
ಬರ್ಮಿಂಗ್'ಹ್ಯಾಮ್(ಮೇ. 30): ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ತಂಡ ದೀರ್ಘ ಸಮಯದ ಬಳಿಕ ಜೂನ್ 4ರಂದು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಜಯಗಳಿಸುವ ವಿಚಾರವಾಗಿ ಹಲವಾರು ಸಮರ್ಥನೆಗಳು ಕೇಳಿ ಬರುತ್ತಿವೆ. ಹೀಗೆ ಸಮರ್ಥನೆ ನೀಡುವವರಲ್ಲಿ ಅಭಿಮಾನಿಗಳಷ್ಟೇ ಅಲ್ಲದೇ ಎರಡೂ ದೇಶದ ಮಾಜಿ ಹಾಗೂ ಹಾಲಿ ಆಟಗಾರರೂ ಶಾಮೀಲಾಗಿದ್ದಾರೆ. ಇದರೊಂದಿಗೆ ಇವರು ತಮ್ಮ ತಂಡದ ಆಟಗಾರರಿಗೆ ಯಶಸ್ಸಿನ ಮಂತ್ರ ಹೇಳಿಕೊಡುವಲ್ಲಿ ಎಡವಿಲ್ಲ. ಇದೀಗ ಇತ್ತೀಚೆಗಷ್ಟೇ ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಸೇರ್ಪಡೆಗೊಂಡ ಬ್ಯಾಟ್ಸ್'ಮನ್ ಹ್ಯಾರಿಸ್ ಸೋಹಿಲ್ ಕೂಡಾ ಟೀಂ ಇಂಡಿಯಾದ ವಿರುದ್ಧ ಹೇಗೆ ಜಯಗಳಿಸಬೇಕೆಂದು ತನ್ನ ತಂಡಕ್ಕೆ ಹೇಳಿದ್ದಾರೆ.
ವಾಸ್ತವವಾಗಿ ಹ್ಯಾರಿಸ್ ಮಾತಿಗೂ ಮುನ್ನ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಕೂಡಾ ಟೀಂ ಇಂಡಿಯಾದ ವಿರುದ್ಧ ಪಾಕ್ ತಂಡ ಗಳಿಸಿದ ಜಯದ ದಾಖಲೆಯನ್ನು ನಮ್ಮ ಕ್ರಿಕೆಟಿಗರಿನ್ನೂ ಮರೆತಿಲ್ಲ, ಇದೀಗ ಮತ್ತೊಮ್ಮೆ ಭಾರತವನ್ನು ಸೋಲಿಸಲು ಸಜ್ಜಾಗಿದ್ದೇವೆ ಎಂದಿದ್ದರು. ನಾಯಕನ ಈ ಮಾತಿನ ಬೆನ್ನಲ್ಲೇ ಉಮರ್ ಅಕ್ಮಲ್ ಬದಲಾಗಿ ತಂಡಕ್ಕೆ ಸೇರ್ಪಡೆಗೊಂಡ ಹ್ಯಾರಿಸ್ ಸೋಹಿಲ್ ಕೂಡಾ ಮಾತನಾಡಿ 'ಟೀಂ ಇಂಡಿಯಾ ವಿರುದ್ಧದ ಛಾಂಪಿಯನ್ಸ್ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ ಯಾವುದೇ ಹೆಚ್ಚಿನ ಪ್ರೇರಣೆ ನೀಡುವ ಅಗತ್ಯವಿಲ್ಲ. ಆದರೆ ಪಾಕ್ ತಂಡ ತನ್ನ ವಿರೋಧಿ ತಂಡದ ಕುರಿತಾಗಿ ಯೋಚನೆ ಮಾಡಬಾರದು' ಎಂದಿದ್ದಾರೆ. ಈ ಮೂಲಕ ಪಾಕಿಸ್ತಾನ ತನ್ನ ವಿರುದ್ಧ ಆಡುತ್ತಿರುವುದು ಟೀಂ ಇಂಡಿಯಾ ಎಂಬುವುದನ್ನು ಮನಸ್ಸಿನಿಂದ ತೆಗೆದು ಹಾಕಬೇಕು, ಹೀಗಾದರೆ ಸುಲಭವಾಗಿ ಜಯಗಳಿಸಬಹುದು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಇನ್ನು ನೋಡುವುದಾದರೆ ಪಾಕಿಸ್ತಾನಕ್ಕೆ ಈವರೆಗೂ ಅಭ್ಯಾಸ ಮಾಡುವ ಅವಕಾಶ ಸಿಕ್ಕಿಲ್ಲ. ಎಜಬಸ್ಟನ್'ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಅಭ್ಯಾಸ ಪಂದ್ಯದಲ್ಲಿ ಕೇವಲ 10.2 ಓವರ್'ಗಳ ಆಟವನ್ನಷ್ಟೇ ಆಡಲು ಸಾಧ್ಯವಾಗಿತ್ತು. ಈ ಪಂದ್ಯದಲ್ಲಿ ಕಾಂಗರೂ ನಾಯಕ ಸ್ಟೀವ್ ಸ್ಮಿತ್ ನೇತೃತ್ವದ ತಂಡ ಒಂದು ವಿಕೆಟ್'ಗೆ 57 ರನ್ ಗಳಿಸಿತ್ತು. ಹೀಗಿರುವಾಗ ಸದ್ಯ ಪಾಕಿಸ್ತಾನ ತಂಡದ ಕಣ್ಣು ಇದೇ ಮೈದಾನದಲ್ಲಿ ರವಿವಾರದಂದು ನಡೆಯಲಿರುವ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಮೇಲಿದೆ. ಬಹುಶಃ ಇದೇ ಕಾರಣದಿಂದ ಸೋಹಿಲ್ ತಮ್ಮ ತಂಡಕ್ಕೆ ಈಗಾಗಲೇ ಇಂತಹ ಎಚ್ಚರಿಕೆ ನೀಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.