FIFA World Cup 2022 Prize Money: ಫುಟ್‌ಬಾಲ್‌-ಕ್ರಿಕೆಟ್‌ ವಿಶ್ವಕಪ್‌ ಬಹುಮಾನ ಮೊತ್ತ ಅಜಗಜಾಂತರ!

By Santosh NaikFirst Published Nov 19, 2022, 4:07 PM IST
Highlights

ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ತಂಡಕ್ಕೆ 13 ಕೋಟಿ ರೂಪಾಯಿ ಬಹುಮಾನ ನೀಡಲಾಗಿದೆ. ಸಂಪೂರ್ಣ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆದಿತ್ತು. ಇನ್ನು ಕತಾರ್‌ನ ಆತಿಥ್ಯದಲ್ಲಿ ನಾಳೆಯಿಂದ ಫಿಫಾ ವಿಶ್ವಕಪ್‌ ಆರಂಭವಾಗಲಿದೆ. ಟಿ20 ವಿಶ್ವಕಪ್‌ನ ವಿಜೇತ ತಂಡಕ್ಕಿಂತ 26 ಪಟ್ಟು ಹೆಚ್ಚು ಮೊತ್ತದ ಹಣವನ್ನು ಫಿಫಾ ವಿಶ್ವಕಪ್‌ ವಿಜೇತ ತಂಡ ಪಡೆದುಕೊಳ್ಳಲಿದೆ.

ದೋಹಾ (ನ.19): ಟಿ20 ವಿಶ್ವಕಪ್‌ ಮುಕ್ತಾಯವಾಗಿದೆ. ನಾಳೆಯಿಂದ 2022ರ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ಆರಂಭವಾಗಲಿದೆ. ಭಾನುವಾರದಿಂದ ಗಲ್ಫ್‌ ರಾಷ್ಟ್ರ ಕತಾರ್‌ನಲ್ಲಿ ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದ್ದು, ಡಿಸೆಂಬರ್‌ 18ಕ್ಕೆ ವಿಶ್ವಕಪ್‌ ಟೂರ್ನಿಯ ಫೈನಲ್‌ ನಡೆಯಲಿದೆ. ಇದೇ ಮೊದಲ ಬಾರಿಗೆ ಮಧ್ಯಪ್ರಾಚ್ಯ ದೇಶದಲ್ಲಿ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ನಡೆಯಲಿದೆ. ಫಿಫಾ ವಿಶ್ವಕಪ್‌ ಫುಟ್‌ಬಾಲ್‌ನ  ಟೂರ್ನಿಯಲ್ಲಿ ಒಟ್ಟು 32 ತಂಡಗಳು ಭಾಗವಹಿಸಲಿದೆ. ಏಷ್ಯಾ ಖಂಡದಿಂದ ಆರು ತಂಡಗಳು ಭಾಗವಹಿಸಲಿದೆ. ಇನ್ನು ಕ್ರಿಕೆಟ್‌ನ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಹಾಗೂ ರನ್ನರ್‌ಅಪ್‌ ಸೇರಿದಂತೆ ಎಲ್ಲಾ ತಂಡಗಳಿಗೆ ಬಹುಮಾನ ಹಣ ನೀಡಲಾಗಿತ್ತು. ಆದರೆ, ಫಿಫಾ ವಿಶ್ವಕಪ್‌ನಲ್ಲಿ ನೀಡುವ ಹಣಕ್ಕೆ ಹೋಲಿಸಿದರೆ, ಟಿ20ಯ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಬಹುಮಾನ ಮೊತ್ತದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಸಾಮಾನ್ಯವಾಗಿ ಕ್ರಿಕೆಟ್‌ ಹಾಗೂ ಫುಟ್‌ಬಾಲ್‌ ವಿಶ್ವಕಪ್‌ಗೆ ಹೋಲಿಕೆ ಸಲ್ಲವಾದರೂ, ಕೆಲವೇ ದಿನಗಳ ಅಂತರದಲ್ಲಿ ಎರಡು ವಿಶ್ವಕಪ್‌ ಆರಂಭವಾಗಲಿರುವ ಕಾರಣ ಈ ಹೋಲಿಕೆ ನೀಡಲಾಗಿದೆ.

