ದುಲೀಪ್ ಟ್ರೋಫಿಯ ಎರಡನೇ ದಿನದಾಟದಲ್ಲಿ ಕನ್ನಡಿಗ ಕರುಣ್ ನಾಯರ್ ಕೇವಲ 1 ರನ್‌ನಿಂದ ಶತಕವಂಚಿತರಾದರೆ, ಅಂಕಿತ್ ಕಲ್ಸಿ ಶತಕ ಸಿಡಿಸುವ ಮೂಲಕ ಇಂಡಿಯಾ ರೆಡ್ ತಂಡಕ್ಕೆ ಆಸರೆಯಾದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬೆಂಗಳೂರು[ಆ.24]: ಅಂಕಿತ್ ಕಲ್ಸಿ[106] ಆಕರ್ಷಕ ಶತಕ ಹಾಗೂ ಕರುಣ್ ನಾಯರ್[99] ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಇಂಡಿಯನ್ ರೆಡ್ ತಂಡವು ಮೊದಲ ಇನಿಂಗ್ಸ್’ನಲ್ಲಿ 285 ರನ್ ಗಳಿಸಿ ಆಲೌಟ್ ಆಗಿದೆ. ಇನ್ನು ಗುರಿ ಬೆನ್ನತ್ತಿರುವ ಶುಭ್’ಮನ್ ಗಿಲ್ ನೇತೃತ್ವದ ಇಂಡಿಯಾ ಬ್ಲೂ ತಂಡ ಎರಡನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 74 ರನ್ ಬಾರಿಸಿದೆ. ಹೀಗಾಗಿ ಪಂದ್ಯ ಇನ್ನೂ ಎರಡು ದಿನ ಬಾಕಿ ಇರುವುದರಿಂದ ಎರಡೂ ತಂಡಗಳಿಗೂ ಮೇಲುಗೈ ಸಾಧಿಸಲು ಸಮಾನ ಅವಕಾಶವಿದ್ದು, ಮೂರನೇ ದಿನದಾಟ ಸಾಕಷ್ಟು ರೋಚಕತೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ದುಲೀಪ್ ಟ್ರೋಫಿ: ಟಾಸ್ ಗೆದ್ದ ಭಾರತ ಬ್ಲೂ ಫೀಲ್ಡಿಂಗ್ ಆಯ್ಕೆ
undefined
ಮೊದಲ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿದ್ದ ಭಾರತ ರೆಡ್ ತಂಡ ಎರಡನೇ ದಿನ ಆರಂಭದಲ್ಲೇ ಸೆಟ್ ಬ್ಯಾಟ್ಸ್’ಮನ್ ಕರುಣ್ ನಾಯರ್ ವಿಕೆಟ್ ಕಳೆದುಕೊಂಡಿತು. ಮೊದಲ ದಿನ 92 ರನ್ ಬಾರಿಸಿದ್ದ ಕರುಣ್, ತನ್ನ ವಯುಕ್ತಿಕ ಖಾತೆಗೆ ಇನ್ನು ಕೇವಲ 7 ರನ್ ಸೇರಿಸಿ ಶತಕದ ಹೊಸ್ತಿಲಲ್ಲಿದ್ದಾಗ ಸೌರಭ್ ಕುಮಾರ್ ಬೌಲಿಂಗ್’ನಲ್ಲಿ ಸ್ಟಂಪ್’ಔಟ್ ಆಗಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಅಂಕಿತ್ ಕಲ್ಸಿ ಅವರೊಂದಿಗಿನ 137 ರನ್’ಗಳ ಜತೆಯಾಟಕ್ಕೆ ತೆರೆಬಿತ್ತು. ಇದರ ಬೆನ್ನಲ್ಲೇ ಕ್ರೀಸ್’ಗಿಳಿದ ಹರ್ಪ್ರೀತ್ ಸಿಂಗ್ ಕೇವಲ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಜತೆಯಾದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಇಶನ್ ಕಿಶನ್ ಜತೆ ಮತ್ತೊಂದು ಉಪಯುಕ್ತ ಇನಿಂಗ್ಸ್ ಕಟ್ಟಿದ ಕಲ್ಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಅರ್ಧಶತಕ ಸಿಡಿಸಿ ಕಿಶನ್ ಪೆವಿಲಿಯನ್ ಸೇರಿದರು. ಆ ಬಳಿಕ ಇಂಡಿಯಾ ರೆಡ್ ಪರ ಯಾವೊಬ್ಬ ಬ್ಯಾಟ್ಸ್’ಮನ್ ಕೂಡಾ ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಕೆಚ್ಚೆದೆಯ ಹೋರಾಟ ನೀಡಿದ ಹಿಮಾಚಲ ಪ್ರದೇಶದ ಅಂಕಿತ್ ಕಲ್ಸಿ 345 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 106 ರನ್ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
ಶಾಕ್ ಕೊಟ್ಟ ಉನಾದ್ಕತ್: ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಡಿಯಾ ಬ್ಲೂ ತಂಡಕ್ಕೆ ವೇಗಿ ಜಯದೇವ್ ಉನಾದ್ಕತ್ ಶಾಕ್ ನೀಡುವಲ್ಲಿ ಯಶಸ್ವಿಯಾದರು. ಆರಂಭಿಕ ಬ್ಯಾಟ್ಸ್’ಮನ್ ಸ್ನೆಲ್ ಪಟೇಲ್[0] ಹಾಗೂ ನಾಯಕ ಶುಭ್’ಮನ್ ಗಿಲ್[9] ಅವರನ್ನು ಪೆವಿಲಿಯನ್’ಗಟ್ಟುವಲ್ಲಿ ಯಶಸ್ವಿಯಾದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಋತುರಾಜ್ ಗಾಯಕ್ವಾಡ್’ಗೆ ಆವೇಶ್ ಖಾನ್ ಪೆವಿಲಿಯನ್ ಹಾದಿ ತೋರಿಸಿದರು. ಇದೀಗ ಅಂಕಿತ್ ಭಾವ್ನೆ[15], ಅನ್’ಮೋಲ್’ಪ್ರೀತ್ ಸಿಂಗ್[6] ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಇಂಡಿಯಾ ರೆಡ್: 285/10
ಅಂಕಿತ್ ಕಲ್ಸಿ: 106
ದಿವೀಸ್: 55/4
ಇಂಡಿಯಾ ಬ್ಲೂ: 74/3
ಋತುರಾಜ್ ಗಾಯಕ್ವಾಡ್: 37
ಜಯದೇವ್ ಉನಾದ್ಕತ್: 18/2
[* ಎರಡನೇ ದಿನದಾಟದಂತ್ಯಕ್ಕೆ]