
ಬೆಂಗಳೂರು[ಆ.17]: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ[ಆ.16] ಕೊನೆಯುಸಿರೆಳೆದಿದ್ದಾರೆ. ಸಾಹಿತ್ಯ ಪ್ರೇಮಿಯ ಜತೆಗೆ ಕ್ರೀಡಾ ಪ್ರೇಮಿಯೂ ಆಗಿದ್ದ ಅಟಲ್ ಅವರ ನಿಧನಕ್ಕೆ ಕ್ರೀಡಾ ಕ್ಷೇತ್ರದ ದಿಗ್ಗಜರೂ ಕಂಬನಿ ಮಿಡಿದಿದ್ದಾರೆ. ಅದರಲ್ಲೂ ಭಾರತ-ಪಾಕಿಸ್ತಾನ ನಡುವೆ ಸ್ನೇಹ ಸಂಬಂಧ ಬಲಪಡಿಸಲು ಕ್ರೀಡೆಯಿಂದ ಸಾಧ್ಯವೆಂದು ನಂಬಿದ್ದ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಟೀಂ ಇಂಡಿಯಾವನ್ನು ಕಳಿಸಿಕೊಟ್ಟಿದ್ದರು.
ಭಾರತ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಸಾಧ್ಯವಾಗಿದ್ದು ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಯತ್ನದಿಂದ. ಕ್ರಿಕೆಟ್’ನಿಂದ ಉಭಯ ದೇಶಗಳ ಭಾಂದವ್ಯ ಸಾಧ್ಯವೆಂದು ನಂಬಿದ್ದರು. ಸರ್ಕಾರದ ಅನುಮತಿ ಮೇರೆಗೆ ಬಿಸಿಸಿಐ ಟೀಂ ಇಂಡುಯಾವನ್ನು ಪಾಕಿಸ್ತಾನಕ್ಕೆ ಕಳಿಸಲು ಒಪ್ಪಿತ್ತು ಎಂದು ಭಾರತ ತಂಡದ ಮಾಜಿ ವ್ಯವಸ್ಥಾಪಕ ರತ್ನಾಕರ್ ಶೆಟ್ಟಿ ಆ ದಿನಗಳ ನೆನಪು ಹಂಚಿಕೊಂಡಿದ್ದಾರೆ.
ಇದನ್ನು ಓದಿ: ಅಟಲ್ ಅಗಲಿಕೆಗೆ ಕಂಬನಿ ಮಿಡಿದ ಕ್ರೀಡಾ ದಿಗ್ಗಜರು
ಪಾಕಿಸ್ತಾನಕ್ಕೆ ತಂಡವನ್ನು ಕಳಿಸಿಕೊಡುವ ಮುನ್ನ ಪ್ರಧಾನಮಂತ್ರಿಯಾಗಿದ್ದ ವಾಜಪೇಯಿ ಭಾರತ ತಂಡವನ್ನು ಭೇಟಿಯಾಗಿದ್ದರು. ಆ ಬಳಿಕ ಟೀಂ ಇಂಡಿಯಾ ನಾಯಕರಾಗಿದ್ದ ಸೌರವ್ ಗಂಗೂಲಿ ಬಳಿ ಪಾಕ್ ವಿರುದ್ಧ ಪಂದ್ಯ ಗೆಲ್ಲುವುದರ ಜತೆಗೆ ಅವರ ಹೃದಯವನ್ನು ಗೆದ್ದುಬನ್ನಿ ಎಂದು ಕೇಳಿಕೊಂಡಿದ್ದರಂತೆ. ಸುಮಾರು ಒಂದು ಗಂಟೆಗಳ ಕಾಲ ಕ್ರಿಕೆಟಿಗರೊಂದಿಗೆ ಕಾಲ ಕಳೆದ ಅವರು ಎಲ್ಲಾ ಆಟಗಾರರೊಂದಿಗೂ ಮಾತನಾಡಿದ್ದರಂತೆ. ’ಖೇಲ್ ಹೀ ನಹಿ, ದಿಲಗ ಬೀ ಜೀತಿಯೇ ಶುಭಕಾಮನಾಯೇ’ ಎಂದು ತಂಡಕ್ಕೆ ಶುಭಕೋರಿದ್ದರು.
ನಾನು ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ರಕ್ಷಣೆ ಹೇಗಿದೆ ಎಂದು ಕರಾಚಿಗೆ ಭೇಟಿ ನೀಡಿದಾಗ, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಏರ್ಪಡಿಸಿದ್ದಕ್ಕೆ ಕರಾಚಿಯಲ್ಲಿ ಜನರು ವಾಜಪೇಯಿ ಭಾವಚಿತ್ರ ಹಿಡಿದು ಧನ್ಯವಾದಗಳನ್ನು ಅರ್ಪಿಸಿದ್ದನ್ನು ನಾನು ಕಣ್ಣಾರೆ ಕಂಡೆ. ಈ ವಿಚಾರವನ್ನು ವಾಜಪೇಯಿ ಅವರಿಗೂ ತಿಳಿಸಿದ್ದೆ ಎಂದು ಶೆಟ್ಟಿ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ.
2004ರ ಪಾಕಿಸ್ತಾನದ ಪ್ರವಾಸದಲ್ಲಿ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್ ಅವರಂತಹ ದಿಗ್ಗಜ ಆಟಗಾರರು ತಂಡದಲ್ಲಿದ್ದರು. ಭಾರತ ತಂಡವು ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದುಕೊಂಡರೆ, ಏಕದಿನ ಸರಣಿಯನ್ನು 3-2ರಿಂದ ಜಯಿಸಿತ್ತು. ಮುಲ್ತಾನ್’ನಲ್ಲಿ ನಡೆದ ಮೊದಲ ಟೆಸ್ಟ್’ನಲ್ಲೇ ವಿರೇಂದ್ರ ಸೆಹ್ವಾಗ್[309] ತ್ರಿಶತಕ ಸಿಡಿಸುವುದರೊಂದಿಗೆ ’ಮುಲ್ತಾನ್ ಕಾ ಸುಲ್ತಾನ್’ ಎಂಬ ಕೀರ್ತಿಗೂ ಪಾತ್ರರಾಗಿದ್ದರು. ಸರಣಿ ಜಯಿಸಿ ಬಂದ ಟೀಂ ಇಂಡಿಯಾಗೆ ವಾಜಪೇಯಿ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.