
ಹೈದರಾಬಾದ್(ಮಾ.07): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ತವರಿನಲ್ಲಿ ತಮ್ಮ ವಿದಾಯದ ಪಂದ್ಯವನ್ನಾಡುವ ಮೂಲಕ ಟೆನಿಸ್ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. 2 ದಶಕಗಳ ಹಿಂದೆ ಇಲ್ಲಿನ ಲಾಲ್ ಬಹದೂರ್ ಕ್ರೀಡಾಂಗಣದಲ್ಲೇ ಸಾನಿಯಾ ತಮ್ಮ ಚೊಚ್ಚಲ ಡಬ್ಲ್ಯುಟಿಎ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದ ಸಾನಿಯಾ ಮಿರ್ಜಾ, ಇದೀಗ ಅದೇ ಕ್ರೀಡಾಂಗಣದಲ್ಲಿ ಕೊನೆಯ ಟೆನಿಸ್ ಪಂದ್ಯವನ್ನಾಡಿದರು.
ಸಾನಿಯಾ ಮಿರ್ಜಾ ಆಡಿದ ಕೊನೆಯ ಪ್ರದರ್ಶನ ಪಂದ್ಯವನ್ನು ಅಪಾರ ಸಂಖ್ಯೆಯ ಅವರ ಅಭಿಮಾನಿಗಳು ಮಾತ್ರವಲ್ಲದೇ, ಸಿನಿಮಾ ತಾರೆಯರು, ಹಲವು ಕ್ರಿಕೆಟಿಗರು ಹಾಗೂ ರಾಜಕಾರಣಿಗಳು ಕಣ್ತುಂಬಿಕೊಂಡರು. ಖ್ಯಾತ ನಟ ಮಹೇಶ್ ಬಾಬು, ನಮ್ರತಾ ಶಿರೋಡ್ಕರ್, ಎ ಅರ್ ರೆಹಮಾನ್, ಹುಮಾ ಖುರೇಷಿ, ಕ್ರೀಡಾ ತಾರೆಗಳಾದ ಇರ್ಫಾನ್ ಪಠಾಣ್, ಯುವರಾಜ್ ಸಿಂಗ್, ಸೈನಾ ನೆಹ್ವಾಲ್ ಕೂಡಾ ಪಾಲ್ಗೊಂಡಿದ್ದರು. ಇನ್ನು ಸಾನಿಯಾ ಮಿರ್ಜಾ ಆತ್ಮೀಯ ಗೆಳತಿ ಹಾಗೂ ಬಾಲಿವುಡ್ ಖ್ಯಾತ ಕೊರಿಯೋಗ್ರಾಫರ್ ಫರ್ಹಾ ಖಾನ್ ಕೂಡಾ ಹಾಜರಿದ್ದರು. ಇನ್ನು ಸಾನಿಯಾ ವಿದಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾರೆಯರನ್ನು ಪುಷ್ಪಾ ಸಿನಿಮಾದ ಖ್ಯಾತ ಹಾಡಾದ ಊ ಅಂಟವಾ ಹಾಡಿಗೆ ಬಿಂದಾಸ್ ಆಗಿ ಸ್ಟೆಪ್ಸ್ ಹಾಕುವಂತೆ ಮಾಡುವಲ್ಲಿ ಫರ್ಹಾ ಖಾನ್ ಯಶಸ್ವಿಯಾಗಿದ್ದು, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಇರ್ಫಾನ್ ಪಠಾಣ್, ಸೈನಾ ನೆಹ್ವಾಲ್ ಮತ್ತು ಯುವರಾಜ್ ಸಿಂಗ್ ಮಾತ್ರವಲ್ಲದೇ ವೇದಿಕೆ ಮೇಲೆ ಫರ್ಹಾ ಖಾನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಫರ್ಹಾ ಖಾನ್, ವೇದಿಕೆ ಮೇಲಿದ್ದ ಎಲ್ಲರೂ ಸ್ಟೆಪ್ಸ್ ಹಾಕುವಂತೆ ಮಾಡಿದ್ದರು. ಅದರಲ್ಲೂ ಯುವರಾಜ್ ಸಿಂಗ್ ಸ್ಟೆಪ್ಸ್ ಹಾಕಿದ ವಿಡಿಯೋ ಸಾಕಷ್ಟು ವೈರಲ್ ಆಗಿವೆ.
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ವಿಡಿಯೋವನ್ನು ಶೇರ್ ಮಾಡಿದ್ದು, ಅದ್ಭುತ ವೃತ್ತಿಜೀವನ ನಡೆಸಿದ ಸಾನಿಯಾ ಮಿರ್ಜಾಗೆ ಅಭಿನಂದನೆಗಳು ಎಂದು ಇನ್‌ಸ್ಟಾಗ್ರಾಂನಲ್ಲಿ ಶುಭಹಾರೈಸಿದ್ದಾರೆ.
2003ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಿದ್ದ ಸಾನಿಯಾ, 2013ರ ವರೆಗೂ ಸಿಂಗಲ್ಸ್‌ನಲ್ಲೂ ಸ್ಪರ್ಧಿಸುತ್ತಿದ್ದರು. ಆದರೆ ಅವರಿಗೆ ಹೆಚ್ಚು ಯಶಸ್ಸು ದೊರೆತಿದ್ದು ಡಬಲ್ಸ್ ವಿಭಾಗದಲ್ಲಿ. ಮಹಿಳಾ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ತಲಾ 3 ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ವಿಶ್ವ ನಂ.1 ಸ್ಥಾನವನ್ನೂ ಅಲಂಕರಿಸಿದ್ದರು.
ಸ್ವಿಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೊತೆ 2015ರಲ್ಲಿ ವಿಂಬಲ್ಡನ್, ಯುಎಸ್ ಓಪನ್, 2016ರಲ್ಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ ಸಾನಿಯಾ, ಮಹೇಶ್ ಭೂಪತಿ ಜೊತೆ 2009ರಲ್ಲಿ ಆಸ್ಪ್ರೇಲಿಯನ್ ಓಪನ್, 2012ರಲ್ಲಿ ಫ್ರೆಂಚ್ ಓಪನ್ ಜಯಿಸಿದ್ದರು. 2014ರಲ್ಲಿ ಬ್ರೆಜಿಲ್‌ನ ಬ್ರುನೊ ಸೊರೆಸ್ ಜೊತೆ ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಗ್ರ್ಯಾನ್ ಸ್ಲಾಂನ ಮಹಿಳಾ ಡಬಲ್ಸ್‌ನಲ್ಲಿ ಒಮ್ಮೆ, ಮಿಶ್ರ ಡಬಲ್ಸ್‌ನಲ್ಲಿ 5 ಬಾರಿ ರನ್ನರ್-ಅಪ್ ಕೂಡಾ ಆಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.