
ಕ್ರಿಕೆಟಿಗ ಎಂದಾಗ ಒಂದು ಖ್ಯಾತಿ ಇರುತ್ತದೆ. ಆದರೆ ಆ ಖ್ಯಾತಿಯೊಂದಿಗೆ, ಕ್ರಿಕೆಟಿಗರಿಗೆ ಅನೇಕ ಘಟನೆಗಳು ಸಂಭವಿಸುತ್ತವೆ. ಕೆಲವು ಕ್ರಿಕೆಟಿಗರು ಫಿಕ್ಸಿಂಗ್‌ನಲ್ಲಿ ಸಿಲುಕಿದರೆ, ಇತರರು ವಂಚನೆ ಮತ್ತು ಲೈಂಗಿಕ ಶೋಷಣೆ ಆರೋಪ ಎದುರಿಸುತ್ತಾರೆ. ಯಶ್ ದಯಾಳ್ ನಂತರ ಈಗ ಲೈಂಗಿಕ ಕಿರುಕುಳದ ಆರೋಪವನ್ನು ಮತ್ತೊಬ್ಬ ಕ್ರಿಕೆಟಿಗ ಎದುರಿಸುತ್ತಿದ್ದಾನೆ. ಹಾಗಾದರೆ ಆ ಸ್ಟಾರ್ ಕ್ರಿಕೆಟಿಗ ಯಾರು? ಆರೋಪ ಸಾಭೀತಾಗಿದೆಯಾ? ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಈ ಪ್ರಕರಣದಲ್ಲಿ, ಆ ಕ್ರಿಕೆಟಿಗ ಸಾಮಾಜಿಕ ಮಾಧ್ಯಮದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ, ಅವಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕುತೂಹಲಕಾರಿಯಾಗಿ, ಈ ಆರೋಪವನ್ನು ಕ್ರಿಕೆಟಿಗ ಕೂಡ ಒಪ್ಪಿಕೊಂಡಿದ್ದಾನೆ, ಆದ್ದರಿಂದ ಅವನು ಈಗ ಜೈಲಿಗೆ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಆಟಗಾರ ಬೇರೆ ಯಾರೂ ಅಲ್ಲ, ಆಸ್ಟ್ರೇಲಿಯಾದ ವೇಗದ ಬೌಲರ್ ಆರನ್ ಸಮ್ಮರ್ಸ್. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪವನ್ನು ಆರನ್ ಸಮ್ಮರ್ಸ್ ಸ್ವೀಕರಿಸಿದ್ದಾನೆ. ಈಗ ಅವರು ದೀರ್ಘ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಟ್ಯಾಸ್ಮೇನಿಯನ್ ಸುಪ್ರೀಂ ಕೋರ್ಟ್ ಆಗಸ್ಟ್‌ನಲ್ಲಿ ಪ್ರಕರಣದ ಅಂತಿಮ ತೀರ್ಪು ನೀಡಲಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಈ ಪ್ರಕರಣವು 2018ರಲ್ಲಿ ಅವರು ಹೋಬಾರ್ಟ್ ಹರಿಕೇನ್ಸ್ ತಂಡದ ಭಾಗವಾಗಿದ್ದಾಗ ಆರಂಭವಾಗಿತ್ತು. ಸಾಮಾಜಿಕ ಮಾಧ್ಯಮದ ಮೂಲಕ ಅಪ್ರಾಪ್ತ ವಯಸ್ಕ ಸಂತ್ರಸ್ತೆ ಸಂಪರ್ಕಿಸಿ ನಂತರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅವರ ಮೇಲಿದೆ. ಜೂನ್ ಅಂತ್ಯದಲ್ಲಿ, ಸಮ್ಮರ್ಸ್ ತನ್ನ ಮನವಿಯನ್ನು ಬದಲಾಯಿಸಿದರು ಮತ್ತು ಮೂರು ಅಪರಾಧ ಆರೋಪಗಳಿಗೆ ತಪ್ಪೊಪ್ಪಿಕೊಂಡಿದ್ದಾರೆ.
