ಟೀಂ ಇಂಡಿಯಾ ಪಾಲಿಗಿದು ಮಾಡು ಇಲ್ಲವೇ ಮಡಿ ಟೆಸ್ಟ್

By Web DeskFirst Published Aug 18, 2018, 1:46 PM IST
Highlights

3ನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಕೆಲ ಸಮಸ್ಯೆಗಳು ಎದುರಾಗಿವೆ. ಬಹುಮುಖ್ಯವಾಗಿ ನಾಯಕ ವಿರಾಟ್‌ ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೋ ಇಲ್ಲವೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ತಂಡದ ಮೂಲಗಳ ಪ್ರಕಾರ, ಅವರು ಪಂದ್ಯದಲ್ಲಿ ಆಡಲಿದ್ದಾರೆ ಎನ್ನಲಾಗಿದೆ.

ನಾಟಿಂಗ್‌ಹ್ಯಾಮ್‌[ಆ.18]: ಮೊದಲೆರಡು ಟೆಸ್ಟ್‌ಗಳಲ್ಲಿ ಇಂಗ್ಲೆಂಡ್‌ಗೆ ಶರಣಾಗಿದ್ದ ಭಾರತ ತಂಡ, ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್’ನಲ್ಲಿ ಇಂದಿನಿಂದ 3ನೇ ಟೆಸ್ಟ್‌ ಆಡಲಿದೆ. 5 ಪಂದ್ಯಗಳ ಸರಣಿಯಲ್ಲಿ 0-2ರಿಂದ ಹಿಂದಿರುವ ಭಾರತ, ಈ ಪಂದ್ಯವನ್ನು ಸೋತರೆ ಸರಣಿ ಜಯದ ಆಸೆಯನ್ನು ಕೈಬಿಡಬೇಕಾಗುತ್ತದೆ. ಕೊಹ್ಲಿ ಪಡೆ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

3ನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಕೆಲ ಸಮಸ್ಯೆಗಳು ಎದುರಾಗಿವೆ. ಬಹುಮುಖ್ಯವಾಗಿ ನಾಯಕ ವಿರಾಟ್‌ ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೋ ಇಲ್ಲವೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ತಂಡದ ಮೂಲಗಳ ಪ್ರಕಾರ, ಅವರು ಪಂದ್ಯದಲ್ಲಿ ಆಡಲಿದ್ದಾರೆ ಎನ್ನಲಾಗಿದೆ.

ಆರಂಭಿಕರ ಕೊರತೆ!: ಭಾರತ ತಂಡ ಮೂವರು ತಜ್ಞ ಆರಂಭಿಕ ಬ್ಯಾಟ್ಸ್‌ಮನ್‌ಗಳೊಂದಿಗೆ ಇಂಗ್ಲೆಂಡ್‌ಗೆ ತೆರಳಿದೆ. ಆದರೆ ಮುರಳಿ ವಿಜಯ್‌, ಶಿಖರ್‌ ಧವನ್‌ ಹಾಗೂ ಕೆ.ಎಲ್‌.ರಾಹುಲ್‌ ಮೂವರೂ ಲಯದಲ್ಲಿಲ್ಲ. ಈ ಸಮಸ್ಯೆ ಭಾರತ ತಂಡವನ್ನು ಬಲವಾಗಿ ಕಾಡುತ್ತಿದೆ. ನಾಟಿಂಗ್‌ಹ್ಯಾಮ್‌ ಪಂದ್ಯಕ್ಕೆ ಯಾರನ್ನು ಆರಂಭಿಕರನ್ನಾಗಿ ಆಡಿಸಬೇಕು ಎನ್ನುವ ಗೊಂದಲ ಶುರುವಾಗಿದ್ದು, ಕೆ.ಎಲ್‌.ರಾಹುಲ್‌ ಜತೆ ಚೇತೇಶ್ವರ್‌ ಪೂಜಾರರನ್ನು ಆರಂಭಿಕನನ್ನಾಗಿ ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಿಶಭ್‌ ಪಾದಾರ್ಪಣೆ?: ಭಾರತ ಐವರು ಬೌಲರ್‌ಗಳ ಸಂಯೋಜನೆಯನ್ನೇ ಮುಂದುವರಿಸಲಿದ್ದು, ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಡಿಸುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ, ನಿರಾಸೆ ಮೂಡಿಸಿರುವ ದಿನೇಶ್‌ ಕಾರ್ತಿಕ್‌ ಬದಲಿಗೆ ರಿಶಭ್‌ ಪಂತ್‌, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ರಿಶಭ್‌ಗೆ ಟೆಸ್ಟ್‌ ಕ್ಯಾಪ್‌ ನೀಡಲು ತಂಡ ನಿರ್ಧರಿಸಿದೆ ಎನ್ನಲಾಗಿದೆ. ಅಜಿಂಕ್ಯ ರಹಾನೆ ಕೂಡ ಲಯದ ಸಮಸ್ಯೆ ಎದುರಿಸುತ್ತಿದ್ದರೂ, ಅವರನ್ನು ಕೈಬಿಟ್ಟು ಕರುಣ್‌ ನಾಯರ್‌ ಆಡಿಸುವ ಸಾಧ್ಯತೆ ಕಡಿಮೆ. ಒಂದೊಮ್ಮೆ ಕೊಹ್ಲಿ ಹೊರಗುಳಿದರೆ, ಕರುಣ್‌ಗೆ ಸ್ಥಾನ ಸಿಗಲಿದೆ.

