
ಭುವನೇಶ್ವರ್(ಜ.11): ಜನವರಿ 13ರಿಂದ ಆರಂಭವಾಗಲಿರುವ 15ನೇ ಆವೃತ್ತಿಯ ಹಾಕಿ ವಿಶ್ವಕಪ್‌ನ ಭಾರತದ ಎಲ್ಲಾ ಪಂದ್ಯಗಳ ಟಿಕೆಟ್ ಸೋಲ್ಡ್‌ಔಟ್ ಆಗಿದೆ ಎಂದು ಹಾಕಿ ಇಂಡಿಯಾ ಸೋಮವಾರ ಮಾಹಿತಿ ನೀಡಿದೆ. ಭಾರತ ಟೂರ್ನಿಯಲ್ಲಿ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜನವರಿ 13ಕ್ಕೆ ಸ್ಪೇನ್ ಹಾಗೂ ಜನವರಿ 15ಕ್ಕೆ ಇಂಗ್ಲೆಂಡ್ ವಿರುದ್ಧ ರೂರ್ಕೆಲಾದ ನೂತನ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ.
ಇದಾದ ಬಳಿಕ ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ಜನವರಿ 19ಕ್ಕೆ ವೇಲ್ಸ್ ವಿರುದ್ಧ ಆಡಲಿದೆ. ಈ ಮೂರೂ ಪಂದ್ಯಗಳ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದೆ. ಜೊತೆಗೆ ಇತರೆ ಪಂದ್ಯಗಳ ಟಿಕೆಟ್‌ಗಳಿಗೂ ಭಾರೀ ಬೇಡಿಕೆ ಕಂಡುಬರುತ್ತಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ. ಈಗಾಗಲೇ ರೂರ್ಕೆಲಾದ ಕ್ರೀಡಾಂಗಣದ ಎಲ್ಲಾ 20 ಪಂದ್ಯಗಳ ಟಿಕೆಟ್ ಮಾರಾಟಕ್ಕಿಟ್ಟಕೆಲವೇ ದಿನಗಳಲ್ಲಿ ಸೋಲ್ಡ್‌ಔಟ್ ಆಗಿತ್ತು.
ಮಲೇಷ್ಯಾ ಓಪನ್: ಸೋತು ಹೊರಬಿದ್ದ ಸೈನಾ, ಶ್ರೀಕಾಂತ್
ಕೌಲಾಲಂಪುರ: ಮಂಗಳವಾರ ಆರಂಭಗೊಂಡ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳು ಕಳಪೆ ಪ್ರದರ್ಶನ ತೋರಿದ್ದು, ಕಿದಂಬಿ ಶ್ರೀಕಾಂತ್ ಹಾಗೂ ಸೈನಾ ನೆಹ್ವಾಲ್ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ. 1 ಶ್ರೀಕಾಂತ್ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ 21-19, 21-14 ನೇರ ಗೇಮ್‌ಗಳಿಂದ ಪರಾಭವಗೊಂಡರೆ, ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ಚೀನಾದ ಹ್ಯಾನ್ ಯೂ ವಿರುದ್ಧ 21-12, 17-21, 21-12 ಅಂತರದಲ್ಲಿ ಸೋಲನುಭವಿಸಿದರು. ಆಕರ್ಷಿ ಕಶ್ಯಪ್ ಕೂಡಾ ಸೋತು ಹೊರಬಿದ್ದರು. ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ 2ನೇ ಸುತ್ತು ತಲುಪಿದರೆ, ಪುರುಷರ ಡಬಲ್ಸ್‌ನಲ್ಲಿ ಕೃಷ್ಣಪ್ರಸಾದ್-ವಿಷ್ಣುವರ್ಧನ್ ಜೋಡಿ ಸೋಲನುಭವಿಸಿತು.
