
ಮಾಸ್ಕೋ[ಜೂ.18]: ಆ್ಯಂಡ್ರೆಸ್ ಗ್ರ್ಯಾನ್’ಕ್ವಿಸ್ಟ್ ಬಾರಿಸಿದ ಅಮೋಘ ಗೋಲಿನ ನೆರವಿನಿಂದ ಬಲಾಢ್ಯ ದಕ್ಷಿಣ ಕೊರಿಯವನ್ನು ಮಣಿಸಿ ಸ್ವೀಡನ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು ಆರಂಭದಿಂದಲೇ ಆಕ್ರಮಣಕಾರಿಯಾಟಕ್ಕೆ ಮೊರೆಹೋದವು. ಮೊದಲಾರ್ಧದಲ್ಲಿ ದಕ್ಷಿಣ ಕೊರಿಯಾ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಆದರೂ ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ದ್ವಿತಿಯಾರ್ಧದ ಆರಂಭದಲ್ಲೇ ಸ್ವೀಡನ್’ಗೆ ಗೋಲು ಗಳಿಸುವ ಸಾಧ್ಯತೆಯಿತ್ತು. ಆದರೆ ಎಮಿಲ್ ಫೋರ್ಸ್’ಬರ್ಗ್ ಅವಕಾಶ ಕೈಚೆಲ್ಲಿದರು. ಇದಾದ ಕೆಲಹೊತ್ತಿನಲ್ಲೇ ಕೊರಿಯಾ ಕೂಡಾ ಮತ್ತೆ ಆಕ್ರಮಣಕಾರಿಯಾಟಕ್ಕೆ ಮೊರೆಹೋಯಿತು. 11ನೇ ನಂಬರ್ ಜೆರ್ಸಿ ತೊಟ್ಟಿದ್ದ ಹ್ವಾಂಗ್ ಹೀಚನ್ ಗೋಲು ಬಾರಿಸುವ ಯತ್ನವನ್ನು ಸ್ವೀಡನ್ ವಿಫಲಗೊಳಿಸಿತು. ಪಂದ್ಯದ 62ನೇ ನಿಮಿಷದಲ್ಲಿ ಸ್ವೀಡನ್ ನಾಯಕ ಆ್ಯಂಡ್ರೆಸ್ ಗ್ರ್ಯಾನ್’ಕ್ವಿಸ್ಟ್ ಅದ್ಭುತ ಗೋಲು ಬಾರಿಸಿದರು. ಇದು 2006ರ ಬಳಿಕ ಸ್ವೀಡನ್ ಪರ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಮೊದಲ ಗೋಲು ಎನಿಸಿತು.
ಪಂದ್ಯದ 80ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾಗೆ ಫ್ರೀ ಕಿಕ್ ಅವಕಾಶ ದೊರೆಯಿತಾದರೂ ಸ್ವೀಡನ್ ಗೋಲು ಕೀಪರ್ ಅವರ ಯತ್ನವನ್ನು ಮತ್ತೊಮ್ಮೆ ವಿಫಲಗೊಳಿಸಿದರು. ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡ ಸ್ವೀಡನ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.