2026 Commonwealth Games: ದುರಂತವನ್ನೇ ಸೋಲಿಸಿದ ಶಿಲ್ಪಾ; ಕಾಮನ್‌ವೆಲ್ತ್ ಕನಸು ನನಸು, ರಾಜ್ಯದಿಂದ ಆಯ್ಕೆಯಾದ ಏಕೈಕ ಅಥ್ಲೀಟ್

Kannadaprabha News   | Kannada Prabha
Published : Jul 26, 2026, 08:54 AM IST
From Tragedy to Triumph Shilpa Qualifies as Karnataka s Lone Athlete for 2026 Commonwealth Games

ಸಾರಾಂಶ

ನಾಲ್ಕನೇ ವಯಸ್ಸಿನಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡ ಮೈಸೂರಿನ ಕೆ.ಎಸ್. ಶಿಲ್ಪಾ, ಎಲ್ಲಾ ಅಡೆತಡೆಗಳನ್ನು ಮೀರಿ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ.  ಇವರು, ಇದೀಗ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸುತ್ತಿದ್ದಾರೆ.

ಚುಂಚನಕಟ್ಟೆ (ಜು.26): ನಾಲ್ಕು ವರ್ಷದ ಬಾಲಕಿಯಾಗಿದ್ದಾಗ ಮನೆಯ ಸಮೀಪ ಐಸ್‌ಕ್ರೀಂ ಖರೀದಿಸಿ ಹಿಂದಿರುಗುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಡಗಾಲನ್ನೇ ಕಳೆದುಕೊಂಡಳು. ಎಲ್ಲರಂತೆ ಈ ಘಟನೆಯನ್ನು ತನ್ನ ಪಾಲಿನ ದೌರ್ಭಾಗ್ಯವೆಂದು ನೆನೆದು ಮನೆಯಲ್ಲೇ ಉಳಿದಿದ್ದರೆ ಇಂದು ಈಕೆ ರಾಷ್ಟ್ರಮಟ್ಟದ ಅಥ್ಲೀಟ್ಆಗಿ ರೂಪುಗೊಳ್ಳುತ್ತಿರಲಿಲ್ಲ. ತನಗೆ ಬಂದೊದಗಿದ ದುರ್ಗತಿಯನ್ನು ಸೂರ್ತಿಯಾಗಿ ಸ್ವೀಕರಿಸಿದ ಮೈಸೂರು ಜಿಲ್ಲೆಯ ಕೆ.ಆರ್‌. ನಗರ ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ 36 ವರ್ಷದ ಕೆ.ಎಸ್‌. ಶಿಲ್ಪಾ, ಗೆಳತಿ ನೀಡಿದ ಅಮೂಲ್ಯ ಸಲಹೆಯಂತೆ ವಿಶೇಷ ಚೇತನರಿಗಾಗಿಯೇ ಇರುವ ಕ್ರೀಡಾ ಅಭ್ಯಾಸದಲ್ಲಿ ತೊಡಗಿಸಿಕೊಂಡರು.

ಅವರ ಈ ಪ್ರಾಮಾಣಿಕ ಪ್ರಯತ್ನ ಜು. 23 ರಿಂದ ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆಯಲಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ತಂದುಕೊಟ್ಟಿದೆ. ಈ ಕ್ರೀಡಾಕೂಟದ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಸ್ಪರ್ಧಿಸಲು ರಾಜ್ಯದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಇವರಾಗಿದ್ದಾರೆ. ರೈತ ಶೈಲಾ ಹಾಗೂ ಗೃಹಿಣಿ ಶಾಂತಾ ದಂಪತಿ ಪುತ್ರಿಯಾಗಿರುವ ಶಿಲ್ಪಾ, ಗ್ರಾಮೀಣ ವಾತಾವರಣದಲ್ಲೇ ಬೆಳೆದವರು. ಕ್ರೀಡೆಗೆ ಹೆಚ್ಚಿನ ಅವಕಾಶಗಳಿಲ್ಲದ ಪರಿಸ್ಥಿತಿಯಲ್ಲೂ ಸ್ನಾತಕೋತ್ತರ ಪದವಿ ಹಾಗೂ ಬಿಇಡಿ ಪೂರ್ಣಗೊಳಿಸಿ, ಮೈಸೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರತಿದಿನ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪರಿಚಯವಾದ ಗೆಳತಿ ಗೀತಾ ಅವರು ಪ್ಯಾರಾ ಕ್ರೀಡೆಗಳತ್ತ ಶಿಲ್ಪಾ ಅವರನ್ನು ಕರೆದೊಯ್ದರು. 2019ರಲ್ಲಿ ಕ್ರೀಡಾ ಬದುಕಿಗೆ ಮುಖ ಮಾಡಿದರು.

