
ಮುಂಬೈ(ಜೂನ್.3): ಐಪಿಎಲ್ ಟೂರ್ನಿ ಕ್ರಿಕೆಟ್ ಪ್ರೇಮಿಗಳನ್ನ ಆವರಿಸಿಕೊಂಡು ಬಿಟ್ಟಿದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಹಬ್ಬ ಇನ್ನೊಂದಿಲ್ಲ. ಆದರಲ್ಲೂ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ವಾಪಾಸ್ಸಾಗಿರೋದು ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ. 11ನೇ ಆವೃತ್ತಿ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಕಾಯುತ್ತಿರುವ ಅಭಿಮಾನಿಗಳು ಬೇಸರವಾಗೋದು ಖಚಿತ.
2019ರಲ್ಲಿ ನಡೆಯಲಿರುವ 12ನೇ ಆವೃತ್ತಿ ಐಪಿಎಲ್ ಟೂರ್ನಿ ಭಾರತದಲ್ಲಿ ಆಯೋಜನೆಗೊಳ್ಳುವ ಸಾಧ್ಯತೆ ಕಡಿಮೆ. ಕಾರಣ 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಸಂಪೂರ್ಣವಾಗಿ ಟೂರ್ನಿಯನ್ನ ಭಾರತದಲ್ಲಿ ಆಯೋಜಿಸುವುದು ಕಷ್ಟ. ಖಾಸಗಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಐಪಿಎಲ್ ಚೇರ್ಮೆನ್ ರಾಜೀವ್ ಶುಕ್ಲಾ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆಯೋಜನೆ ಕುರಿತು ಸುಳಿವು ನೀಡಿದ್ದಾರೆ. 2019ರ ಐಪಿಎಲ್ ಟೂರ್ನಿ ವೇಳೆ ಲೋಕಸಭಾ ಚುನಾವಣೆ ದಿನಾಂಕ ನಿಗಧಿಯಾದರೆ, ಭದ್ರತೆ ಕಷ್ಟವಾಗಲಿದೆ. ಹೀಗಾದಲ್ಲಿ ಟೂರ್ನಿಯನ್ನ ಭಾರತದಿಂದ ದುಬೈಗೆ ವರ್ಗಾಯಿಸಲಾಗುವುದು ಎಂದು ಶುಕ್ಲಾ ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆ ವೇಳೆ ಐಪಿಎಲ್ ಟೂರ್ನಿಯ ಮೊದಲಾರ್ಧವನ್ನ ದುಬೈನಲ್ಲಿ ಆಯೋಜಿಸಲಾಗಿತ್ತು. ಚುನಾವಣೆಯ ಬಳಿಕ ಟೂರ್ನಿಯನ್ನ ಭಾರತದಲ್ಲಿ ಮುಂದುವರಿಸಲಾಯಿತು. ಇನ್ನು 2009ರಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಡೀ ಟೂರ್ನಿಯನ್ನ ಸೌತ್ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು. ಇದೀಗ 2019ರ ಲೋಕಸಭಾ ಚುನಾವಣೆಯ ಕಾರಣದಿಂದ ಐಪಿಎಲ್ ಮೂರನೇ ಬಾರಿಗೆ ಸ್ಥಳಾಂತರವಾಗೋ ಸಾಧ್ಯತೆ ಹೆಚ್ಚಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.