ಇಂದು ದೋಹಾದಲ್ಲಿ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಸ್ಪರ್ಧೆ ಆರಂಭ
ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮೇಲೆ ಎಲ್ಲರ ಚಿತ್ತ
ಜ್ಯುರಿಚ್‌ನ ಡೈಮಂಡ್ ಲೀಗ್ ಫೈನಲ್ನಲ್ಲಿ ಚಾಂಪಿಯನ್ ಆಗಿದ್ದ ನೀರಜ್ ಚೋಪ್ರಾ
ದೋಹಾ(ಮೇ.05): ಭಾರತದ ತಾರಾ ಜಾವೆಲಿನ್ ಎಸೆತಗಾರ, ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಶುಕ್ರವಾರ ದೋಹಾ ಡೈಮಂಡ್ ಲೀಗ್ನಲ್ಲಿ ಸ್ಪರ್ಧಿಸಲಿದ್ದು, ಈ ಬಾರಿ ಕಠಿಣ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ. ಒಲಿಂಪಿಕ್ ಚಾಂಪಿಯನ್ ಕೂಡಾ ಆಗಿರುವ 25 ವರ್ಷದ ನೀರಜ್ ವಿರುದ್ಧ ಹಾಲಿ ವಿಶ್ವ ಚಾಂಪಿಯನ್ ಗ್ರೆನಾಡದ ಆ್ಯಂಡರ್ಸನ್ ಪೀಟರ್ಸ್, ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತ ಚೆಕ್ ಗಣರಾಜ್ಯದ ಜಾಕುಬ್ ಕೂಡಾ ಸ್ಪರ್ಧಿಸಲಿದ್ದಾರೆ.
ನೀರಜ್ ಕಳೆದ ವರ್ಷ ಜ್ಯುರಿಚ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ಫೈನಲ್ನಲ್ಲಿ ಚಾಂಪಿಯನ್ ಆಗಿ, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಇದೀಗ ದೋಹಾದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 90 ಮೀಟರ್ ದೂರ ಜಾವೆಲಿನ್ ಎಸೆಯುತ್ತಾರಾ ಎನ್ನುವ ಕುತೂಹಲ ಜೋರಾಗಿದೆ.
ವಿಶ್ವ ಬಾಕ್ಸಿಂಗ್: ಭಾರತದ ಮೂವರು ಪ್ರಿ ಕ್ವಾರ್ಟರ್ಗೆ
ತಾಷ್ಕೆಂಟ್: ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮತ್ತೆ ಮೂವರು ಬಾಕ್ಸರ್ಗಳು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ 92+ ಕೆ.ಜಿ. ವಿಭಾಗದಲ್ಲಿ ನರೇಂದರ್ ತಜಕಿಸ್ತಾನದ ಅಬ್ರೊರಿದಿನೊವ್ರನ್ನು 4-1ರಿಂದ ಮಣಿಸಿ ಮುಂದಿನ ಸುತ್ತಿಗೇರಿದರು. ಇದೇ ವೇಳೆ 48 ಕೆ.ಜಿ. ವಿಭಾಗದಲ್ಲಿ ಗೋವಿಂದ್ ಸಹಾನಿ ತಜಕಿಸ್ತಾನದ ಮೆಹ್ರೊನ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರೆ, 51 ಕೆ.ಜಿ. ವಿಭಾಗದಲ್ಲಿ ದೀಪಕ್ ಕುಮಾರ್ ಈಕ್ವೆಡಾರ್ನ ಡೆಲ್ಗಾಡೊ ಲೂಯಿಸ್ರನ್ನು 5-0 ಅಂತರದಲ್ಲಿ ಸೋಲಿಸಿ ಪ್ರಿ ಕ್ವಾರ್ಟರ್ಗೇರಿದರು.
Wrestlers Protest ಪೊಲೀಸರ ಜೊತೆ ಕುಸ್ತಿಪಟುಗಳ ‘ಕುಸ್ತಿ’! ಕಣ್ಣೀರಿಟ್ಟ ಕುಸ್ತಿಪಟುಗಳು
ಶುಕ್ರವಾರ 2 ಬಾರಿ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ಮಹಮದ್ ಹುಸ್ಮುದ್ದೀನ್(57 ಕೆ.ಜಿ.), ಒಲಿಂಪಿಯನ್ ಆಶಿಶ್ ಚೌಧರಿ(80 ಕೆ.ಜಿ.) ಹಾಗೂ ನವೀನ್ ಕುಮಾರ್(92 ಕೆ.ಜಿ.) ಪ್ರಿ ಕ್ವಾರ್ಟರ್ನಲ್ಲಿ ಸೆಣಸಲಿದ್ದಾರೆ.
