ಹಾಲಿ ಚಾಂಪಿಯನ್ ಹಾಲೆಪ್ ಔಟ್!| ಅಮೆರಿಕದ 17 ವರ್ಷದ ಅಮಂಡಾ ವಿರುದ್ಧ ಸೋಲು
ಪ್ಯಾರಿಸ್[ಜೂ.07]: ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್, ರೊಮೇನಿಯಾದ ಸಿಮೋನಾ ಹಾಲೆಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಅಮೆರಿಕದ 17 ವರ್ಷದ ಅಮಂಡಾ ಅನಿಸಿಮೊವಾ ವಿರುದ್ಧ 2-6, 6-4 ನೇರ ಸೆಟ್‌ಗಳಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.
ವಿಶ್ವ ನಂ.51 ಅಮಂಡಾ, 2007ರ ಬಳಿಕ ಗ್ರ್ಯಾಂಡ್‌ಸ್ಲಾಂನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಅತಿಕಿರಿಯ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 2007ರ ಆಸ್ಪ್ರೇಲಿಯನ್ ಓಪನ್‌ನಲ್ಲಿ ನಿಕೋಲ್ ವೈಡಿಸೊವಾ ಸೆಮಿಫೈನಲ್ ಪ್ರವೇಶಿಸಿ, ಗ್ರ್ಯಾಂಡ್‌ಸ್ಲಾಂನಲ್ಲಿ ಸೆಮೀಸ್‌ಗೇರಿದ ಅತಿಕಿರಿಯ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದರು.
ಮಹಿಳಾ ಸಿಂಗಲ್ಸ್‌ನ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 14ನೇ ಶ್ರೇಯಾಂಕಿತೆ ಅಮೆರಿಕದ ಮ್ಯಾಡಿಸನ್ ಕೀಸ್ ವಿರುದ್ಧ 8ನೇ ಶ್ರೇಯಾಂಕಿತೆ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ 6-3, 7-5 ಸೆಟ್‌ಗಳಲ್ಲಿ ಜಯಿಸಿ ಸೆಮಿಫೈನಲ್ ಪ್ರವೇಶಿಸಿದರು.
ಸೆಮೀಸ್‌ಗೆ ಜೋಕೋ, ಥೀಮ್
ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.1 ನೋವಾಕ್ ಜೋಕೋವಿಚ್, 5ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 7-5, 6-2,6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ, 9ನೇ ಬಾರಿ ಫ್ರೆಂಚ್ ಓಪನ್ ಸೆಮಿಫೈನಲ್ ಪ್ರವೇಶಿಸಿದರು. ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ.4 ಆಸ್ಟ್ರಿಯಾದ ಡೊಮಿನಿಕ್ ಥೀಮ್, 10ನೇ ಶ್ರೇಯಾಂಕಿತ ರಷ್ಯಾದ ಕರೆನ್ ಕಚನೊವ್ ವಿರುದ್ಧ 6-2, 6-4, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿ ಅಂತಿಮ 4ರ ಸುತ್ತಿಗೇರಿದರು.
ಸೆಮಿಫೈನಲ್ ಪಂದ್ಯಗಳು ಶುಕ್ರವಾರ ನಡೆಯಲಿದ್ದು, ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ 4 ಶ್ರೇಯಾಂಕಿತರ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ. ಮೊದಲ ಸೆಮೀಸ್‌ನಲ್ಲಿ 2ನೇ ಶ್ರೇಯಾಂಕಿತ ನಡಾಲ್, 3ನೇ ಶ್ರೇಯಾಂಕಿತ ಫೆಡರರ್ ಸೆಣಸಿದರೆ, ಮತ್ತೊಂದು ಸೆಮೀಸ್‌ನಲ್ಲಿ ಅಗ್ರ ಶ್ರೇಯಾಂಕಿತ ಜೋಕೋವಿಚ್, 4ನೇ ಶ್ರೇಯಾಂಕಿತ ಥೀಮ್ ಎದುರಾಗಲಿದ್ದಾರೆ.