
ಭಾರತೀಯರು ಹೊಸದಾಗಿ ಯಾವುದೇ ವಾಹನ ಖರೀದಿಸಲಿ ಅದನ್ನು ಬಳಸುವುದಕ್ಕೆ ಮೊದಲು ಪೂಜೆ ಮಾಡುವುದು ಸಾಮಾನ್ಯ, ಅದು ಸೈಕಲ್ಲೇ ಆಗಿರಲಿ ಕಾರು ಬೈಕ್‌ಗಳೇ ಆಗಿರಲಿ, ಅದರ ಚಕ್ರಕ್ಕೆ ಲಿಂಬೆಹಣ್ಣು ಇಟ್ಟು ತೆಂಗಿನ ಕಾಯಿ ಒಡೆದು ಹಾರ ಹಾಕಿ ಪೂಜೆ ಮಾಡಿದರೆನೇ ಬಹುತೇಕರಿಗೆ ಸಮಾಧಾನ. ಇದು ಭಾರತದಲ್ಲಿ ಅದರಲ್ಲೂ ಹಿಂದೂಗಳಲ್ಲಿ ಸರ್ವೇ ಸಾಮಾನ್ಯವಾದ ದೃಶ್ಯಗಳು, ಆದರೆ ವಿದೇಶಗಳಲ್ಲಿ ಈ ರೀತಿಯ ಪದ್ಧತಿಗಳಿಲ್ಲ, ಆದರಲ್ಲೂ ಸ್ಫೋರ್ಟ್ಸ್ ಕಾರುಗಳಿಗೆ ಯಾರು ಪೂಜೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಇಲ್ಲೊಂದು ಕಡೆ ರೆಡ್ ಬುಲ್ ಎಫ್1 ಕಾರಿಗೆ ವಿದೇಶಿ ಮಹಿಳೆಯೊಬ್ಬರು ಪೂಜೆ ಮಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವೀಡಿಯೋವನ್ನು AJ Lalwani ಎಂಬ ಉದ್ಯಮಿ ಹಾಗೂ ಪಾಡ್‌ಕಾಸ್ಟರ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ನಾನು ಇದೇ ಮೊದಲ ಬಾರಿ ಎಫ್1 ಕಾರಿಗೆ ಪೂಜೆ ಮಾಡುವುದನ್ನು ನೋಡಿದ್ದು ಎಂದು ಅವರು ವೀಡಿಯೋದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಕೊನೆಕ್ಷಣದಲ್ಲಿ ಏನಾದರೂ ಆಗಬಹುದು: ಶಾಮನೂರು ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಟ್ಟರು ಅಚ್ಚರಿಯಿಲ್ಲ: ಯತ್ನಾಳ್
ವೈರಲ್ ಆದ ವೀಡಿಯೋದಲ್ಲಿ ವಿದೇಶಿ ಮಹಿಳೆಯೊಬ್ಬರು ಕಾರಿಗೆ ಅರಿಶಿಣ ಕುಂಕುಮ ತಿಲಕವಿಟ್ಟು ಪೂಜೆ ಮಾಡಿದ್ದು, ಬಳಿಕ ಲಿಂಬೆಹಣ್ಣು ಹಸಿರು ಮೆಣಸಿನಾಕಾಯಿಯನ್ನು ಕಾರಿನ ಮುಂಭಾಗ ಕಟ್ಟಿದ್ದಾರೆ. ಬಳಿಕ ಕೇಸರಿ ಬಣ್ಣದ ಹೂವಿನ ಹಾರವನ್ನು ಹಾಕಿ ಬಳಿಕ ಕಾರಿನ ಮುಂದೆ ತೆಂಗಿನಕಾಯಿ ಒಡೆದು ಪೂಜೆ ಮಾಡಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ರೆಡ್‌ಬುಲ್ ನಿಮಗೆ ಹಾರುವುದಕ್ಕೆ ರೆಕ್ಕೆ ನೀಡುತ್ತದೆ. ಆದರೆ ಮೆಣಸಿನಕಾಯಿ ಹಾಗೂ ಲಿಂಬೆಹುಳಿ ಆ ನಿಮ್ಮ ರೆಕ್ಕೆಗಳನ್ನು ಸುರಕ್ಷಿತವಾಗಿರಿಸುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಆ ವಿದೇಶಿ ಯುವತಿ ತೆಂಗಿನಕಾಯಿ ಒಡೆದ ಸ್ಟೈಲ್‌ನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಆಕೆ ಕೆಲ ಬಹುತೇಕ ಭಾರತೀಯರಿಗಿಂತ ಚೆನ್ನಾಗಿ ತೆಂಗಿನಕಾಯಿ ಒಡೆದಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಎಫ್1 ಕಾರಿಗೆ ಹೀಗೆ ಪೂಜೆ ಮಾಡಲ್ಪಟ್ಟಿದ್ದು ಇದೇ ಮೊದಲೆನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಪರಿಚಿತರ ತಿನಿಸಿಗೆ ಕೈಚಾಚಿದ ಮುದ್ದು ಕಂದ: ವಿಡಿಯೋ ನೋಡಿ ನಮ್ಮ ಮಕ್ಕಳೂ ಹೀಗೆಯೇ ಎಂದ ನೆಟ್ಟಿಗರು
ಈ ಕಾರು ಯಾರದ್ದು?
ಅಂದಹಾಗೆ ಹೀಗೆ ಪೂಜೆ ಮಾಡಲ್ಪಟ್ಟ ಕಾರಿನ ಮಾಲೀಕರಿಗೆ ತುಸು ಭಾರತೀಯ ಸಂಪರ್ಕವಿದೆ. ಹೌದು ಈ ಕಾರು ಅರ್ವಿದ್ ಆನಂದ್ ಓಲೋಫ್ ಲಿಂಡ್‌ಬ್ಲಾಡ್ ಅವರದಾಗಿದ್ದು, ಇವರು ಕೇವಲ 18 ವರ್ಷದ ಒಬ್ಬ ಬ್ರಿಟಿಷ್ ರೇಸಿಂಗ್ ಚಾಲಕರಾಗಿದ್ದಾರೆ. ಫಾರ್ಮುಲಾ ಒನ್ ರೇಸರ್ ಆಗಿರುವ ಅವರು ಭಾರತದವರಲ್ಲ, ಆದರೆ ಅವರ ತಾಯಿಗೆ ಭಾಋತೀಯ ಸಂಪರ್ಕವಿದೆ. ಸ್ವೀಡಿಷ್ ತಂದೆ ಮತ್ತು ಬ್ರಿಟಿಷ್ ಭಾರತೀಯ ಮೂಲದ ತಾಯಿಗೆ ವರ್ಜೀನಿಯಾ ವಾಟರ್‌ನಲ್ಲಿ ಹುಟ್ಟಿದ ಅರ್ವಿದ್ ಆನಂದ್ ಅವರು ತಮ್ಮ ಏಳನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಕಾರ್ಟ್ ರೇಸಿಂಗ್ ಅನ್ನು ಪ್ರಾರಂಭಿಸಿದ್ದರು. 2022 ರಲ್ಲಿ ಜೂನಿಯರ್ ಫಾರ್ಮುಲಾಗಳಿಗೆ ಪದವಿ ಪಡೆಯುವ ಮೊದಲು ಅವರು ಹಲವಾರು ಕಾಂಟಿನೆಂಟಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ರೇಸಿಂಗ್‌ಗೂ ಮೊದಲು ಅವರ ಅಜ್ಜಿ ಅವರಿಗೆ ಆರತಿ ಬೆಳಗಿ ಸಿಹಿ ತಿನಿಸಿ ಶುಭ ಹಾರೈಸುವ ವೀಡಿಯೋಗಳನ್ನು ನಾವು ಅವರ ಪ್ರೊಫೈಲ್‌ಗಳಲ್ಲಿ ಕಾಣಬಹುದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.