ಫ್ರೆಂಚ್ ಓಪನ್‌‌ನಲ್ಲಿ ವಾವ್ರಿಂಕಾಗೆ ಆಘಾತ, ಜೋಕೋ ಮುನ್ನಡೆ

First Published May 29, 2018, 11:20 AM IST
Highlights

2018 ಫ್ರೆಂಚ್ ಓಪನ್‌ ಅಚ್ಚರಿ ಫಲಿತಾಂಶಗಳನ್ನ ನೀಡುತ್ತಿದೆ. ವೀನಸ್ ವಿಲಿಯಮ್ಸ್, ಸ್ಟಾನಿಸ್ಲಾಸ್ ವಾವ್ರಿಂಕಾ ಸೇರಿದಂತೆ ಹಲವು ದಿಗ್ಗಜರು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ನೋವಾಕ್ ನೋವಾಕ್ ಜೋಕೋವಿಚ್ ಸುಲಭ ಗೆಲುವಿನ ಮೂಲಕ 2ನೇ ಸುತ್ತು ಪ್ರವೇಶಿಸಿದ್ದಾರೆ.

ಏಜೆನ್ಸಿ ಪ್ಯಾರಿಸ್:  2018ರ ಫ್ರೆಂಚ್ ಓಪನ್ ಆರಂಭಿಕ ಸುತ್ತಿನಲ್ಲೇ ಆಘಾತಕಾರಿ ಫಲಿತಾಂಶಗಳನ್ನು ನೀಡುತ್ತಿದೆ. ವೀನಸ್ ವಿಲಿಯಮ್ಸ್ ಬಳಿಕ ಮಾಜಿ ಚಾಂಪಿಯನ್ ಸ್ವಿಟ್ಜರ್ ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ, ಹಾಲಿ ಮಹಿಳಾ ಸಿಂಗಲ್ಸ್ ಚಾಂಪಿಯನ್ ಲಾತ್ವಿಯಾದ ಎಲೆನಾ ಒಸ್ಟಪೆನ್ಕೊ ಸಹ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಕಳೆದ ವರ್ಷ ಫೈನಲ್‌ನಲ್ಲಿ ರಾಫೆಲ್ ನಡಾಲ್ ವಿರುದ್ಧ ಸೋಲುಂಡಿದ್ದ 2015ರ ಚಾಂಪಿಯನ್ ವಾವ್ರಿಂಕಾ, ಮೊದಲ ಸುತ್ತಲ್ಲಿ ಸ್ಪೇನ್‌ನ ಗಾರ್ಸಿಯಾ ಲೊಪೆಜ್ ವಿರುದ್ಧ 2-6, 6-3,6-4,6-7,3-6 ಸೆಟ್‌ಗಳಲ್ಲಿ ಸೋಲುಂಡರು. ಮಂಡಿ ಗಾಯದಿಂದ ಬಳಲುತ್ತಿರುವ ಸ್ಟಾನ್, ಪೂರ್ಣ ಫಿಟ್ನೆಸ್ ಕಂಡುಕೊಂಡಿಲ್ಲ ಎನ್ನುವುದು ಸಾಬೀತಾಯಿತು. ಈ ಸೋಲಿನೊಂದಿಗೆ ಸ್ಟಾನಿಸ್ಲಾಸ್ ವಾವ್ರಿಂಕಾ ಎಟಿಪಿ ವಿಶ್ವ ರ್ಯಾಕಿಂಗ್‌ನಲ್ಲಿ 30ನೇ ಸ್ಥಾನದಿಂದ 250ಕ್ಕಿಂತ ಕೆಳಗಿನ ಸ್ಥಾನಕ್ಕೆ ಕುಸಿಯಲಿದ್ದಾರೆ. ಇದೇ ವೇಳೆ  2017 ರಲ್ಲಿ ಪ್ರಶಸ್ತಿ ಗೆದ್ದು ಅಚ್ಚರಿ ಮೂಡಿಸಿದ್ದ 20 ವರ್ಷದ ಒಸ್ಟಪೆನ್ಕೊ, ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಕೊಜ್ಲೊವಾ ವಿರುದ್ಧ 5-7, 3-6 ನೇರ ಸೆಟ್‌ಗಳಲ್ಲಿ ಸೋಲುಂಡು ಹೊರಬಿದ್ದರು. 

2ನೇ ಸುತ್ತಿಗೆ ಜೋಕೋವಿಚ್:  12 ಗ್ರ್ಯಾಂಡ್‌ಸ್ಲಾಂ ಒಡೆಯ ಸರ್ಬಿಯಾದ ನೋವಾಕ್ ಜೋಕೋವಿಚ್, ಮೊದಲ ಸುತ್ತಿನ ಪಂದ್ಯದಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಿದರು. ಬ್ರೆಜಿಲ್‌ನ ರೊಜೊರಿಯೊ ವಿರುದ್ದ 6-3, 6-4, 6-4 ನೇರ ಸೆಟ್‌ಗಳಲ್ಲಿ ಗೆದ್ದ ಜೋಕೋ, 2ನೇ ಸುತ್ತಿಗೆ ಪ್ರವೇಶಿಸಿದರು. ಅಗ್ರ ಶ್ರೇಯಾಂಕಿತ ಸ್ಪೇನ್‌ನ ರಾಫೆಲ್ ನಡಾಲ್ ಮೊದಲ ಸುತ್ತಿನ ಪಂದ್ಯಕ್ಕೆ
ಮಳೆ ಅಡ್ಡಿಪಡಿಸಿದ್ದೂ ಪಂದ್ಯವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಮಹಿಳಾ ಸಿಂಗಲ್ಸ್ ನಲ್ಲಿ ವಿಕ್ಟೋರಿಯಾ ಅಜರೆಂಕಾ ಆಘಾತ ಅನುಭವಿಸಿದರೆ, 2 ಬಾರಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೊವಾ 2ನೇ ಸುತ್ತಿಗೇರಿದರು. 

click me!