
ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಈ ಬಾರಿ ಶುರುವಿಗೂ ಮುನ್ನವೇ ಗಾಯಾಳುಗಳ ಬೇನೆಯಿಂದ ಬಸವಳಿದಿದೆ. ಚುಟುಕು ಕ್ರಿಕೆಟ್ ಸಮರಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಕೆ.ಎಲ್. ರಾಹುಲ್, ಆರ್.ಅಶ್ವಿನ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ಪಂದ್ಯಾವಳಿಯಿಂದ ಹೊರಬಿದ್ದರೆ, ಐದಾರು ಆಟಗಾರರು ಪಾಲ್ಗೊಳ್ಳುವುದು ಅನುಮಾನವಾಗಿದೆ. ಈ ಬೆಳವಣಿಗೆ ಐಪಿಎಲ್‌ಗೆ ಭಾರೀ ಹೊಡೆತ ನೀಡಿದೆ. ಐಪಿಎಲ್ ಚರಿತ್ರೆಯಲ್ಲೇ ಮೊದಲ ಬಾರಿಗೆ ಈ ಬಗೆಯಲ್ಲಿ ಆಟಗಾರರು ಹೊರಗುಳಿದಿರಲಿಲ್ಲ, ವಿದೇಶಿ ಆಟಗಾರರಿಗಿಂತ ಭಾರತದ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಹೊರಗುಳಿದಿರುವುದು ಗಮನೀಯ.
ರಾಹುಲ್‌ಗೆ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆ:
ಭುಜದ ನೋವಿನಿಂದ ಬಳಲುತ್ತಿರುವ ಕರ್ನಾಟಕದ ಕೆ.ಎಲ್. ರಾಹುಲ್, ಲೀಗ್‌ನಿಂದ ಹೊರಬಿದ್ದಿದ್ದು ಶಸ್ತ್ರಚಿಕಿತ್ಸೆಗಾಗಿ ಲಂಡನ್‌ಗೆ ತೆರಳಲಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆಗೆ ಸಂಪೂರ್ಣ ಗುಣಮುಖರಾಗುವುದು ಅವರ ಗುರಿ. ನಾಯಕ ವಿರಾಟ್ ಕೊಹ್ಲಿ ಲಭ್ಯತೆ ಕುರಿತು ಇನ್ನೂ ಸ್ಪಷ್ಟನೆ ಇಲ್ಲದ ಸಂದರ್ಭದಲ್ಲಿ ರಾಹುಲ್ ಸಹ ಹೊರಬಿದ್ದಿರುವುದು, ತಂಡದ ಬ್ಯಾಟಿಂಗ್ ಬಲಕ್ಕೆ ಭಾರೀ ಪೆಟ್ಟು ನೀಡಿದಂತಾಗಿದೆ. ರಾಹುಲ್ ಬದಲಿಗೆ ಆರ್‌ಸಿಬಿ ತಂಡಕ್ಕೆ ತಮಿಳುನಾಡು ಬ್ಯಾಟ್ಸ್‌ಮನ್ ನಾರಾಯಣ್ ಜಗದೀಶನ್ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
ಪುಣೆಗೆ ಕಾಡಲಿದೆ ಅಶ್ವಿನ್ ಅನುಪಸ್ಥಿತಿ:
ರೈಸಿಂಗ್ ಪುಣೆ ಸೂಪರ್‌ಜೈಂಟ್‌ನ ಪ್ರಮುಖ ಆಟಗಾರ ಆರ್. ಅಶ್ವಿನ್ ಗಾಯದ ಹಿನ್ನೆಲೆಯಲ್ಲಿ ಲೀಗ್‌ನಿಂದ ಹಿಮ್ಮೆಟ್ಟುವ ನಿರ್ಧಾರಕ್ಕೆ ಬಂದಿದ್ದಾರೆ. ಸ್ಪೋಟ್ಸ್‌ರ್ ಹರ್ನಿಯಾದಿಂದ ಬಳಲುತ್ತಿರುವ ಅಶ್ವಿನ್‌ಗೆ 6 ರಿಂದ 8 ವಾರಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಇದೇ ಕಾರಣದಿಂದಾಗಿ ಅವರು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಆಡಿರಲಿಲ್ಲ. ಜೂನ್ 1ರಿಂದ ಶುರುವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೊತ್ತಿಗೆ ಅವರು ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭುಜದ ನೋವಿನಿಂದ ಚೇತರಿಸಿಕೊಳ್ಳದ ವಿಜಯ್:
ತವರಿನ ಟೆಸ್ಟ್ ಋುತುವಿನಲ್ಲಿ ಅಸ್ಥಿರ ಪ್ರದರ್ಶನ ತೋರಿದ ಮುರಳಿ ವಿಜಯ್ ಭುಜದ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ವಿಜಯ್ ಸಹ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.ಕಳೆದ ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದ ವಿಜಯ್ ಬದಲಿಗೆ ಫ್ರಾಂಚೈಸಿ ಈ ಬಾರಿ ನಾಯಕತ್ವದ ಹೊಣೆಯನ್ನು ಮ್ಯಾಕ್ಸ್‌ವೆಲ್‌ಗೆ ನೀಡಿದೆ.