ಆಗ ಅವರಿಗೆ 29 ವರ್ಷ. ಮೊದಲಿಗೆ ಸಿಟ್ಟಿಂಗ್ ವಾಲಿಬಾಲ್‌ಗೆ ಆಯ್ಕೆ ಮಾಡಿಕೊಂಡ ಅವರು, ಕರ್ನಾಟಕ ತಂಡವನ್ನು ನಾಲ್ಕು ಬಾರಿ ಮುನ್ನಡೆಸಿದರು. ಅವರ ಸಾಮರ್ಥ್ಯವನ್ನು ಗುರುತಿಸಿದ ವಾಲಿಬಾಲ್ ಕೋಚ್ ರಾಘವೇಂದ್ರ, ವೈಯಕ್ತಿಕ ಸ್ಪರ್ಧೆಗಳತ್ತ ಗಮನ ಹರಿಸುವಂತೆ ಸಲಹೆ ನೀಡಿದರು. ಅದರಂತೆ 2023ರಲ್ಲಿ ಶಾಟ್ಪುಟ್, ಡಿಸ್ಕಸ್ಥ್ರೋ ಅಭ್ಯಾಸ ಆರಂಭಿಸಿದರು. ಮೊದಲಿಗೆ ಸ್ವತಃ ಅಭ್ಯಾಸ ಆರಂಭಿಸಿದ ಅವರು, 2024ರಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ಎಸ್‌.ಡಿ. ಈಶಾನ್ಅವರಿಂದ ತರಬೇತಿ ಪಡೆದರು. ಬಳಿಕ ಸತ್ಯನಾರಾಯಣ ಅವರು ಅಂತಾರಾಷ್ಟ್ರೀಯ ವರ್ಗೀಕರಣ ಪ್ರಕ್ರಿಯೆಯಲ್ಲಿ ನೆರವಾದರು. ಪರಿಣಾಮ 2023ರಲ್ಲಿ ಥಾಯ್ಲೆಂಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆ ಡಿಸ್ಕಸ್ನಲ್ಲಿ ಬೆಳ್ಳಿ ಹಾಗೂ ಜಾವೆಲಿನ್ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಮೊದಲ ಅಂತಾರಾಷ್ಟ್ರೀಯ ಯಶಸ್ಸು ದಾಖಲಿಸಿದರು.

