
ಓವಲ್[ಸೆ.07]: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಇಂದಿನಿಂದ ಆರಂಭಗೊಳ್ಳಲಿದೆ. ಈಗಾಗಲೇ 3-1 ಅಂತರದಿಂದ ಸರಣಿ ಸೋತಿರುವ ಭಾರತ, ಸೋಲಿನ ಅಂತರ ತಗ್ಗಿಸಿಕೊಳ್ಳಲು ಹೋರಾಟ ನಡೆಸಲಿದೆ. ಒಂದೊಮ್ಮೆ ಈ ಪಂದ್ಯವನ್ನೂ ಭಾರತ ಸೋತರೆ ಭಾರೀ ಮುಖಭಂಗಕ್ಕೆ ಒಳಗಾಗಲಿದೆ.
ತಂಡದ ಬೆನ್ನಿಗೆ ನಿಂತ ಕೋಚ್: ಸುಲಭವಾಗಿ ಜಯ ಸಾಧಿಸಲಿದೆ ಎಂದುಕೊಂಡಿದ್ದ 4ನೇ ಟೆಸ್ಟ್ ಜತೆಗೆ ಸರಣಿಯನ್ನು ಕೈಚೆಲ್ಲಿದ ಟೀಂ ಇಂಡಿಯಾ ವಿರುದ್ಧ ಟೀಕೆಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಕೋಚ್ ರವಿ ಶಾಸ್ತ್ರಿ ತಂಡದ ಬೆನ್ನಿಗೆ ನಿಂತಿದ್ದಾರೆ. ‘ಕಳೆದ 15 ವರ್ಷಗಳಲ್ಲಿ ವಿದೇಶಿ ಪ್ರವಾಸ ಕೈಗೊಂಡಿರುವ ಅತ್ಯುತ್ತಮ ತಂಡ ಇದಾಗಿದೆ. ಗಂಗೂಲಿ, ದ್ರಾವಿಡ್, ಅನಿಲ್ ಕುಂಬ್ಳೆ, ಧೋನಿ
ನೇತೃತ್ವದ ತಂಡಕ್ಕಿಂತ ವಿರಾಟ್ ತಂಡ ಉತ್ತಮ ಸಾಧನೆ ತೋರಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿ: 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ-ಯಾರು ಇನ್?ಯಾರು ಔಟ್?
ಆರಂಭಿಕನಾಗಿ ಪೃಥ್ವಿ ಶಾ: ಇತ್ತ ಜಯಕ್ಕಾಗಿ ಹುಡುಕಾಟ ನಡೆಸುತ್ತಿರುವ ಭಾರತ ತಂಡದಲ್ಲಿ ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ಮುಂಬರುವ ಆಸ್ಟ್ರೇಲಿಯಾ ಸರಣಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪೃಥ್ವಿ ಶಾಗೆ ತಂಡದಲ್ಲಿ ಅವಕಾಶ ನೀಡಿದರೆ ಅಚ್ಚರಿಯೇನಿಲ್ಲ. ಅಥವಾ ಕೊನೆಯ ಅವಕಾಶವಾಗಿ ಶಿಖರ್ ಧವನ್ ಮತ್ತು ಕೆ.ಎಲ್.ರಾಹುಲ್‌ರನ್ನೇ ಕಣಕ್ಕಿಳಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇನ್ನು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದು, ಅವರ ಬದಲಿಗೆ ಯುವ ಪ್ರತಿಭೆ ಹನುಮ ವಿಹಾರಿಗೆ ಅವಕಾಶ ನೀಡಿದರೂ ಅಚ್ಚರಿಯೇನಿಲ್ಲ. ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿ, ಉಮೇಶ್ ಯಾದವ್’ರನ್ನು ಕಣಕ್ಕಿಳಿಸುವ ಸಾಧ್ಯತೆಗಳು ದಟ್ಟವಾಗಿವೆ.
ಜಯದ ಉಡುಗೊರೆ: ಇನ್ನು ಈಗಾಗಲೇ ಸರಣಿ ಗೆದ್ದಿದ್ದರೂ, ಇಂಗ್ಲೆಂಡ್ ಆಟಗಾರರ ಪಾಲಿಗೆ ಇದು ಭಾವನಾತ್ಮಕ ಪಂದ್ಯವಾಗಿದೆ. ವೃತ್ತಿಜೀವನದ ಕೊನೆಯ ಟೆಸ್ಟ್ ಆಡುತ್ತಿರುವ ಕುಕ್‌ಗೆ ಜಯದ ಉಡುಗೊರೆ ನೀಡಲು ಆಂಗ್ಲನ್ನರು ಕಾತುರರಾಗಿದ್ದಾರೆ. ಇದೇ ವೇಳೆ ಇಂಗ್ಲೆಂಡ್ ತಂಡ ಸಹ ಸೂಕ್ತ ಆರಂಭಿಕರಿಗಾಗಿ ಹುಡುಕಾಟ ನಡೆಸುತ್ತಿದೆ. ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಜೇಮ್ಸ್ ಆ್ಯಂಡರ್‌ಸನ್ ಹಾಗೂ ಸ್ಟುವರ್ಟ್ ಬ್ರಾಡ್‌ಗೆ ವಿಶ್ರಾಂತಿ ನೀಡಿ, ಕ್ರಿಸ್ ವೋಕ್ಸ್’ರನ್ನು ಆಡಿಸುವ ಲೆಕ್ಕಾಚಾರ ಆಂಗ್ಲರ ಬಳಗದ್ದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.