
ಬೆಂಗಳೂರು(ಮೇ 30): ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಮುಂದುವರಿಯುವುದು ಅನುಮಾನಾಸ್ಪದವಾಗಿದೆ. ಕೋಚ್ ಕುಂಬ್ಳೆ ವಿರುದ್ಧ ಟೀಮ್ ಇಂಡಿಯಾ ಆಟಗಾರರು ಅಸಮಾಧಾನ ಹೊಂದಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಅದರಲ್ಲೂ, ನಾಯಕ ವಿರಾಟ್ ಕೊಹ್ಲಿಯವರಿಗೆ ಕುಂಬ್ಳೆಯವರ ಧೋರಣೆ ಮತ್ತು ಕಾರ್ಯಶೈಲಿ ಇಷ್ಟವಾಗಿಲ್ಲವಂತೆ. ಆಟಗಾರರಷ್ಟೇ ಅಲ್ಲ, ಬಿಸಿಸಿಐನ ಅಧಿಕಾರಿಗಳಿಗೂ ಕುಂಬ್ಳೆಯ ಧೋರಣೆ ಸರಿತೋರಿತ್ತಿಲ್ಲವೆನ್ನಲಾಗಿದೆ.
ಕೊಹ್ಲಿಗೆ ಯಾಕೆ ಮುನಿಸು?
ಈ ವರ್ಷದ ಮಾರ್ಚ್'ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿಯ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಕುಂಬ್ಳೆ ಮತ್ತು ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ಶುರುವಾಗುವಂಥ ಘಟನೆ ನಡೆಯಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆ ಪಂದ್ಯಕ್ಕೆ ಮುನ್ನ ಟೀಮ್ ಇಂಡಿಯಾದ ಪಡೆಯನ್ನು ಫೈನಲ್'ಗೊಳಿಸಲಾಗಿತ್ತು. ಆದರೆ, ಕೋಚ್ ಕುಂಬ್ಳೆ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದರು. ನಾಯಕ ವಿರಾಟ್ ಕೊಹ್ಲಿ ಗಮನಕ್ಕೂ ತಾರದೆ ಪ್ರತಿಭಾನ್ವಿತ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಬಿಟ್ಟರು. ಇದು ಕೊಹ್ಲಿಗೆ ಹಿಡಿಸಲಿಲ್ಲವೆನ್ನಲಾಗಿದೆ.
ಇದಷ್ಟೇ ಅಲ್ಲ, ಬೇರೆ ಕೆಲ ಪ್ರಮುಖ ವಿಷಯಗಳಲ್ಲೂ ಕೊಹ್ಲಿ ಮತ್ತು ಕುಂಬ್ಳೆ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ತಂಡದ ಪ್ರತಿಯೊಬ್ಬ ಆಟಗಾರನಿಗೂ, ಯಾವುದೇ ಭೇದಭಾವವಿಲ್ಲದೆ ಸಂಭಾವನೆ ಸಿಗಬೇಕೆಂಬುದು ನಾಯಕ ಕೊಹ್ಲಿಯ ವಾದ; ಬಿಸಿಸಿಐನ ನಿಲುವು ಕೂಡ ಇದೆಯೇ. ಆದರೆ, ಕುಂಬ್ಳೆಯದ್ದು ಇದಕ್ಕೆ ವಿಭಿನ್ನ ಹಾದಿ.
ಬಿಸಿಸಿಐ ಮುನಿಸು:
ಬಿಸಿಸಿಐ ಅಸಮಾಧಾನಕ್ಕೆ ಇನ್ನೂ ಕೆಲ ಕಾರಣಗಳಿವೆ. ಸುಪ್ರೀಂಕೋರ್ಟ್ ನೇಮಕ ಮಾಡಿದ ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಯೊಂದಿಗೆ ಅನಿಲ್ ಕುಂಬ್ಳೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದಾರೆ. ಬಹಳಷ್ಟು ವಿಚಾರಗಳಲ್ಲಿ ಬಿಸಿಸಿಐನ ಅಧಿಕಾರಿಗಳನ್ನ ಬೈಪಾಸ್ ಮಾಡಿ ಕುಂಬ್ಳೆ ನೇರವಾಗಿ ಸಿಒಎಯೊಂದಿಗೆ ಮಾತನಾಡುತ್ತಾರೆ ಎಂಬುದು ಬಿಸಿಸಿಐನ ಕೆಂಗಣ್ಣಿಗೆ ಕಾರಣವಾಗಿದೆ. ಮಾತುಮಾತಿಗೂ ಕುಂಬ್ಳೆ ಅಲ್ಲಿಗೆ ಹೋಗುವ ಪ್ರಮೇಯ ಏನಿರುತ್ತದೆ? ಅದಕ್ಕೆಂದೇ ತಾವಿರುವುದು ಯಾತಕ್ಕೆ? ಎಂಬುದು ಬಿಸಿಸಿಐ ಅಧಿಕಾರಿಗಳ ಪ್ರಶ್ನೆ.
ಈ ಎಲ್ಲಾ ಕಾರಣಗಳಿಂದಾಗಿ ಕುಂಬ್ಳೆ ಕೋಚ್ ಆಗಿ ಮುಂದುವರಿಯುವುದು ಡೌಟಾಗಿದೆ. ಜೂನ್ 19ರವರೆಗೆ ಕುಂಬ್ಳೆಯವರ ಕೋಚ್ ಅವಧಿ ಇದೆ. ಕುಂಬ್ಳೆ ಕೋಚ್ ಆಗಲು ಪ್ರಮುಖ ಕಾರಣರಾದ ಕ್ರಿಕೆಟ್ ಸಲಹೆಗಾರರ ಸಮಿತಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಕುಂಬ್ಳೆ ಪರ ಮತ್ತೊಮ್ಮೆ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ. ತಂಡದ ಹಿರಿಯ ಆಟಗಾರರು ಮತ್ತು ಕೋಚ್ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲು ಈ ತ್ರಿಮೂರ್ತಿಗಳು ಪ್ರಯತ್ನಿಸುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ.
ಇದೇ ವೇಳೆ, ವೀರೇಂದ್ರ ಸೆಹ್ವಾಗ್ ಅವರನ್ನು ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಬೇಕೆಂದು ಸ್ವತಃ ಬಿಸಿಸಿಐ ಸೂಚಿಸಿದೆ. ಕೆಲ ಮೂಲಗಳ ಪ್ರಕಾರ, ಸೆಹ್ವಾಗ್ ಅವರೇ ತಂಡದ ನೂತನ ಕೋಚ್ ಆದರೂ ಆಗಬಹುದೆನ್ನಲಾಗಿದೆ.
ಮಾಹಿತಿ ನೆರವು: ಟೈಮ್ಸ್ ಆಫ್ ಇಂಡಿಯಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.