ಟಿ20 ವಿಶ್ವಕಪ್‌ಗಿಂತ 26 ಪಟ್ಟು ಹೆಚ್ಚು ಬಹುಮಾನ ಮೊತ್ತ: ಕ್ರಿಕೆಟ್‌ ವಿಶ್ವಕಪ್‌ ಹಾಗೂ ಫುಟ್‌ಬಾಲ್‌ ವಿಶ್ವಕಪ್‌ನಲ್ಲಿ ವಿಜೇತ ತಂಡಗಳು ಪಡೆದುಕೊಳ್ಳಲಿರುವ ಬಹುಮಾನ ಮೊತ್ತದ ಬಗ್ಗೆ ಅಭಿಮಾನಿಗಳನ್ನೂ ಕುತೂಹಲವಿರುತ್ತದೆ. ಆದರೆ, ಈ ಎರಡೂ ವಿಶ್ವಕಪ್‌ನ ಚಾಂಪಿಯನ್‌ ತಂಡಗಳು ಸ್ವೀಕರಿಸುವ ಬಹುಮಾನ ಮೊತ್ತದಲ್ಲಿ ಬರೋಬ್ಬರಿ 26 ಪಟ್ಟು ಅಂತರವಿದೆ ಎಂದರೆ ನಿಮಗೆ ಅಚ್ಚರಿಯಾಗುವುದು ಖಂಡಿತ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಈ ಬಾರಿಯ ಟಿ20 ವಿಶ್ವಕಪ್‌ನ ಬಹುಮಾನ ಮೊತ್ತವಾಗಿ 5.6 ಮಿಲಿಯನ್‌ ಅಮೆರಿಕನ್‌ ಡಾಲರ್‌ ಹಣ ಮೀಸಲಿಟ್ಟಿತ್ತು. ಅಂದರೆ 45.14 ಕೋಟಿ ರೂಪಾಯಿ.  ಈ ಹಣವನ್ನು ಭಾಗವಹಿಸಿದ ಎಲ್ಲಾ 16 ತಂಡಗಳ ನಡುವೆ ಹಂಚಲಾಗಿತ್ತು.ಫ ಫೈನಲ್‌ನಲ್ಲಿ ಚಾಂಪಿಯನ್‌ ಎನಿಸಿಕೊಂಡ ಇಂಗ್ಲೆಂಡ್‌ ತಂಡಕ್ಕೆ 13 ಕೋಟಿ ರೂಪಾಯಿ ಬಹುಮಾನ ನೀಡಿದರೆ, ರನ್ನರ್‌ಅಪ್‌ ಆಗಿರುವ ಪಾಕಿಸ್ತಾನ ತಂಡ 6.44 ಕೋಟಿ ರೂಪಾಯಿ ಪಡೆದುಕೊಂಡಿತ್ತು.

FIFA World Cup 2022 ಕಾಲ್ಚೆಂಡಿನ ಮಹಾಸಮರಕ್ಕೆ 8 ಕ್ರೀಡಾಂಗಣ ರೆಡಿ!