ಕ್ರಿಕೆಟಿಗನನ್ನು ಪ್ರತಿನಿಧಿಸುವ ಕ್ಯಾರೋಲಿನ್ ಗ್ರೀವ್ಸ್, ಘಟನೆಯ ಸಮಯದಲ್ಲಿ ತನ್ನ ಕಕ್ಷಿದಾರ ತುಂಬಾ ಕಷ್ಟಕರವಾದ ಮಾನಸಿಕ ಸ್ಥಿತಿ ಎದುರಿಸುತ್ತಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರ ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಿದ್ದರು. ಈ ಘಟನೆ ಅವರ ಮನಸ್ಸನ್ನು ಕಾಡುತ್ತಲೆ ಇರುತ್ತದೆ. ಆದ್ದರಿಂದ ಅವರ ಜೀವನವನ್ನು ಗೌರವಯುತವಾಗಿ ಮುಂದುವರಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಆರನ್ ಸಮ್ಮರ್ಸ್ ಅವರನ್ನು ಆಸ್ಟ್ರೇಲಿಯಾದ ಸರ್ಕ್ಯೂಟ್‌ನಲ್ಲಿ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಅಲ್ಲದೇ ಭವಿಷ್ಯದ ತಾರೆಯಾಗಿ ನೋಡಲಾಗುತ್ತಿತ್ತು ಎಂದು ಕ್ಯಾರೋಲಿನ್ ಗ್ರೀವ್ಸ್ ಹೇಳಿದ್ದಾರೆ. "ಆಸ್ಟ್ರೇಲಿಯಾ ಅಥವಾ ಜಗತ್ತಿನ ಬೇರೆಲ್ಲಿಯಾದರೂ ವೃತ್ತಿಪರ ಕ್ರಿಕೆಟ್ ಆಡುವ ಅವರ ಕನಸುಗಳು ಈಗ ಶಾಶ್ವತವಾಗಿ ಮುಗಿದಿವೆ ಎಂದು ಅವರಿಗೆ ತಿಳಿದಿದೆ" ಎಂದು ಅವರು ಹೇಳಿದ್ದಾರೆ.
ಇದು ಆರನ್ ಸಮ್ಮರ್ಸ್ ಅವರ ಮೊದಲ ಕ್ರಿಮಿನಲ್ ಪ್ರಕರಣವಲ್ಲ. 2021 ರಲ್ಲಿ, ಅವರು ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಚಿತ್ರಿಸುವ ವಸ್ತು ಹೊಂದಿದ್ದ ಹಾಗೂ ಅದನ್ನು ಹಂಚಿಕೊಂಡಿದ್ದಕ್ಕಾಗಿ ಪ್ರತ್ಯೇಕ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದರು. ಆ ಪ್ರಕರಣದಲ್ಲಿ ಅವರಿಗೆ ಜೈಲು ಶಿಕ್ಷೆಯೂ ವಿಧಿಸಲಾಯಿತು. ಇದರರ್ಥ ಸಮ್ಮರ್ಸ್ ಈ ಹಿಂದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಅಪರಾಧಗಳಿಗೆ ಶಿಕ್ಷೆಗೊಳಗಾಗಿದ್ದರು. ಕ್ಯಾರೋಲಿನ್ ಗ್ರೀವ್ಸ್ ನ್ಯಾಯಾಲಯಕ್ಕೆ ಜಾಮೀನಿಗಾಗಿ ಒತ್ತಾಯಿಸಿದ್ದರು. ಆದರೆ ನ್ಯಾಯಾಧೀಶೆ ಹೆಲೆನ್ ವುಡ್ ಈ ಪ್ರಕರಣದಲ್ಲಿ ಅಂತಹ ಪರಿಹಾರ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಅವರ ಜಾಮೀನನ್ನು ರದ್ದುಗೊಳಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಈಗ ಅವರಿಗೆ ಆಗಸ್ಟ್‌ನಲ್ಲಿ ಶಿಕ್ಷೆ ವಿಧಿಸಲಾಗುವುದು.
30 ವರ್ಷದ ಆರನ್ ಸಮ್ಮರ್ಸ್, ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಲ್ಲಿ ಹೋಬಾರ್ಟ್ ಹರಿಕೇನ್ಸ್ ಮತ್ತು ದೇಶೀಯ ಕ್ರಿಕೆಟ್ ನಲ್ಲಿ ಟ್ಯಾಸ್ಮೇನಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರ ವೇಗದ ಬೌಲಿಂಗ್ ಅವರನ್ನು ಆಸ್ಟ್ರೇಲಿಯಾದ ಅತ್ಯಂತ ಪ್ರತಿಭಾನ್ವಿತ ವೇಗದ ಬೌಲರ್ ಗಳಲ್ಲಿ ಒಬ್ಬರನ್ನಾಗಿ ಮಾಡಿತು. ಆದರೆ ಅವರ ಕ್ರಿಕೆಟ್ ವೃತ್ತಿಜೀವನ ಈಗ ಅಂತ್ಯಗೊಂಡಿದೆ ಎಂದು ಎನ್ನಲಾಗಿದೆ. ಬಲಗೈ ವೇಗದ ಬೌಲರ್ ಆರನ್ ಸಮ್ಮರ್ಸ್ ಏಳು ಲಿಸ್ಟ್ ಎ ಪಂದ್ಯಗಳು ಮತ್ತು ಮೂರು ಟಿ20 ಗಳನ್ನು ಆಡಿದ್ದಾರೆ. ಲಿಸ್ಟ್ ಎ ಪಂದ್ಯಗಳಲ್ಲಿ, ಸಮ್ಮರ್ಸ್ 77.00 ಸರಾಸರಿಯಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ, ಆದರೆ ಟಿ20 ಕ್ರಿಕೆಟ್‌ನಲ್ಲಿ ಅವರು ಒಂದೇ ಒಂದು ವಿಕೆಟ್ ಪಡೆದಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.