ಫೈನಲ್'ಗೆ ಇಂಗ್ಲೆಂಡ್-ಸ್ಪೇನ್ ಕಠಿಣ ತಾಲೀಮು

By Suvarna Web DeskFirst Published Oct 27, 2017, 11:20 AM IST
Highlights

ಬ್ರೆಜಿಲ್ ವಿರುದ್ಧ ಸೆಮೀಸ್‌'ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಇಂಗ್ಲೆಂಡ್ ರೀನ್ ಬ್ರೀವ್‌'ಸ್ಟರ್ ಮತ್ತು ಸ್ಪೇನ್ ತಂಡದ ನಾಯಕ ಅಬೆಲ್ ರುಯಿಜ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಕೋಲ್ಕತಾ(ಅ.27): ಫಿಫಾ ಅಂಡರ್ 17 ಫುಟ್ಬಾಲ್ ವಿಶ್ವಕಪ್‌'ನ ಫೈನಲ್'ನಲ್ಲಿ ಯುರೋಪ್‌'ನ ಪ್ರಬಲ ತಂಡಗಳಾಗಿರುವ ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಸೆಣಸಲು ಸಜ್ಜಾಗಿವೆ. ಶನಿವಾರ ಪ್ರಶಸ್ತಿ ಸುತ್ತಿನ ಹಣಾಹಣಿ ನಡೆಯಲಿದೆ. ಇದಕ್ಕಾಗಿ 2 ತಂಡಗಳ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಈ ವರ್ಷದ ಆರಂಭದಲ್ಲಿ ಯುಇಎಫ್‌'ಎ ಅಂಡರ್ 17 ರ ಯುರೋಪಿಯನ್ ಫುಟ್ಬಾಲ್ ಚಾಂಪಿಯನ್'ಶಿಪ್ ಫೈನಲ್‌ನಲ್ಲೂ ಈ ಎರಡೂ ತಂಡಗಳು ಎದುರಾಗಿದ್ದವು. ಇದರಲ್ಲಿ ಸ್ಪೇನ್, ಇಂಗ್ಲೆಂಡ್ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು.

ಇದೀಗ ವಿಶ್ವಕಪ್ ಫೈನಲ್‌'ನಲ್ಲಿ ಸ್ಪೇನ್ ಅನ್ನು ಸೋಲಿಸಿ ಸೇಡನ್ನು ತೀರಿಸುವ ತವಕದಲ್ಲಿ ಇಂಗ್ಲೆಂಡ್ ಇದೆ.

ಬ್ರೆಜಿಲ್ ವಿರುದ್ಧ ಸೆಮೀಸ್‌'ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಇಂಗ್ಲೆಂಡ್ ರೀನ್ ಬ್ರೀವ್‌'ಸ್ಟರ್ ಮತ್ತು ಸ್ಪೇನ್ ತಂಡದ ನಾಯಕ ಅಬೆಲ್ ರುಯಿಜ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಇಬ್ಬರೂ ಆಟಗಾರರು ಚಿನ್ನದ ಬೂಟಿಗಾಗಿ ಪೈಪೋಟಿ ನಡೆಸಲಿದ್ದಾರೆ. ಯುರೋಪಿಯನ್ ಅಂಡರ್ 17 ಚಾಂಪಿಯನ್‌'ಶಿಪ್‌'ನ ಫೈನಲ್‌'ನಲ್ಲಿ ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಮೂರು ಬಾರಿ ಎದುರಾಗಿವೆ.

ಬೃಹತ್ ರಂಗೋಲಿ: ಕಿರಿಯರ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲು ಫುಟ್ಬಾಲ್ ಪ್ರಿಯರ ನಾಡು ಕೋಲ್ಕತಾ ಸನ್ನದ್ಧಗೊಂಡಿದ್ದು, ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದ ಮುಂಭಾಗದಲ್ಲಿ ಬೃಹತ್ ರಂಗೋಲಿ ಆಟಗಾರರಿಗೆ ಸ್ವಾಗತ ಕೋರಲಿದೆ. ಸುಮಾರು 200 ಮೀಟರ್ ಅಳತೆಯಲ್ಲಿ ಪಶ್ಚಿಮ ಬಂಗಾಳದ ಫೈನ್‌ಆರ್ಟ್ಸ್ ವಿದ್ಯಾರ್ಥಿಗಳು ರಂಗೋಲಿ ಬಿಡಿಸಲಿದ್ದಾರೆ.

click me!