ಫಿಫಾ ವಿಶ್ವಕಪ್‌ ಬಹುಮಾನ ಮೊತ್ತ 3585 ಕೋಟಿ ರೂಪಾಯಿ: ಇನ್ನು ಈ ಬಾರಿಯ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಬಹುಮಾನ ಮೊತ್ತ 3585 ಕೋಟಿ ರೂಪಾಯಿ. ಭಾಗವಹಿಸುವ ಎಲ್ಲಾ 32 ತಂಡಗಳಿಗಳಿಗೂ ಫಿಫಾ ವಿಶ್ವಕಪ್‌ ಟೂರ್ನಿಯಿಂದ ಹಣ ಸಿಗಲಿದೆ. ಈಗಾಗಲೇ ಫಿಫಾ, ಈ ಬಾರಿಯ ವಿಶ್ವಕಪ್‌ 440 ಮಿಲಿಯನ್‌ ಯುಎಸ್‌ ಡಾಲರ್ ಮೊತ್ತದಲ್ಲಿ ಅಂದರೆ 3585 ಕೋಟಿ ರೂಪಾಯಿಯಲ್ಲಿ ಟೂರ್ನಿ ನಡೆಯಲಿದೆ ಎಂದು ಹೇಳಿದ್ದು, ವಿಜೇಯ ತಂಡ 42 ಮಿಲಿಯನ್‌ ಯುಎಸ್‌ ಡಾಲರ್‌ ಅಂದರೆ 342 ಕೋಟಿ ರೂಪಾಯಿಯನ್ನು ಪಡೆದುಕೊಳ್ಳಲಿದೆ. 2018ರ ಫಿಫಾ ವಿಶ್ವಕಪ್‌ಗಿಂತ ಈ ಬಾರಿಯ ವಿಶ್ವಕಪ್‌ನ ಬಹುಮಾನ ಮೊತ್ತ 4 ಮಿಲಿಯನ್‌ ಏರಿಕೆಯಾಗಿದೆ ಎಂದು ಫಿಫಾ ತಿಳಿಸಿದೆ.

ಮರಡೋನಾ 'ಹ್ಯಾಂಡ್‌ ಆಫ್‌ ಗಾಡ್‌' ಚೆಂಡು 19 ಕೋಟಿ ರುಪಾಯಿಗೆ ಸೇಲ್..!

ಟಿ20 ವಿಶ್ವಕಪ್‌ಗಿಂತ ಐಪಿಎಲ್‌ ಚಾಂಪಿಯನ್‌ಗೆ ಗರಿಷ್ಠ ಹಣ: ಟಿ20 ಚಾಂಪಿಯನ್‌ ತಂಡ ಕೇವಲ ಫಿಫಾ ವಿಶ್ವಕಪ್‌ಗಿಂತ ಮಾತ್ರವಲ್ಲ ಐಪಿಎಲ್‌ ಚಾಂಪಿಯನ್‌ ತಂಡಕ್ಕಿಂತಲೂ ಕಡಿಮೆ ಹಣ ಪಡೆಯುತ್ತದೆ.  2022ರ ಐಪಿಎಲ್‌ನಲ್ಲಿ ಚಾಂಪಿಯನ್‌ ಆದ ಗುಜರಾತ್‌ ಟೈಟಾನ್ಸ್‌ ತಂಡ 20 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದ್ದರೆ, ಟಿ20 ವಿಶ್ವಕಪ್‌ ವಿಜೇತ ತಂಡ ಇದಕ್ಕಿಂತ 7 ಕೋಟಿ ಹಣ ಕಡಿಮೆ ಪಡೆದುಕೊಂಡಿದೆ. ಇನ್ನು ಫಿಫಾ ವಿಶ್ವಕಪ್‌ನಲ್ಲಿ ಕೊನೇ ಸ್ಥಾನ ಅಂದರೆ 32ನೇ ಸ್ಥಾನ ಪಡೆಯುವ ತಂಡ ಬರೋಬ್ಬರಿ 72 ಕೋಟಿ ರೂಪಾಯಿ ಬಹುಮಾನ ಪಡೆದುಕೊಳ್ಳಲಿದೆ. ಆದರೆ, ಈ ಬಾರಿಯ ಟಿ20 ವಿಶ್ವಕಪ್‌ ಅಂದಾಜು 45.14 ಕೋಟಿ ರೂಪಾಯಿಯಲ್ಲಿ ನಡೆದಿತ್ತು.

click me!