
ಲಂಡನ್(ಜೂನ್ 06): ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಎಂಟ್ರಿ ಸಾಕಷ್ಟು ಮಂದಿಗೆ ಅಚ್ಚರಿ ಹುಟ್ಟಿಸಿತ್ತು. ಇನ್ನಿಂಗ್ಸ್'ನ ಕೊನೆಯಲ್ಲಿ ಧೋನಿಗಿಂತ ಮುಂಚೆ ಪಾಂಡ್ಯರನ್ನು ಹೇಗೆ ಕಳುಹಿಸಲಾಯಿತು ಎಂದು ಅಚ್ಚರಿ ಪಟ್ಟವರೇ ಹೆಚ್ಚು. ಹಾರ್ದಿಕ್ ಪಾಂಡ್ಯ ಸ್ವಲ್ಪ ಹೊತ್ತೇ ಕ್ರೀಸ್'ನಲ್ಲಿದ್ದರೂ ಅಬ್ಬರಿಸಿ ಬೊಬ್ಬಿರಿದರು. ಕೊನೆಯ ಓವರ್'ನಲ್ಲಿ ಪಾಂಡ್ಯ ಮೂರು ಅಮೋಘ ಸಿಕ್ಸರ್'ಗಳನ್ನು ಸಿಡಿಸಿದ ಫಲವಾಗಿ ಭಾರತ 319 ರನ್ ಮೊತ್ತ ಮುಟ್ಟಲು ಸಾಧ್ಯವಾಯಿತು.
ಆದರೆ, ಯುವರಾಜ್ ಸಿಂಗ್ 3ನೇಯವರಾಗಿ ಔಟಾದಾಗ ಧೋನಿ ಕ್ರೀಸ್'ಗೆ ಬರುತ್ತಾರೆಂದು ನಿರೀಕ್ಷಿಸಲಾಗಿತ್ತು. ಹಾರ್ದಿಕ್ ಪಾಂಡ್ಯ ಮುಂಚೆ ಹೇಗೆ ಬಂದರು? ಅನಿಲ್ ಕುಂಬ್ಳೆ ಅದಾಗಲೇ ಮಾಸ್ಟರ್'ಪ್ಲಾನ್ ಹಾಕಿದ್ದರು. ಅಕಸ್ಮಾತ್ ವಿಕೆಟ್ ಬಿದ್ದರೆ ಧೋನಿ ಬದಲು ಪಾಂಡ್ಯರನ್ನು ಕಳುಹಿಸಲು ಸ್ಕೆಚ್ ಹಾಕಿದ್ದರು. ಇದರ ಸುಳಿವು ಸ್ವತಃ ಪಾಂಡ್ಯಗೂ ಗೊತ್ತಿರಲಿಲ್ಲ. ಪ್ಯಾಡ್ ಹಾಕದೇ ಆರಾಮವಾಗಿದ್ದ ಪಾಂಡ್ಯಗೆ ಕುಂಬ್ಳೆ ಸಡನ್ನಾಗಿ ಸೂಚನೆ ನೀಡಿದರು. ನೆಕ್ಸ್'ಟ್ ನಿಂದೇ ಬ್ಯಾಟಿಂಗ್ ಎಂದು ಪಾಂಡ್ಯಗೆ 46ನೇ ಓವರ್'ನಲ್ಲಿ ಕುಂಬ್ಳೆ ತಿಳಿಸಿದರು. ದಿಢೀರ್ ಎಚ್ಚೆತ್ತ ಪಾಂಡ್ಯ ಕಾಲಿಗೆ ಪ್ಯಾಡ್, ಕೈಗೆ ಗ್ಲೌಸ್ ತೊಟ್ಟು ಸಿದ್ಧರಾಗುತ್ತಿದ್ದಂತೆಯೇ ಯುವರಾಜ್ ಸಿಂಗ್ ವಿಕೆಟ್ 47ನೇ ಓವರ್'ನಲ್ಲಿ ಪತನವಾಯಿತು. ಪಾಂಡ್ಯ ರೆಡಿಯಾಗುವುದಕ್ಕೂ, ಯುವಿ ವಿಕೆಟ್ ಬೀಳುವುದಕ್ಕೂ ಸರಿ ಹೋಯಿತು.
47ನೇ ಓವರ್'ನಲ್ಲಿ ಕ್ರೀಸ್'ಗೆ ಬಂದ ಪಾಂಡ್ಯ 48ನೇ ಹಾಗೂ ಕೊನೆಯ ಓವರ್'ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಭಾರಿಸಿ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನ ತಣಿಸಿದರು. ಹಾರ್ದಿಕ್ ಪಾಂಡ್ಯ ಕೇವಲ 6 ಬಾಲ್'ನಲ್ಲಿ 20 ರನ್ ಸಿಡಿಸಿದರು.
ಒತ್ತಡವೆದುರಿಸಲು ಪಾಂಡ್ಯ ತಂತ್ರ:
ಕ್ರೀಸಿಗೆ ಬರುತ್ತಿದ್ದಂತೆಯೇ ಬಹಳ ಸರಾಗವಾಗಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ಯಾವುದೇ ಒತ್ತಡವಿಲ್ಲದೆ ಆಡುತ್ತಿರುವಂತೆ ಕಂಡುಬಂದಿತು. ಆದರೆ, ಪಾಂಡ್ಯರೇ ಒಪ್ಪಿಕೊಂಡ ಪ್ರಕಾರ ಅವರಿಗೆ ಆ ಸಂದರ್ಭದಲ್ಲಿ ಒತ್ತಡ ಮನಸಿಗೆ ಬಂದಿತ್ತು. ಆದರೆ, ಈ ಒತ್ತಡವು ತಮ್ಮ ಆಟದ ಮೇಲೆ ಪರಿಣಾಮ ಬೀರಬಹುದೆಂದು ಶೀಘ್ರವೇ ಅರಿತ ಅವರು, ಇದೊಂದು ಭಾರತ-ಪಾಕ್ ಪಂದ್ಯ ಎಂದೆಣಿಸದೇ ನಾರ್ಮಲ್ ಗೇಮ್ ಎಂಬಂತೆ ಪರಿಗಣಿಸಿದರು. ಅನಗತ್ಯ ಒತ್ತಡದಿಂದ ಮುಕ್ತರಾದ ಪಾಂಡ್ಯ, ಬಹಳ ಮುಕ್ತವಾಗಿ ಬ್ಯಾಟ್ ಬೀಸಲು ಸಾಧ್ಯವಾಯಿತು. "ಒತ್ತಡಕ್ಕೊಳಗಾದಾಗ, ನೀವು ಏನು ಮಾಡಬಾರದೋ ಅದನ್ನೇ ಮಾಡಿಬಿಡುತ್ತೀರಿ," ಎಂದು ಪಾಂಡ್ಯ ಹೇಳುತ್ತಾರೆ.
ಪಾಂಡ್ಯರ ಈ ಚುಟುಕು ಇನ್ನಿಂಗ್ಸನ್ನ ಕ್ಯಾಪ್ಟನ್ ಕೊಹ್ಲಿ ಸೇರಿದಂತೆ ಅನೇಕ ಮಂದಿ ಪ್ರಶಂಸಿಸಿದ್ದಾರೆ. ಭಾರತ ಈ ಪಂದ್ಯವನ್ನು ಬಹಳ ಸುಲಭವಾಗಿ 124 ರನ್ನುಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.