ಏಷ್ಯಾ ಟಿಟಿ: ಪ್ರಿ ಕ್ವಾರ್ಟರ್ ತಲುಪಿದ ಮನಿಕಾ, ಶ್ರೀಜಾ
ದೋಹಾ: ಭಾರತದ ತಾರಾ ಟೇಬಲ್ ಟೆನಿಸ್ ಪಟುಗಳಾದ ಮನಿಕಾ ಬಾತ್ರಾ ಹಾಗೂ ಶ್ರೀಜಾ ಅಕುಲಾ 2033ರ ಡಬ್ಲ್ಯುಟಿಟಿಸಿ ಏಷ್ಯಾ ಕಾಂಟಿನೆಂಟನ್ ಸ್ಟೇಜ್‌ನಲ್ಲಿ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಏಷ್ಯಾ ಕಪ್ ಕಂಚು ಪದಕ ವಿಜೇತ ಬಾತ್ರಾ ಹಾಂಕಾಂಗ್‌ನ ಝು ಚೆಂಗ್ಯು ವಿರುದ್ಧ 4-0 ಅಂತರದಲ್ಲಿ ಗೆದ್ದರೆ, ಅಕುಲಾ ಚೈನೀಸ್ ತೈಪೆಯ ಚೆನ್ ತ್ಸು ಯು ವಿರುದ್ಧ 4-3 ಅಂತರದಲ್ಲಿ ಗೆಲುವು ಸಾಧಿಸಿದರು. ಆದರೆ ದಿಯಾ ಪರಾಗ್, ಸ್ವಸ್ತಿಕಾ ಘೋಷ್ ಹಾಗೂ ರೀತ್ ಟೆನ್ನಿಸನ್ ವಿರುದ್ಧ ಸೋತು ಹೊರಬಿದ್ದರು. ಪುರುಷರ ವಿಭಾಗದಲ್ಲಿ ಹರ್ಮೀತ್ ದೇಸಾಯಿ ಕೂಡಾ ಪರಾಭವಗೊಂಡರು.
ಉಡುಪಿಯಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ: ಹರ್ಯಾಣದ ಕುರುಕ್ಷೇತ್ರ ವಿವಿ ಜಯ
ಜಾವೆಲಿನ್ ಪಟು ಶಿವಪಾಲ್ ಸಿಂಗ್ ನಿಷೇಧ ಅವಧಿ ಕಡಿತ
ನವದೆಹಲಿ: ಭಾರತದ ತಾರಾ ಜಾವೆಲಿನ್ ಎಸೆತಗಾರ ಶಿವ್‌ಪಾಲ್ ಸಿಂಗ್‌ರ ಡೋಪಿಂಗ್ ಪ್ರಕರಣದ ನಿಷೇಧ ಅವಧಿಯನ್ನು ರಾಷ್ಟ್ರೀಯ ಡೋಪಿಂಗ್ ನಿಗ್ರಹ ಘಟಕ(ನಾಡಾ) ಕಡಿತಗೊಳಿಸಿದ್ದು, ಯಾವುದೇ ಕೂಟಗಳಲ್ಲಿ ಆಡಲು ಮುಕ್ತವಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಶಿವ್‌ಪಾಲ್ 2021ರಲ್ಲಿ ಡೋಪಿಂಗ್ ನಿಯಮ ಉಲ್ಲಂಘಿಸಿ ಸಿಕ್ಕಿ ಬಿದ್ದಿದ್ದರು. ಹೀಗಾಗಿ ಅವರಿಗೆ 4 ವರ್ಷ ನಿಷೇಧ ಹೇರಲಾಗಿತ್ತು. ಆದರೆ ನಿಷೇಧ ಅವಧಿಯನ್ನು 1 ವರ್ಷಕ್ಕೆ ಇಳಿಸಿದ್ದರಿಂದ ಅವರು ಸದ್ಯ ಆಡಲು ಮುಕ್ತವಾಗಿದ್ದಾರೆ.
ಫ್ರಾನ್ಸ್ ನಾಯಕ ಲಾರಿಸ್ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ
ಪ್ಯಾರಿಸ್: 2018ರ ಫಿಫಾ ವಿಶ್ವಕಪ್ ವಿಜೇತ ಫ್ರಾನ್ಸ್ ತಂಡದ ನಾಯಕ ಹ್ಯುಗೊ ಲಾರಿಸ್ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ 36 ವರ್ಷದ ಹ್ಯುಗೊ ನಾಯಕತ್ವದಲ್ಲೇ ಫ್ರಾನ್ಸ್ ತಂಡ ಅರ್ಜೆಂಟೀನಾ ವಿರುದ್ಧ ಕತಾರ್ ವಿಶ್ವಕಪ್‌ನ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಸ್ಥಾನ ಪಡೆದುಕೊಂಡಿತ್ತು. 2008ರಲ್ಲಿ ಅಂತಾರಾಷ್ಟ್ರೀಯ ಪಾದರ್ಪಣೆ ಮಾಡಿದ್ದ ಲಾರಿಸ್ ಫ್ರಾನ್ಸ್ ಪರ ದಾಖಲೆಯ 145 ಪಂದ್ಯಗಳನ್ನಾಡಿದ್ದಾರೆ. ಸದ್ಯ ಅವರು ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಟೊಟೆನ್‌ಹ್ಯಾಮ್ ಕ್ಲಬ್ ಪರ ಆಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.