ಏಷ್ಯಾಕಪ್: ಭಾರತ ಹಾಕಿ ತಂಡದಲ್ಲಿ ರಾಜ್ಯದ ಇಬ್ಬರು
ಬೆಂಗಳೂರು: ಮೇ 23ರಿಂದ ಜೂ.1ರ ವರೆಗೂ ಒಮಾನ್‌ನ ಸಲಾಲದಲ್ಲಿ ನಡೆಯಲಿರುವ ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಇಬ್ಬರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಗೋಲ್‌ಕೀಪರ್ ಮೋಹಿತ್ ಎಚ್.ಎಸ್ ಹಾಗೂ ಮಿಡ್‌ಫೀಲ್ಡರ್ ಸಿ.ಬಿ. ಪೂವಣ್ಣ, 18 ಸದಸ್ಯರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಉತ್ತಮ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡ ಟೂರ್ನಿಯಲ್ಲಿ ಪಾಕಿಸ್ತಾನ, ಜಪಾನ್, ಥಾಯ್ಲೆಂಡ್, ಚೈನೀಸ್ ತೈಪೆ ಜೊತೆ ‘ಎ’ ಗುಂಪಿನಲ್ಲಿದೆ.
ಇಂದಿನಿಂದ ಏಷ್ಯನ್ ವೇಟ್‌ಲಿಫ್ಟಿಂಗ್ ಕೂಟ
ಜಿಂಜು(ಕೊರಿಯಾ): 2024ರ ಪ್ಯಾರಿಸ್ ಒಲಿಂಪಿಕ್ಸ್ನ ಅರ್ಹತಾ ಟೂರ್ನಿಯಾಗಿರುವ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಶುಕ್ರವಾರ ಕೊರಿಯಾದಲ್ಲಿ ಚಾಲನೆ ಸಿಗಲಿದ್ದು, ಭಾರತ ಸವಾಲನ್ನು ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತೆ ಮೀರಾಬಾಯಿ ಚಾನು ಮುನ್ನಡೆಸಲಿದ್ದಾರೆ. ಭಾರತದ ಒಟ್ಟು 6 ವೇಟ್‌ಲಿಫ್ಟರ್‌ಗಳು ಕಣಕ್ಕಿಳಿಯಲಿದ್ದು, ಚಾನು 49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಬಿಂದ್ಯಾ ರಾಣಿ(55 ಕೆ.ಜಿ.), ಶುಭಂ(61 ಕೆ.ಜಿ.), ಜೆರೆಮಿ ಲಾಲ್ರಿನುಂಗಾ(67 ಕೆ.ಜಿ.), ಅಚಿಂತಾ ಶೆಹುಲಿ(73 ಕೆ.ಜಿ.) ಹಾಗೂ ನಾರಾಯಣ ಅಜಿತ್(73 ಕೆ.ಜಿ.) ಇತರ ಸ್ಪರ್ಧಿಗಳು.
ಆರ್ಚರಿ: 10 ವಿಭಾಗದಲ್ಲೂ ಭಾರತೀಯರು ಫೈನಲ್ಗೆ
ತಾಷ್ಕೆಂಟ್: ಆರ್ಚರಿ ಏಷ್ಯಾಕಪ್ 2ನೇ ಹಂತದಲ್ಲಿ ಎಲ್ಲಾ 10 ವಿಭಾಗಗಳಲ್ಲೂ ಭಾರತೀಯರು ಫೈನಲ್ ಪ್ರವೇಶಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಕೂಟದಲ್ಲಿ ಗುರುವಾರ ರೀಕರ್ವ್ ಮಿಶ್ರ ತಂಡ ವಿಭಾಗದಲ್ಲಿ ಮೃನಾಲ್ ಚೌಹಾಣ್-ಸಂಗೀತ ಜೋಡಿ ಉಜ್ಬೇಕಿಸ್ತಾನ ವಿರುದ್ಧ ಗೆದ್ದು ಫೈನಲ್ಗೇರಿದ್ದು, ಚೀನಾದ ಜೋಡಿ ವಿರುದ್ಧ ಶುಕ್ರವಾರ ಚಿನ್ನದ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ.
ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಅಭಿಷೇಕ್-ಪರ್ನೀತ್ ಕೌರ್ ಜೋಡಿ ಸೆಮಿಫೈನಲ್ನಲ್ಲಿ ಇರಾಕ್ ಜೋಡಿ ವಿರುದ್ಧ ಜಯಿಸಿತು. ಫೈನಲ್ನಲ್ಲಿ ಇವರಿಗೆ ಕಜಸ್ತಾನ ಜೋಡಿಯ ಸವಾಲು ಎದುರಾಗಲಿದೆ. ಈಗಾಗಲೇ ಭಾರತ ನಾಲ್ಕು ತಂಡ ವಿಭಾಗ, ಪುರುಷ ಹಾಗೂ ಮಹಿಳೆಯರ ಕಾಂಪೌಡ್ ವೈಯಕ್ತಿಕ ವಿಭಾಗ ಮತ್ತು ರೀಕರ್ವ್ ವೈಯಕ್ತಿಕ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದೆ.