ಚಾಂಪಿಯನ್ಸ್ ಟ್ರೋಫಿ: ಒನ್'ಡೇ ಬದಲು ಟಿ20..? ಫೈನಲ್ ನಡೆಯೋದು ಎಲ್ಲಿ..?

By Suvarna Web DeskFirst Published Mar 21, 2018, 4:40 PM IST
Highlights

1998ರಿಂದ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ 9ನೇ ಆವೃತ್ತಿ 2021ರಲ್ಲಿ ಭಾರತದಲ್ಲಿ ನಡೆಯಬೇಕಿದೆ. ಪ್ರಸಕ್ತ ಸಾಲಿನಲ್ಲಿ ಎದುರಾಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸುವ ಹಾಗೂ ಹೆಚ್ಚು ಪ್ರಾಯೋಜಕತ್ವ ಪಡೆಯುವ ದೃಷ್ಟಿಯಿಂದ ಐಸಿಸಿ ಈ ಪ್ರಸ್ತಾಪ ಸಲ್ಲಿಸಿದೆ.

ದುಬೈ(ಮಾ.21): ಹೆಚ್ಚುತ್ತಿರುವ ಟಿ20 ಮಾದರಿಯ ಜನಪ್ರಿಯತೆಯ ಲಾಭ ಪಡೆಯುವ ಸಲುವಾಗಿ, 2021ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯವನ್ನು ಏಕದಿನ ಮಾದರಿ ಬದಲಾಗಿ ಟಿ20 ಮಾದರಿಯಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸುತ್ತಿದೆ.

1998ರಿಂದ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ 9ನೇ ಆವೃತ್ತಿ 2021ರಲ್ಲಿ ಭಾರತದಲ್ಲಿ ನಡೆಯಬೇಕಿದೆ. ಪ್ರಸಕ್ತ ಸಾಲಿನಲ್ಲಿ ಎದುರಾಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸುವ ಹಾಗೂ ಹೆಚ್ಚು ಪ್ರಾಯೋಜಕತ್ವ ಪಡೆಯುವ ದೃಷ್ಟಿಯಿಂದ ಐಸಿಸಿ ಈ ಪ್ರಸ್ತಾಪ ಸಲ್ಲಿಸಿದೆ.

ಕಾರಣವೇನು?: ಭಾರತ ಸರ್ಕಾರ ತೆರಗಿ ವಿನಾಯ್ತಿ ನೀಡುವ ಬಗ್ಗೆ ಸ್ಪಷ್ಟನೆ ನೀಡದ ಕಾರಣ, ಐಸಿಸಿ ಪಂದ್ಯಾವಳಿಯನ್ನು ಭಾರತದಿಂದ ಸ್ಥಳಾಂತರಿಸುವ ಬಗ್ಗೆ ಗಂಭೀರವಾಗಿ ಯೋಚಿಸಿತ್ತು. 2016ರ ಟಿ2೦ ವಿಶ್ವಕಪ್ ವೇಳೆ ಸಹ ಐಸಿಸಿಗೆ ತೆರಗಿ ವಿನಾಯ್ತಿ ದೊರೆತಿರಲಿಲ್ಲ. ಈ ಕಾರಣ, ಆಗುವ ನಷ್ಟವನ್ನು ಸರಿಪಡಿಸುವ ನಿಟ್ಟಿನಲ್ಲಿ ಐಸಿಸಿ ಮಾದರಿ ಬದಲಿಸಲು ಚಿಂತನೆ ನಡೆಸಿದ್ದಾಗಿ ಹೇಳಲಾಗಿದೆ. ಏಕದಿನಕ್ಕಿಂತ ಟಿ2೦ ಮಾದರಿಯಲ್ಲಿ ಪಂದ್ಯಾವಳಿ ನಡೆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು, ಪ್ರಾಯೋಜಕರು ದೊರೆಯಲಿದ್ದಾರೆ ಎನ್ನುವುದು ಐಸಿಸಿ ಲೆಕ್ಕಾಚಾರವಾಗಿದೆ.

ಬಿಸಿಸಿಐ ತೀವ್ರ ವಿರೋಧ: 2021ರ ಚಾಂಪಿಯನ್ಸ್ ಟ್ರೋಫಿಯನ್ನು ಟಿ20 ಮಾದರಿಯಲ್ಲಿ ನಡೆಸುವುದಕ್ಕೆ ಬಿಸಿಸಿಐ ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ಮಾದರಿ ಯಾವುದೇ ಕಾರಣಕ್ಕೂ ಬದಲಾಗಬಾರದು ಹಾಗೂ ಬದಲಾಗುವುದಿಲ್ಲ. ಚಾಂಪಿಯನ್ಸ್ ಟ್ರೋಫಿ ಆರಂಭಿಸುವುದರ ಹಿಂದೆ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಪಾತ್ರ ದೊಡ್ಡದಿದೆ. ಏಕದಿನ ಕ್ರಿಕೆಟ್ ಜನಪ್ರಿಯತೆ ಹೆಚ್ಚಿಸುವ ಸಲುವಾಗಿ ಪಂದ್ಯಾವಳಿ ಆರಂಭಿಸಲಾಗಿತ್ತು. ಪಂದ್ಯಾವಳಿ ಮಿನಿ ವಿಶ್ವಕಪ್ ಎಂದೇ ಜನಪ್ರಿಯಗೊಂಡಿದೆ. ಜತೆಗೆ ಅಭಿಮಾನಿಗಳ ಮನಸಿನಲ್ಲಿ ಈ ಪಂದ್ಯಾವಳಿ ವಿಶೇಷ ಸ್ಥಾನ ಹೊಂದಿದೆ. ಐಸಿಸಿಯ ಈ ನಿರ್ಧಾರಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಬಲವಾಗಿ ವಿರೋಧಿಸಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋಲ್ಕತಾದಲ್ಲಿ ಫೈನಲ್?

ಒಂದು ಕಡೆ ಚಾಂಪಿಯನ್ಸ್ ಟ್ರೋಫಿಯನ್ನು ಭಾರತದಿಂದ ಸ್ಥಳಾಂತರಿಸಲು ಐಸಿಸಿ ಚಿಂತನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಆತಿಥ್ಯ ವಹಿಸುವ ಬಗ್ಗೆ ನಂಬಿಕೆ ಕಳೆದುಕೊಳ್ಳದ ಬಿಸಿಸಿಐ, ವಿಶ್ವ ಕ್ರಿಕೆಟ್‌ನ ಪ್ರಭಾವಿ ಆಡಳಿತಗಾರ ಜಗಮೋಹನ್ ದಾಲ್ಮಿಯ ನೆನಪಿನಲ್ಲಿ ಟೂರ್ನಿಯ ಫೈನಲ್ ಪಂದ್ಯವನ್ನು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ.ಈ ಬೆಳವಣಿಗೆ ಐಸಿಸಿ ಹಾಗೂ ಬಿಸಿಸಿಐ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟವನ್ನು ಮತ್ತೊಂದು ಸುತ್ತು ಮುಂದಕ್ಕೆ ಕೊಂಡೊಯ್ದಿದೆ.

click me!