ಅರ್ಬಾಜ್ ಖಾನ್ ಸಂಸಾರಕ್ಕೆ ಬೆಂಕಿ ಇಟ್ಟಿದ್ದು ಇದೇ ಐಪಿಎಲ್ ಬೆಟ್ಟಿಂಗ್!

First Published Jun 3, 2018, 4:29 PM IST
Highlights

ನಟ ಅರ್ಬಾಜ್ ಖಾನ್ ಹಾಗೂ ಅವರ ಮಾಜಿ ಪತ್ನಿ ಮಲೈಕಾ ಅರೋರಾ ನಡುವಿನ ಸಂಬಂಧ ಮುರಿದುಬೀಳಲು ಇದೇ ಐಪಿಎಲ್ ಬೆಟ್ಟಿಂಗ್ ಕಾರಣ ಅನ್ನೋ ಮಾಹಿತಿಗಳು ಹೊರಬಿದ್ದಿವೆ. ಪದೇ ಪದೇ ಐಪಿಎಲ್ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕಾರಣ ಅರ್ಬಾಜ್ ಹಾಗೂ ಮಲೈಕಾ ಸಂಸಾರ ವಿಚ್ಚೇಧನ ಪಡೆದುಕೊಳ್ಳುವಂತಾಯಿತು.

ಮುಂಬೈ(ಜೂನ್.3)ಐಪಿಎಲ್ ಪಂದ್ಯಾವಳಿ ವೇಳೆ ಬೆಟ್ಟಿಂಗ್ ನಡೆಸಿರೋದಾಗಿ ತಪ್ಪೋಪ್ಪಿಕೊಂಡಿರುವ ಬೆನ್ನಲ್ಲೇ, ಬಾಲಿವುಡ್ ನಟ  ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ ತೆರೆ ಹಿಂದಿನ ವಿಚಾರಗಳು ಬಯಲಾಗತೊಡಗಿದೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಸಂಸಾರದಲ್ಲಿ ಬಿರುಗಾಳಿ ಎಳಲು ಇದೇ ಬೆಟ್ಟಿಂಗ್ ಕಾರಣ ಎನ್ನಲಾಗುತ್ತಿದೆ.

ನಟ ಅರ್ಬಾಜ್ ಖಾನ್ ಹಾಗೂ ಅವರ ಮಾಜಿ ಪತ್ನಿ ಮಲೈಕಾ ಅರೋರ ನಡುವಿನ ಸಂಬಂಧ ಹಳಸಲು ಇದೇ ಐಪಿಎಲ್ ಬೆಟ್ಟಿಂಗ್ ಕಾರಣವಾಗಿದೆ.  ಅರ್ಬಾಜ್ ಖಾನ್ ಅವರ ಬೆಟ್ಟಿಂಗ್ ಚಾಳಿಯಿಂದ ದಂಪತಿಗಳ ನಡುವೆ ಹಲವು ಬಾರಿ ಜಗಳಗಳಾಗಿವೆ. ಬೆಟ್ಟಿಂಗ್ ದಂಧೆಯಿಂದ ಹೊರಬರಲು ಮಲೈಕಾ ಹಲವು ಬಾರಿ ಸೂಚಿಸಿದ್ದಾರೆ. ಇಷ್ಟೇ ಅಲ್ಲ, ಇದೇ ಕಾರಣಕ್ಕಾಗಿ ಇವರಿಬ್ಬರು ಹಲವು ತಿಂಗಳುಗಳ ಕಾಲ ಮಾತು ಕೂಡ ಬಿಟ್ಟಿದ್ದರು. 

ಅರ್ಬಾಜ್ ಖಾನ್ ಐಪಿಎಲ್ ಬೆಟ್ಟಿಂಗ್ ನಿಲ್ಲಿಸಲು ತಂದೆ ಸಲೀಮ್ ಖಾನ್, ಸಹೋದದರ ಸಲ್ಮಾನ್ ಖಾನ್ ಹಾಗೂ ಸೋಹಿಲ್ ಖಾನ್ ಅನೇಕ ಬಾರಿ ಪ್ರಯತ್ನಿಸಿದ್ದರು.  ಆದರೆ ಬೆಟ್ಟಿಂಗ್‌ನಲ್ಲಿ ಕಳೆದುಕೊಂಡಿದ್ದ ಹಣವನ್ನ ಮರಳಿ ಪಡೆಯಲು ಮತ್ತೆ ಮತ್ತೆ ಬೆಟ್ಟಿಂಗ್ ಮಾಡುತ್ತಿದ್ದರು. ಅರ್ಬಾಜ್ ಹಾಗು ಮಲೈಕಾ ದಂಪತಿಗಳ ನಡುವೆ ಬೆಟ್ಟಿಂಗ್‌ನಿಂದ ಆರಂಭಗೊಂಡ ಜಗಳ ತಾರಕಕ್ಕೇರಿ 2017ರಲ್ಲಿ ಇವರಿಬ್ಬರು ವಿಚ್ಚೇಧನ ಪಡೆದಿದ್ದರು. 

ಮೇ 16ರಂದು ಮುಂಬೈನ ಥಾಣೆ ಪೊಲೀಸರು ಐಪಿಎಲ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದೊಂಬಿವಿಲಿಯಲ್ಲಿರುವ ಕಟ್ಟದ ಮೇಲೆ ದಾಳಿ ನಡೆಸಿ ಮೂವರನ್ನ ಬಂಧಿಸಿದ್ದರು. ಇವರ ವಿಚಾರಣೆ ಬಳಿಕ ಇಬ್ಬರು ಬುಕ್ಕಿಗಳನ್ನ ಬಂಧಿಸಲಾಗಿತ್ತು. ಇನ್ನು ಮೇ 29 ರಂದು ಥಾಣೆಯ ಕಲ್ಯಾಣ್ ಸೆಷನ್ಸ್ ಆವರಣದಲ್ಲಿ ಪ್ರಮುಖ ಬುಕ್ಕಿ ಸೋನು ಜಲನ್‌ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಜಲನ್ ಅರ್ಬಾಜ್ ಖಾನ್ ಹೆಸರು ಬಾಯ್ಬಿಬಿಟ್ಟಿದ್ದ. ಹೀಗಾಗಿ ಥಾಣೆ ಪೊಲೀಸರು ಅರ್ಬಾಜ್ ಖಾನ್‌ಗೆ ಸಮನ್ಸ್ ಜಾರಿ ಮಾಡಿದ್ದರು. 

ಜೂನ್ 2 ರಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಅರ್ಬಾಜ್ ಖಾನ್ ಐಪಿಎಲ್ ಬೆಟ್ಟಿಂಗ್ ನಡೆಸಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ಬೆಟ್ಟಿಂಗ್ ನಡೆಸುತ್ತಿರೋದಾಗಿ ಅರ್ಬಾಜ್ ಹೇಳಿದ್ದಾರೆ. ಇಷ್ಟೇ ಅಲ್ಲ ಬೆಟ್ಟಿಂಗ್‌ನಿಂದ 2.8 ಕೋಟಿ ರೂಪಾಯಿ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಅರ್ಬಾಜ್ ಖಾನ್ ಹೇಳಿಕೆಗಳನ್ನ ದಾಖಲಿಸಿಕೊಂಡಿರುವ ಥಾಣೆ ಪೊಲೀಸರು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ.  

click me!