ಬಾಂಗ್ಲಾದೇಶ ವಿರುದ್ಧ ಗೋಲಿನ ಮಳೆ ಸುರಿಸಿದ ಭಾರತ

By Suvarna Web DeskFirst Published Oct 14, 2017, 12:36 PM IST
Highlights

* ಏಷ್ಯಾಕಪ್: ಆತಿಥೇಯ ಬಾಂಗ್ಲರ ವಿರುದ್ಧ ಭಾರತಕ್ಕೆ 7-0 ಜಯ

* ಹರ್ಮನ್‌ಪ್ರೀತ್ ಸಿಂಗ್ 2 ಗೋಲು

* ‘ಎ’ ಗುಂಪಿನಲ್ಲಿ ಭಾರತಕ್ಕೆ ಅಗ್ರಸ್ಥಾನ ಭದ್ರ?

ಢಾಕಾ: ಏಷ್ಯಾಕಪ್‌ನಲ್ಲಿ ಭಾರತ ಗೆಲುವಿನ ಓಟ ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 5-1 ಗೋಲುಗಳ ಜಯ ಸಾಧಿಸಿದ್ದ ಭಾರತ, ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7-0 ಗೋಲುಗಳ ಅಧಿಕಾರಯುತ ಗೆಲುವು ಸಾಧಿಸಿತು. ಇದರೊಂದಿಗೆ ಭಾರತ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದ್ದು, ನಾಕೌಟ್ ಹಾದಿಯೂ ಸುಗಮವಾದಂತೆ ಆಗಿದೆ.

ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 0-7 ಗೋಲುಗಳಿಂದ ಸೋತಿದ್ದ ಬಾಂಗ್ಲಾದೇಶ, ಅಷ್ಟೇ ಅಂತರದಲ್ಲಿ ಭಾರತಕ್ಕೂ ಸುಲಭ ತುತ್ತಾಯಿತು. ಪಂದ್ಯದ 7ನೇ ನಿಮಿಷದಲ್ಲೇ ಗುರ್ಜಂತ್ ಸಿಂಗ್ ಭಾರತದ ಗೋಲಿನ ಖಾತೆ ತೆರೆದರು. ಬಳಿಕ 10ನೇ ನಿಮಿಷದಲ್ಲಿ ಎಸ್.ವಿ.ಸುನಿಲ್ ನೀಡಿದ ಪಾಸನ್ನು ಅದ್ಭುತವಾಗಿ ಗೋಲಿನ ಪೆಟ್ಟಿಗೆಗೆ ಸೇರಿಸಿದ ಆಕಾಶ್‌'ದೀಪ್ 2ನೇ ಗೋಲು ತಂದಿತ್ತರು. 13ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ 3ನೇ ಗೋಲು ಬಾರಿಸಿ, ಮೊದಲ ಕ್ವಾರ್ಟರ್ (15 ನಿಮಿಷ) ಅಂತ್ಯಕ್ಕೆ 3-0 ಮ್ನುನಡೆ ಒದಗಿಸಿದರು.

ದ್ವಿತೀಯ ಕ್ವಾರ್ಟರ್‌'ನಲ್ಲೂ ಆಕ್ರಮಣಕಾರಿ ಆಟ ಮುಂದುವರಿಸಿದ ಭಾರತಕ್ಕೆ 20ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ಹಾಗೂ 28ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಹರ್ಮನ್‌ಪ್ರೀತ್ ಸಿಂಗ್ ಗೋಲು ತಂದುಕೊಟ್ಟರು. ಇದರೊಂದಿಗೆ ಮೊದಲಾರ್ಧ ಮುಕ್ತಾಯಕ್ಕೆ ಭಾರತ 5-0 ಮುನ್ನಡೆ ಕಾಯ್ದುಕೊಂಡಿತು. ಪಂದ್ಯದ 3ನೇ ಕ್ವಾರ್ಟರ್‌'ನಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರೂ ಭಾರತ ಗೋಲು ಗಳಿಸಲಿಲ್ಲ. 4ನೇ ಹಾಗೂ ಅಂತಿಮ ಕ್ವಾರ್ಟರ್‌'ನಲ್ಲಿ ತಂಡ ಮತ್ತೆರಡು ಗೋಲುಗಳನ್ನು ದಾಖಲಿಸಿತು. 46ನೇ ನಿಮಿಷದಲ್ಲಿ ರಮಣ್‌'ದೀಪ್ ಹಾಗೂ 47ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಹರ್ಮನ್ ಪ್ರೀತ್ ಗೋಲು ಬಾರಿಸಿದರು.

ಪಂದ್ಯಾವಳಿಯಲ್ಲಿ 2 ಪಂದ್ಯಗಳಿಂದ ಹರ್ಮನ್ ಪ್ರೀತ್ ಒಟ್ಟು 4 ಗೋಲು ಭಾರಿಸಿದ್ದಾರೆ. ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಭಾರತ, ಒಮ್ಮೆಯೂ ಆತಿಥೇಯರಿಗೆ ತನ್ನ ರಕ್ಷಣಾ ಕೋಟೆಯನ್ನು ಭೇದಿಸಲು ಅವಕಾಶ ನೀಡಲಿಲ್ಲ. ಆದರೆ ಪಂದ್ಯದಲ್ಲಿ ಸಿಕ್ಕ ಒಟ್ಟು 13 ಪೆನಾಲ್ಟಿ ಕಾರ್ನರ್‌ಗಳಲ್ಲಿ ಭಾರತ ಕೇವಲ 2 ಅನ್ನು ಮಾತ್ರ ಗೋಲಾಗಿ ಪರಿವರ್ತಿಸಿದ್ದು, ಕೋಚ್ ಸೋರ್ಡ್ ಮರಿನೆ ಚಿಂತೆಗೆ ಕಾರಣವಾಗಿದೆ. ಭಾನುವಾರ ನಡೆಯಲಿರುವ ಗ್ರೂಪ್ ಹಂತದ ಕೊನೆ ಪಂದ್ಯದಲ್ಲಿ ಭಾರತ ತನ್ನ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ.

epaperkannadaprabha.com

click me!