ಒಬ್ಬರೇ ಸ್ಪಿನ್ನರ್‌?: ಟ್ರೆಂಟ್‌ಬ್ರಿಡ್ಜ್‌ನಲ್ಲಿ ಮೊದಲ 4 ದಿನಗಳು ಮೋಡ ಕವಿದ ವಾತಾವರಣ ಇರಲಿದು, ವೇಗಿಗಳಿಗೆ ಹೆಚ್ಚು ನೆರವು ದೊರೆಯಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ಅಶ್ವಿನ್‌ ಒಬ್ಬರನ್ನೇ ಆಡಿಸಲು ಭಾರತ ನಿರ್ಧರಿಸಿದರೆ ಅಚ್ಚರಿಯಿಲ್ಲ. ಉಮೇಶ್‌ ಯಾದವ್‌ ಬದಲಿಗೆ ಜಸ್‌ಪ್ರೀತ್‌ ಬುಮ್ರಾ ವೇಗದ ಪಡೆ ಸೇರಿಕೊಳ್ಳಬಹುದು. ಶಮಿ ಹಾಗೂ ಇಶಾಂತ್‌ ಆಡುವ ಹನ್ನೊಂದರಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಹಾರ್ದಿಕ್‌ ಪಾಂಡ್ಯ ಸಹ ಮತ್ತೊಂದು ಅವಕಾಶ ಪಡೆದರೆ ಅಚ್ಚರಿಯಿಲ್ಲ.

ಸ್ಟೋಕ್ಸ್‌ ವಾಪಸ್‌: 3ನೇ ಪಂದ್ಯಕ್ಕೆ ತಂಡದ ಆಯ್ಕೆಯಲ್ಲಿ ಇಂಗ್ಲೆಂಡ್‌ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಶುಕ್ರವಾರ ತಂಡ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿತು. ಆಲ್ರೌಂಡರ್‌ ಸ್ಯಾಮ್‌ ಕರ್ರನ್‌ರನ್ನು ಕೈಬಿಟ್ಟು ಬೆನ್‌ ಸ್ಟೋಕ್ಸ್‌ಗೆ ಸ್ಥಾನ ನೀಡಲಾಗಿದೆ. ಇಂಗ್ಲೆಂಡ್‌ಗೂ ಆರಂಭಿಕರ ಸಮಸ್ಯೆ ಇದ್ದರೂ, ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕ ರನ್‌ ಕೊಡುಗೆ ನೀಡುತ್ತಿದೆ. ಸ್ಟೋಕ್ಸ್‌ ಮರಳಿರುವುದು ತಂಡದ ಬ್ಯಾಟಿಂಗ್‌ಗೆ ಬಲ ನೀಡಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಕೆ.ಎಲ್‌.ರಾಹುಲ್‌, ಮುರಳಿ ವಿಜಯ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ, ಆರ್‌.ಅಶ್ವಿನ್‌, ರಿಶಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಮೊಹಮದ್‌ ಶಮಿ, ಇಶಾಂತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌: ಅಲಿಸ್ಟರ್‌ ಕುಕ್‌, ಕೇಟನ್‌ ಜೆನ್ನಿಂಗ್ಸ್‌, ಜೋ ರೂಟ್‌, ಜಾನಿ ಬೇರ್‌ಸ್ಟೋವ್‌, ಆಲಿವರ್‌ ಪೋಪ್‌, ಜೋಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌, ಆದಿಲ್‌ ರಶೀದ್‌, ಸ್ಟುವರ್ಟ್‌ ಬ್ರಾಡ್‌, ಜೇಮ್ಸ್‌ ಆ್ಯಂಡರ್‌ಸನ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸೋನಿ ಸಿಕ್ಸ್‌

click me!