ಟೆಸ್ಟ್ ವೀರರೂ ಅನುಮಾನ:
ಕೆಕೆಆರ್ ತಂಡದ ಮುಂಚೂಣಿ ವೇಗಿ ಉಮೇಶ್ ಯಾದವ್, ಗುಜರಾತ್ ಲಯನ್ಸ್ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಟೂರ್ನಿಯ ಆರಂಭದ ಮೂರು ವಾರಗಳ ಕಾಲ ಕಣಕ್ಕಿಳಿಯದೇ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಇಬ್ಬರೂ ಸಹ ತವರಿನ ಟೆಸ್ಟ್ ಋುತುವಿನಲ್ಲಿ ಭಾರತದ ಸತತ ಸರಣಿ ಗೆಲುವುಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 13 ಟೆಸ್ಟ್‌ಗಳ ಪೈಕಿ ಯಾದವ್ 12ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿದ್ದರೆ, ಜಡೇಜಾ ಎಲ್ಲಾ 13 ಟೆಸ್ಟ್‌ಗಳಲ್ಲಿ ಆಡಿದ್ದರು. ಈ ಇಬ್ಬರ ಕುರಿತು ಆಯಾ ತಂಡಗಳು ಇನ್ನೂ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ಚಾಂಪಿಯನ್ಸ್ ಬಲ ಕುಗ್ಗಿಸಲಿದೆ ‘ಫಿಝ್' ಅಲಭ್ಯತೆ!:
ಬಾಂಗ್ಲಾದ ಯುವ ವೇಗಿ ಮುಸ್ತಾಫಿಜುರ್ ಕೂಡ ಐಪಿಎಲ್‌ನಿಂದ ದೂರ ಉಳಿಯುವ ಸಂಭವವಿದೆ. ಹಾಲಿ ಚಾಂಪಿಯನ್ ಸನ್ರೈಸರ್ಸ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಅವರು, 2016ರಲ್ಲಿ ಪ್ರಚಂಡ ಪ್ರದರ್ಶನ ನೀಡಿದ್ದರು. ಅತಿಯಾದ ಕ್ರಿಕೆಟ್‌ನಿಂದ ಅವರು ಗಾಯದ ಸಮಸ್ಯೆಗೆ ಗುರಿಯಾಗುತ್ತಿದ್ದು, ಬಾಂಗ್ಲಾ ಕ್ರಿಕೆಟ್ ಮಂಡಳಿ ಐಪಿಎಲ್‌ನಲ್ಲಿ ಆಡಲು ಅವರಿಗೆ ಇನ್ನೂ ಅನುಮತಿ ನೀಡಿಲ್ಲ. ಬಿಸಿಬಿ ಮೂಲಗಳ ಪ್ರಕಾರ, ಮುಸ್ತಾಫಿಜುರ್ ಐಪಿಎಲ್‌ನ ಮೊದಲ ಹಂತವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಡಿ 'ಕಾಕ್, ಡುಮಿನಿ ಔಟ್:
ಡೆಲ್ಲಿಯ ಪ್ರಮುಖ ಆಟಗಾರರಾದ ಕ್ವಿಂಟಾನ್ ಡಿ'ಕಾಕ್ ಗಾಯದ ಸಮಸ್ಯೆಯಿಂದ ಲೀಗ್‌ನಿಂದ ಹೊರಬಿದ್ದಿದ್ದರೆ, ಜೆ.ಪಿ. ಡುಮಿನಿ ವೈಯಕ್ತಿಕ ಕಾರಣದಿಂದ ಲೀಗ್‌ಗೆ ಅಲಭ್ಯವಾಗಿದ್ದಾರೆ. ಇವರಲ್ಲದೆ, ಪುಣೆ ತಂಡದ ಮಿಚೆಲ್ ಮಾಶ್‌ರ್ ಕೂಡ ಹೊರಬಿದ್ದಿದ್ದಾರೆ. ಏತನ್ಮಧ್ಯೆ, ರಾಷ್ಟ್ರೀಯ ತಂಡಗಳ ಸರಣಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್, ದ.ಆಫ್ರಿಕಾ, ವೆಸ್ಟ್‌ಇಂಡೀಸ್ ಹಾಗೂ ಇನ್ನೂ ಕೆಲ ದೇಶಗಳ ಆಟಗಾರರು ಲೀಗ್ ಅನ್ನು ಅರ್ಧದಲ್ಲೇ ತೊರೆಯಲಿದ್ದಾರೆ.
ಆರ್‌ಸಿಬಿ ಹಂಗಾಮಿ ನಾಯಕನಿಗೂ ಗಾಯ
ಭುಜದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಆರಂಭಿಕ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿರುವುದು ಆರ್‌ಸಿಬಿ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿದ ಬೆನ್ನಲ್ಲೇ, ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಬೇಕಿರುವ ಎಬಿ ಡಿವಿಲಿಯರ್ಸ್ ಸಹ ಗಾಯದ ಸಮಸ್ಯೆಗೆ ಗುರಿಯಾಗಿದ್ದಾರೆ. ಶುಕ್ರವಾರ ದ. ಆಫ್ರಿಕಾದ ದೇಸಿ ಏಕದಿನ ಟೂರ್ನಿಯ ಫೈನಲ್‌ನಲ್ಲಿ ಅವರು ಟೈಟನ್ಸ್ ತಂಡದ ಪರ ಆಡಬೇಕಿತ್ತಾದರೂ, ಬೆನ್ನು ನೋವಿನ ಕಾರಣ ಪಂದ್ಯದಿಂದ ಹೊರಗುಳಿದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.