2024ರಲ್ಲಿ ಗೋವಾದ ರಾಷ್ಟ್ರೀಯ ಚಾಂಪಿಯನ್ಷಿಪ್ನ ಶಾಟ್ ಪುಟ್ನಲ್ಲಿ ಮೊದಲ ಪದಕ ಗೆದ್ದರು. 2025ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ಪ್ರಿಕ್ನಲ್ಲಿ ಶಾಟ್ಪುಟ್ನಲ್ಲಿ ಚಿನ್ನದ ಪದಕ ಗೆದ್ದು ಮಹತ್ವದ ಸಾಧನೆ ಮಾಡಿದರು. ಈ ಸಾಧನೆಯ ಬಳಿಕ ಶಿಕ್ಷಕಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಪೂರ್ಣಾವ ಕ್ರೀಡೆಯನ್ನೇ ಆಯ್ಕೆ ಮಾಡಿಕೊಂಡರು. ಆರ್ಥಿಕ ಸಂಕಷ್ಟ ನೀಗಲಿಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದರೂ ಶಿಲ್ಪಾ ಅವರಿಗೆ ಆರ್ಥಿಕ ಸಂಕಷ್ಟ ಇನ್ನೂ ದೊಡ್ಡ ಸವಾಲಾಗಿದೆ. ಯಾವುದೇ ಕಾರ್ಪೊರೇಟ್ ಅಥವಾ ಸಂಸ್ಥೆಗಳ ಪ್ರಾಯೋಜಕತ್ವ ಇಲ್ಲದ ಕಾರಣ, ಅತ್ಯಾಧುನಿಕ ಕ್ರೀಡಾ ಕೃತಕ ಕಾಲಿನ ಬದಲಿಗೆ ಸಾಮಾನ್ಯ ಜೈಪುರ್ಫುಟ್ಬಳಸಿ ತರಬೇತಿ ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಭಾರತವನ್ನು ಪ್ರತಿನಿಸುವುದು ನನ್ನ ಪಾಲಿಗೆ ಹೆಮ್ಮೆಯ ಸಂಗತಿ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವುದೇ ಈಗಿನ ಗುರಿ. ಪ್ಯಾರಾ ಒಲಂಪಿಕ್ಸ್ ಕ್ರೀಡಾಕೂಟಗಳಿಗೆ ಕಾರ್ಪೊರೇಟ್ಸಂಸ್ಥೆಗಳು ಬೆಂಬಲ ನೀಡಬೇಕು. ತರಬೇತಿ ಹಾಗೂ ಸ್ಪರ್ಧೆಗಳ ವೆಚ್ಚ ಭರಿಸುವುದು ಅನೇಕ ಕ್ರೀಡಾಪಟುಗಳಿಗೆ ಕಷ್ಟವಾಗುತ್ತಿದೆ, ಎಂದು ಶಿಲ್ಪಾ ಪತ್ರಿಕೆಗೆ ತಿಳಿಸಿದ್ದಾರೆ.

ಅಪಘಾತದ ಬಳಿಕ ನಮ್ಮ ಕುಟುಂಬಕ್ಕೆ ಭಾರಿ ಆಘಾತವಾಗಿತ್ತು. ಆದರೆ, ಪಾಲಕರು ನನ್ನ ದೊಡ್ಡ ಶಕ್ತಿಯಾಗಿ ನಿಂತರು. ನಾನು ಕಾಲು ಕಳೆದುಕೊಂಡಿದ್ದೇನೆ ಎಂಬ ಕಾರಣಕ್ಕೆ ಎಂದಿಗೂ ವಿಭಿನ್ನವಾಗಿ ನೋಡಲಿಲ್ಲ. ಎಲ್ಲವನ್ನೂ ಆತ್ಮವಿಶ್ವಾಸದಿಂದ ಪ್ರಯತ್ನಿಸು ಎಂದು ಸದಾ ಪ್ರೋತ್ಸಾಹಿಸಿದರು.

- ಶಿಲ್ಪಾ ಕೆ.ಎಸ್‌., ಪ್ಯಾರಾ ಅಥ್ಲೀಟ್‌, ಮೈಸೂರು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋದಿಯ ಔಟ್ ಆಫ್ ದಿ ಸಿಲೆಬಸ್ ಪ್ಲಾನ್, ಶಿಕ್ಷಣ ಸಚಿವಾಲಯ ಜವಾಬ್ದಾರಿ ಪ್ರಲ್ಹಾದ್ ಜೋಶಿಗೆ ನೀಡಿದ್ದೇಕೆ?
ದಿಗ್ಗಜ ವಿರಾಟ್ ಕೊಹ್ಲಿ ದಾಖಲೆ ಪುಡಿ ಮಾಡಿದ ಇಶಾನ್ ಕಿಶನ್, ಟೀಂ ಇಂಡಿಯಾದಲ್ಲಿ ಹೊಸ ಅಲೆ