್ತಾನ ಟ್ಯಾಕಲ್‌ನಿಂದ ಮೊದಲ ಅಂಕ ಪಡೆಯಿತು. ಆದರೆ ಚಾಂಪಿಯನ್ ಭಾರತದ ಮುಂದೆ ಪಾಕ್ ಆಟ ನಡೆಯಲಿಲ್ಲ. ದ್ವಿತಿಯಾರ್ಧದ ಅಂತ್ಯದಲ್ಲಿ ಭಾರತ 36-20 ಅಂಕಗಳ ಮೂಲಕ ಗೆಲುವು ಸಾಧಿಸಿತು.

 ದುಬೈ ಕಬಡ್ಡಿ ಮಾಸ್ಟರ್ಸ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಅದರಲ್ಲೂ ಬದ್ಧವೈರಿ ಪಾಕ್ ತಂಡವನ್ನ ಮಣಿಸಿರೋದು ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ. ವಿಶೇಷ ಅಂದರೆ,  ಮಹತ್ವದ ಪಂದ್ಯಕ್ಕೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಜರಿದ್ದರು.

 

click me!