
ಹೈದರಾಬಾದ್[ಅ.14]: ನಾಯಕ ಜೇಸನ್ ಹೋಲ್ಡರ್ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 367 ರನ್’ಗಳಿಗೆ ಸರ್ವಪತನ ಕಾಣುವ ಮೂಲಕ ಮೊದಲ ಇನ್ನಿಂಗ್’ನಲ್ಲಿ 56 ರನ್’ಗಳ ಅಲ್ಪ ಮುನ್ನಡೆ ಸಾಧಿಸಿದೆ.
ಎರಡನೇ ದಿನದಾಟ ಅಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 308 ರನ್ ಬಾರಿಸಿತ್ತು. ಮೂರನೇ ದಿನದಾಟದ ಆರಂಭದಲ್ಲೇ ವಿರಾಟ್ ಪಡೆ ನಾಟಕೀಯ ಕುಸಿತ ಕಂಡಿತು. 6 ರನ್ ಗಳಿಸುವಷ್ಟರಲ್ಲೇ ರಹಾನೆ ಹಾಗೂ ಜಡೇಜಾ ಒಂದೇ ಓವರ್’ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಕೆಲಹೊತ್ತಿನಲ್ಲೇ ಶತಕದತ್ತ ಮುನ್ನುಗ್ಗುತ್ತಿದ್ದ ರಿಶಭ್ ಪಂತ್ ಮತ್ತೊಮ್ಮೆ 92 ರನ್ ಬಾರಿಸಿ ಗೇಬ್ರಿಯಲ್’ಗೆ ವಿಕೆಟ್ ನೀಡಿದರು. ರಾಜ್’ಕೋಟ್’ನಲ್ಲಿ ನಡೆದ ಮೊದಲ ಟೆಸ್ಟ್’ನಲ್ಲೂ ಪಂತ್ 92 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಕುಲ್ದೀಪ್, ಉಮೇಶ್ ಕೂಡಾ ಹೆಚ್ಚು ಹೊತ್ತು ಕ್ರೀಸ್’ನಲ್ಲಿ ಉಳಿಯಲಿಲ್ಲ. ಅಶ್ವಿನ್ ಅಲ್ಪ ಪ್ರತಿರೋಧ ತೋರಿದರಾದರೂ ಅವರಿಗೆ ಮತ್ತೊಂದು ತುದಿಯಲ್ಲಿ ಸಹಕಾರ ದೊರೆಯಲಿಲ್ಲ. ಅಶ್ವಿನ್ 35 ರನ್ ಬಾರಿಸಿ ಕೊನೆಯವರಾಗಿ ಗೇಬ್ರಿಯಲ್’ಗೆ ವಿಕೆಟ್ ಒಪ್ಪಿಸಿದರು.
ಜೇಸನ್ ಹೋಲ್ಡರ್’ಗೆ 5 ವಿಕೆಟ್:
ಮೊದಲ ಪಂದ್ಯದಲ್ಲಿ ಹೊರಗುಳಿದಿದ್ದ ನಾಯಕ ಜೇಸನ್ ಹೋಲ್ಡರ್ ಬ್ಯಾಟಿಂಗ್’ನಲ್ಲಿ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಬಳಿಕ ಬೌಲಿಂಗ್’ನಲ್ಲಿ ಪ್ರಮುಖ 5 ವಿಕೆಟ್ ಪಡೆದು ಮಿಂಚಿದರು. ಅದರಲ್ಲೂ 5ನೇ ವಿಕೆಟ್’ಗೆ 150 ರನ್’ಗಳ ಜತೆಯಾಟವಾಡುವ ಮೂಲಕ ಬೃಹತ್ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದ್ದ ರಹಾನೆ-ಪಂತ್ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ರಹಾನೆ ವಿಕೆಟ್ ಪಡೆದ ಬೆನ್ನಲ್ಲೇ ಅದೇ ಓವರ್’ನಲ್ಲಿ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಜಡೇಜಾ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ವಿಂಡೀಸ್’ಗೆ ಮುನ್ನಡೆ ಒದಗಿಸಿಕೊಟ್ಟರು.
ಸಂಕ್ಷಿಪ್ತ ಸ್ಕೋರ್:
ವೆಸ್ಟ್ ಇಂಡೀಸ್: 311/10
ರೋಸ್ಟನ್ ಚೇಸ್: 106
ಉಮೇಶ್ ಯಾದವ್: 88/6
ಭಾರತ: 367/10
ರಿಶಬ್ ಪಂತ್: 92
ಜೇಸನ್ ಹೋಲ್ಡರ್: 56/5
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.