ಗುಜರಾತ್'ಗೆ ಸೋಲಿನ ರುಚಿ ತೋರಿಸಿದ ಹರ್ಯಾಣ ಸ್ಟೀಲರ್ಸ್

By Suvarna Web DeskFirst Published Sep 2, 2017, 11:11 PM IST
Highlights

ಆರಂಭದಿಂದಲೂ ಅತ್ಯಂತ ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದವು ಕೊನೆಯ ಕೆಲ ನಿಮಿಷಗಳಿದ್ದಾಗ ಗೆಲುವು ಹರಿಯಾಣ ಪರ ವಾಲಿತು.

ಕೋಲ್ಕತಾ(ಸೆ.02): ಸತತ ಏಳು ಪಂದ್ಯಗಳಲ್ಲಿ ಸೋಲೇ ಕಾಣದೆ ಮುನ್ನುಗ್ಗುತ್ತಿದ್ದ ಗುಜರಾತ್ ಫಾರ್ಚೂನ್'ಜೈಂಟ್ಸ್'ನ ಜಯದ ನಾಗಾಲೋಟಕ್ಕೆ ಹರ್ಯಾಣ ಸ್ಟೀಲರ್ಸ್‌ ಬ್ರೇಕ್ ಹಾಕಿದೆ. ಕನ್ನಡಿಗ ಪ್ರಶಾಂತ್ ಕುಮಾರ್ ರೈ ಅವರ ಚುರುಕಿನ ಆಟದ ನೆರವಿನಿಂದ ಹರ್ಯಾಣ ಸ್ಟೀಲರ್ಸ್‌ 42-36 ಅಂಕಗಳ ಅಂತರದಲ್ಲಿ ಜಯದ ನಗೆ ಬೀರಿದೆ.

ಇಲ್ಲಿನ ಸುಭಾಶ್‌'ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ತಾರಾ ರೈಡರ್‌'ಗಳಾದ ಸಚಿನ್, ಕನ್ನಡಿಗ ಸುಕೇಶ್ ಹೆಗ್ಡೆ ಅವರ ಆಕರ್ಷಕ ಆಟದ ಹೊರತಾಗಿಯೂ ಗುಜರಾತ್ ಸೋಲನುಭವಿಸಿತು. ಆರಂಭದಿಂದಲೂ ಅತ್ಯಂತ ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದವು ಕೊನೆಯ ಕೆಲ ನಿಮಿಷಗಳಿದ್ದಾಗ ಗೆಲುವು ಹರಿಯಾಣ ಪರ ವಾಲಿತು.

ಗುಜರಾತ್ ಪರ ಸಚಿನ್ ಮೊದಲ ರೈಡ್‌'ನಲ್ಲೇ ಅಂಕ ಕಲೆಹಾಕುವಲ್ಲಿ ಯಶಸ್ವಿಯಾದರು. ಕರ್ನಾಟಕದ ಪ್ರಶಾಂತ್ ರೈ ಹರ್ಯಾಣಕ್ಕೆ ಮೊದಲ ಅಂಕ ತಂದಿತ್ತರು. ಮೊದಲಾರ್ಧದ ಮುಕ್ತಾಯಕ್ಕೆ ಗುಜರಾತ್ 20-13ರಲ್ಲಿ ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಹರ್ಯಾಣ ಅಂಕಗಳನ್ನು ಹೆಕ್ಕುತ್ತಾ ಸಾಗಿತು. ರೈಡಿಂಗ್, ಡಿಫೆನ್ಸ್ ಎರಡರಲ್ಲೂ ಮಿಂಚಿನಾಟವಾಡಿದ ಹರ್ಯಾಣ ಎದುರಾಳಿಗೆ ಆಘಾತ ನೀಡಿತು. ದ್ವಿತೀಯಾರ್ಧದ ಕೊನೆಯ 5 ನಿಮಿಷ ಬಾಕಿ ಇದ್ದಾಗ ವಜೀರ್ ಸಿಂಗ್ ಅತ್ಯುತ್ತಮ ರೈಡ್ ಮಾಡುವ ಮೂಲಕ ಗುಜರಾತ್ ಅನ್ನು ಎರಡನೇ ಬಾರಿ ಆಲೌಟ್ ಮಾಡಿದರು. ಈ ವೇಳೆ ಹರ್ಯಾಣ ಅಂಕಗಳ ಅಂತರವನ್ನು 35-29ಕ್ಕೇರಿಸಿಕೊಂಡಿತು. ಅಂತಿಮವಾಗಿ ಜವಾಬ್ದಾರಿಯುತ ಆಟವಾಡಿದ ಪ್ರಶಾಂತ್ ರೈಡಿಂಗ್‌'ನಲ್ಲಿ 14 ಹಾಗೂ ಡಿಫೆನ್ಸ್‌'ನಲ್ಲಿ 2 ಸೇರಿದಂತೆ ಒಟ್ಟು 16 ಅಂಕ ಗಳಿಸುವ ಮೂಲಕ ಹರ್ಯಾಣ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

click me!