ವಿರಾಟ್ ಕೊಹ್ಲಿ ಯಾಕೆ ಫಾರ್ಮ್ ಕಳೆದುಕೊಂಡ್ರು? ಸೌರವ್ ಗಂಗೂಲಿ ಏನಂತಾರೆ?

By Suvarna Web DeskFirst Published Apr 1, 2017, 10:20 AM IST
Highlights

ಈ ಮೊದಲೆಲ್ಲಾ ಕೊಹ್ಲಿ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದರೂ ಎಂದೂ ಕೂಡ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರಲಿಲ್ಲ. ಆದರೆ, ಈ ಸರಣಿ ಮಾತ್ರ ಅಪವಾದವಾಯಿತು.

ನವದೆಹಲಿ(ಏ. 01): ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಭಾರತ ಜಯಿಸಿದರೂ, ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಒಂದಷ್ಟು ಅಸಮಾಧಾನಗಳು ಉಳಿದುಕೊಂಡಿವೆ. ಅಂಥ ನಿರಾಸೆಗಳಲ್ಲಿ ವಿರಾಟ್ ಕೊಹ್ಲಿ ಎದುರಿಸಿದ ರನ್ ಬರವೂ ಒಂದು. ಕೊಹ್ಲಿಯ ವೃತ್ತಿಜೀವನ ನೋಡುತ್ತಾ ಬಂದವರಿಗೆ ಇದು ನಂಬಲಾಗದ ಸುದ್ದಿ. ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಪ್ರಕಾರ, ಕೊಹ್ಲಿಯವರ ಆಕ್ರೋಶಭರಿತ ವರ್ತನೆಗಳೇ ಅವರಿಗೆ ಸಂಕಷ್ಟ ತಂದೊಡ್ಡಿವೆ.

"ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೊಹ್ಲಿ ತಾನೊಬ್ಬ ಕ್ಯಾಪ್ಟನ್ ಆಗಿ ಗೆಲ್ಲಲೇಬೇಕೆಂದು ಹಠ ತೊಟ್ಟಿದಂತಿತ್ತು. ಇದರಿಂದ ಅವರು ಭಾವಾವೇಶಕ್ಕೆ ಒಳಗಾಗಿದ್ದು ಅವರ ಬ್ಯಾಟಿಂಗ್ ಮೇಲೆ ನಕರಾತ್ಮಕ ಪರಿಣಾಮ ಬೀರಿರಬಹುದು. ವಿರಾಟ್'ಗೆ ಇದೊಂದು ಪಾಠವಾಗಿದೆ. ಹುಟ್ಟಾ ಪ್ರತಿಭೆಯಾಗಿರುವ ಅವರು ಫಾರ್ಮ್'ಗೆ ಮರಳುವ ವಿಶ್ವಾಸ ನನಗಿದೆ" ಎಂದು ಐಸಿಸಿ ವೆಬ್'ಸೈಟ್'ಗೆ ಬರೆದ ಅಂಕಣದಲ್ಲಿ ಗಂಗೂಲಿ ಹೇಳಿದ್ದಾರೆ.

ಕಾಂಗರೂಗಳ ವಿರುದ್ಧದ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್'ನಲ್ಲಿದ್ದರು. ಈ ಋತುವಿನಲ್ಲಿ ಆಡಿದ 13 ಪಂದ್ಯಗಳಲ್ಲಿ ಅವರು 1,457 ರನ್ ಕಲೆಹಾಕಿದ್ದಾರೆ. ಸತತ ನಾಲ್ಕು ಸರಣಿಗಳಲ್ಲಿ ದ್ವಿಶತಕ ಗಳಿಸಿದ ವಿಶ್ವದ ಏಕೈಕ ಆಟಗಾರ ಅವರೆನಿಸಿದ್ದಾರೆ. ಇಂಥ ಭರ್ಜರಿ ಫಾರ್ಮ್'ನಲ್ಲಿದ್ದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿದ 5 ಇನ್ನಿಂಗ್ಸಲ್ಲಿ ಗಳಿಸಿದ್ದು ಕೇವಲ 46 ರನ್ ಮಾತ್ರ. ಈ ಸರಣಿಯಲ್ಲಿ ಸ್ಟೀವ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿ ನಡುವಿನ ಆನ್'ಪಿಚ್ ಮಾತಿನ ಸಮರ ಎಲ್ಲರ ಗಮನ ಸೆಳೆದಿತ್ತು. ಜಗಳದಲ್ಲಿ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡರೆ, ಸ್ವಿತ್ ಅದ್ಭುತ ಫಾರ್ಮ್'ನಲ್ಲಿದ್ದರು.

ಈ ಮೊದಲೆಲ್ಲಾ ಕೊಹ್ಲಿ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದರೂ ಎಂದೂ ಕೂಡ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರಲಿಲ್ಲ. ಆದರೆ, ಈ ಸರಣಿ ಮಾತ್ರ ಅಪವಾದವಾಯಿತು.

click me!